ದಾವಣಗೆರೆ ಜಿಲ್ಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ₹1 ಕೋಟಿಗೂ ಅಧಿಕ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. ರಂಜಿತಾ ₹5 ಲಕ್ಷದಿಂದ ₹20 ಲಕ್ಷದವರೆಗೂ ಸಾಲ ಕೊಡಿಸುವುದಾಗಿ ಹೇಳಿ ₹50 ಸಾವಿರದಿಂದ ₹4 ಲಕ್ಷವರೆಗೆ ಹಣ ಪಡೆದಿದ್ದಾರೆ.

ದಾವಣಗೆರೆ (ಜೂ. 11): ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ಕೊಡಿಸುತ್ತೇನೆ ಎಂಬ ನಂಬಿಕೆಯನ್ನು ಹುಟ್ಟುಹಾಕಿ, ದಾವಣಗೆರೆ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ ಮಾಡಿದ ಕಿಲಾಡಿ ಲೇಡಿ ರಂಜಿತಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಸಾಲದ ಹೆಸರಿನಲ್ಲಿ ಭಾರೀ ಲೂಟಿ:

ಮೂಲತಃ ಚನ್ನಗಿರಿ ತಾಲೂಕಿನ ಸೋಮಲಾಪುರದ ನಿವಾಸಿ ರಂಜಿತಾ ಎಂಬ ಯುವತಿ, ವಾಲ್ಮೀಕಿ ನಿಗಮದ ಹೆಸರಿನಲ್ಲಿ ಶೆಟ್ಟಿಗೊಂಡನಹಳ್ಳಿ, ಬಸಾಪುರ, ಚನ್ನಗಿರಿ ಸೇರಿದಂತೆ ಹಲವು ಹಳ್ಳಿಗಳ ಮಹಿಳಾ ಸಂಘಗಳನ್ನು ನಂಬಿಸಿ ‘ನಿಮಗೆ ₹5 ಲಕ್ಷ, ₹10 ಲಕ್ಷ, ₹20 ಲಕ್ಷದವರೆಗೂ ಸಬ್ಸಿಡಿ ಸಾಲ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದಳು. 

ಈ ನಂಬಿಕೆಯಲ್ಲಿ ಮಹಿಳೆಯರು ₹50 ಸಾವಿರದಿಂದ ₹4 ಲಕ್ಷದವರೆಗೂ ನಗದು ನೀಡಿ ಮೋಸಕ್ಕೆ ಬಲಿಯಾಗುದ್ದಾರೆ. ಈ ವಂಚನೆಯ ಬಗ್ಗೆ ಸಾಕ್ಷ್ಯವನ್ನೂ ಮಹಿಳೆಯರು ಬಿಡುಗಡೆ ಮಾಡಿದ್ದಾರೆ. ರಂಜಿತಾ ಮಹಿಳೆಯರಿಂದ ಹಣ ಪಡೆಯುತ್ತಿರುವ ವಿಡಿಯೋಗಳನ್ನು ಸಂತ್ರಸ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೆಲವರು 'ಮನೆಯಲ್ಲಿದ್ದ ಚಿನ್ನಾಭರಣವನ್ನೇ ಅಡವಿಟ್ಟು ಹಣ ಕೊಟ್ಟಿದ್ದೇವೆ' ಎಂದು ಕಣ್ಣೀರಿಡುತ್ತಿದ್ದಾರೆ.

ಒಂದು ಕೋಟಿಗೂ ಅಧಿಕ ವಂಚನೆ ಶಂಕೆ:

ಚಿತ್ರದುರ್ಗ ತಾಲೂಕಿನ ವಿಶಾಲಮ್ಮ ಎಂಬ ಮಹಿಳೆಯೂ ಈ ಜಾಲದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇವರ ಮೇಲೆ ಕೂಡ ಮಹಿಳೆಯರು ವಂಚನೆಯ ಆರೋಪ ಹೊರಿಸಿದ್ದಾರೆ. ಈ ವಂಚನೆಯ ಒಟ್ಟು ಮೊತ್ತ ಸುಮಾರು ₹1 ಕೋಟಿ ಮೀರಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಇನ್ನು ದೂರುದಾರ ಮಹಿಳೆಯರ ಪ್ರಕಾರ, ಸಾಲ ಸೋಲ ಮಾಡಿ ನಾವು ಹಣ ನೀಡಿದ್ದೇವೆ. ಈಗ ಅವರು ಹಣ ಕೇಳಿದರೆ, 'ನೀವು ಕೊಟ್ಟಿರುವುದಕ್ಕೆ ಸಾಕ್ಷಿ ಕೊಡಿ' ಎನ್ನುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಪೊಲೀಸರ ಮೊರೆ ಹೋಗಿದ್ದರೂ ಕೂಡ, ಕಾನೂನು ಕ್ರಮ ತಕ್ಷಣ ಕೈಗೊಂಡಿಲ್ಲ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ. ಹೀಗಾಗಿ, ತಾವು ಕೊಟ್ಟ ಹಣವನ್ನು ಪುನಃ ಪಡೆದುಕೊಳ್ಳಬೇಕೆಂದು ಅವರು ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಾಲ್ಮೀಕಿ ನಿಗಮದ ಹೆಸರಿನಲ್ಲಿ ಆರ್ಥಿಕ ನೆರವಿನ ಭರವಸೆಯ ಮೇಲೆ ನಡೆಸಲಾದ ಈ ಮೋಸದ ಘಟನೆ, ಗ್ರಾಮೀಣ ಮಹಿಳೆಯರ ನಂಬಿಕೆ ಹಾಗೂ ಬದುಕಿನ ಮೇಲೆ ನಡುಕ ಮೂಡಿಸಿದೆ. ಕಾನೂನು ರಕ್ಷಣೆ ಪಡೆಯಲು ಮಹಿಳೆಯರು ಈಗಾಗಲೇ ಹರಸಾಹಸಪಟ್ಟಿದ್ದು, ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.