ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿರುಗೇಟು ನೀಡಿದ್ದು, ಡೈವರ್ಟ್ ಪಾಲಿಟಿಕ್ಸ್ ಬೇಡ, ಗ್ರೌಂಡ್ ಲೇವಲ್‌ನಲ್ಲೇ ಕೆಲಸ ಮಾಡೋಣ ಎಂದಿದ್ದಾರೆ. ಸಂಸತ್‌ನಲ್ಲಿ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಆಗಿರುವ ಮಲತಾಯಿ ಧೋರಣೆಯ ಬಗ್ಗೆ ಚರ್ಚಿಸಿದ್ದೇನೆ ಎಂದಿದ್ದಾರೆ.

ದಾವಣಗೆರೆ (ಜು.11): ಡೈವರ್ಟ್ ಪಾಲಿಟಿಕ್ಸ್ ಬೇಡ, ಗ್ರೌಂಡ್ ಲೇವಲ್‌ನಲ್ಲೇ ಕೆಲಸ ಮಾಡೋಣ ಎಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿರುಗೇಟು ನೀಡಿದರು.

ಪ್ರತಾಪ್ ಸಿಂಹ ಅವರ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ನಮ್ಮ ಕೆಲಸದ ಬಗ್ಗೆ ಜನರು ಮಾತನಾಡಬೇಕು, ನಾನು ಆತ್ಮಾವಲೋಕನ ಮಾಡಿಕೊಳ್ಳುವ ವ್ಯಕ್ತಿ. ಎಲ್ಲಾ ಕ್ಷೇತ್ರದ ಜನರು ನನ್ನ ಭೇಟಿಯಾಗುತ್ತಾರೆ. ಸರ್ಕಾರಿ ಕಾಲೇಜಿನ ಪಿಯು ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ, ನೀಟ್ ಕೋಚಿಂಗ್ ವಿಚಾರವಾಗಿಯೂ ಬರ್ತಾರೆ ಎಂದರು.

ಸಂಸದರಾಗಿ ನಮಗೂ ಜವಾಬ್ದಾರಿಗಳಿವೆ:

ಸಂಸದರಾಗಿ ತಮ್ಮ ಜವಾಬ್ದಾರಿಯನ್ನು ವಿವರಿಸಿದ ಅವರು, ಸಂಸತ್‌ನಲ್ಲಿ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಆಗಿರುವ ಮಲತಾಯಿ ಧೋರಣೆಯ ಬಗ್ಗೆ ಚರ್ಚಿಸಿದ್ದೇನೆ. ವಿಪಕ್ಷ ಸದಸ್ಯೆಯಾಗಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ ಸಂಸದರಾಗಿ ನಮಗೂ ಜವಾಬ್ದಾರಿಗಳಿವೆ. ನನ್ನ ಕೆಲಸವನ್ನು ಜನರು ತೀರ್ಮಾನಿಸಲಿ ಎಂದರು.

ಅಡ್ಜಸ್ಟ್‌ಮೆಂಟ್ ರಾಜಕಾರಣದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸೋತ ಮೇಲೆ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಾರೆ. ಬಿಜೆಪಿಯವರು ಯಾರೇ ಅಭ್ಯರ್ಥಿಯಾದರೂ ಮೋದಿಯ ಹೆಸರಿನಲ್ಲಿ ವೋಟ್ ಕೇಳುತ್ತಾರೆ, ತಮ್ಮ ಸಾಧನೆಯನ್ನು ವೈಯಕ್ತಿಕವಾಗಿ ಹೇಳಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ವಾಷಿಂಗ್ ಮಷೀನ್ ಇಟ್ಕೊಂಡಿದೆ. ಯಾವುದೇ ಪಕ್ಷದವರು ಬಿಜೆಪಿಗೆ ಸೇರಿದರೆ ಐಟಿ, ಇಡಿ ಕೇಸ್‌ಗಳು ಸ್ವಚ್ಛವಾಗುತ್ತವೆ ಎಂದು ಪರೋಕ್ಷವಾಗಿ ಇಡಿ, ಐಟಿ ವಾಷಿಂಗ್ ಮಷಿನ್ ನಂತೆ ಕೆಲಸ ಮಾಡುತ್ತಿವೆ ಎಂದು ವ್ಯಂಗ್ಯವಾಡಿದರು.

ಇನ್ನು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಅವರ ಹೇಳಿಕೆ ವಿಚಾರಕ್ಕೆ, 'ಅದನ್ನು ಅವರನ್ನೇ ಕೇಳಿ, ಎಂದು ಪ್ರಭಾ ಮಲ್ಲಿಕಾರ್ಜುನ ತಿರುಗೇಟು ನೀಡಿದರು.