ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ವಿರೋಧಿ: ಸಂಸದೆ ಪ್ರಭಾ ಮಲ್ಲಿಕಾರ್ಜುನ
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಒಂದು ದೇಶ, ಒಂದು ಚುನಾವಣೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
ದಾವಣಗೆರೆ (ಸೆ.20): ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಒಂದು ದೇಶ, ಒಂದು ಚುನಾವಣೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ. ನಗರದ ತಮ್ಮ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಂತಹ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಂದು ದೇಶ, ಒಂದು ಚುನಾವಣೆಯಂತಹ ವ್ಯವಸ್ಥೆ ಸರಿಯಾಗದು ಎಂದರು.
ಚುನಾವಣೆಗಳ ವೇಳೆ ಪ್ರಾದೇಶಿಕ ವಿಷಯಗಳೇ ಬೇರೆಯಾಗಿರುತ್ತದೆ. ರಾಷ್ಟ್ರೀಯ ವಿಚಾರಗಳೇ ಬೇರೆಯಾಗಿರುತ್ತವೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರವು ಒಂದು ದೇಶ ಒಂದು ಚುನಾವಣೆ ಮಾಡಲು ಹೊರಟಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದರು. ಒಂದು ದೇಶ, ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಪ್ರಸ್ತಾವವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವುದಷ್ಟೇ ಅಲ್ಲ, ಅದನ್ನು ಅನುಷ್ಠಾನಗೊಳಿಸಲು ಸಹ ಅಸಾಧ್ಯ. ಇಂತಹದ್ದೊಂದು ಮಹತ್ವದ ಪ್ರಸ್ತಾವದ ಬಗ್ಗೆ ವಿಪಕ್ಷಗಳ ಜೊತೆಗೆ ಸಮಾಲೋಚನೆಯನ್ನೂ ಮಾಡದೇ, ತರಾತುರಿಯಲ್ಲಿ ಅನುಷ್ಟಾನಕ್ಕೆ ತರಲು ಹೊರಟಿದ್ದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಭಾರತದ ಎಲ್ಲಾ ಜನರೂ ಸಂಪೂರ್ಣ ಸಾಕ್ಷರರಾಗಿಲ್ಲ. ಮತದಾನದ ಸಮಯದಲ್ಲಿ ಈ ಅಂಶವೂ ಪ್ರಧಾನವಾಗಿ ಪರಿಗಣನೆಗೆ ಬರಲಿದೆ. ಹಾಗಾಗಿ ಒಂದು ದೇಶ, ಒಂದು ಚುನಾವಣೆಗೆ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕುಮ್ಮಕ್ಕು ಕೊಟ್ಟು ಬೆಂಕಿ ಹಚ್ಚಲು ನಾಗಮಂಗಲಕ್ಕೆ ಬಂದಿಲ್ಲ: ಎಚ್‌ಡಿಕೆಗೆ ಚಲುವರಾಯಸ್ವಾಮಿ ತಿರುಗೇಟು
ದಾವಣಗೆರೆ ಮಹಾ ನಗರವನ್ನು ಸಂಪೂರ್ಣವಾಗಿ ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಗ್ರೀನ್ ದಾವಣಗೆರೆ ಪರಿಕಲ್ಪನೆ ಜಾರಿಗೊಳ್ಳಲಿದೆ. ಮಹಾ ನಗರ ಪಾಲಿಕೆಯಿಂದ ಕನಿಷ್ಟ 2 ಸಾವಿರ ಸಸಿಗಳನ್ನು ಪಾರಂಪರಿಕವಾಗಿ ನೆಟ್ಟು, ಅವುಗಳನ್ನು ಮರವನ್ನಾಗಿ ಬೆಳೆಸಲಾಗುವುದು. ಇದೇ ಗ್ರೀನ್ ದಾವಣಗೆರೆ ಕಾರ್ಯಕ್ರಮದ ಉದ್ದೇಶ.
-ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ