ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆ, ಕೇಸರಿಯಲ್ಲಿ ಮಿಂದೆಂದ ಕಾಫಿನಾಡು!
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ದತ್ತ ಜಯಂತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಇಂದು ಹರಿದು ಬಂದ ಕೇಸರಿ ಅಲೆಯು ಬಲಿಷ್ಠಹಿಂದೂ ಶಕ್ತಿಯನ್ನು ಅನಾವರಣಗೊಳಿಸಿತು. ಸಹಸ್ರ ಸಂಖ್ಯೆಯಲ್ಲಿ ಸೇರಿದ ಮಾಲಾಧಾರಿ ಭಕ್ತರು, ಯುವಕ, ಯುವತಿಯರು, ವೃದ್ಧರು, ಮಕ್ಕಳಾದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.25): ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ದತ್ತ ಜಯಂತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಇಂದು ಹರಿದು ಬಂದ ಕೇಸರಿ ಅಲೆಯು ಬಲಿಷ್ಠಹಿಂದೂ ಶಕ್ತಿಯನ್ನು ಅನಾವರಣಗೊಳಿಸಿತು. ಸಹಸ್ರ ಸಂಖ್ಯೆಯಲ್ಲಿ ಸೇರಿದ ಮಾಲಾಧಾರಿ ಭಕ್ತರು, ಯುವಕ, ಯುವತಿಯರು, ವೃದ್ಧರು, ಮಕ್ಕಳಾದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿದರು.
ಡಿಜೆಯ ಕವಿಗಡಚಿಕ್ಕುವ ಸದ್ದು, ನಾಸಿಕ್ ಮೇಳ, ದಕ್ಷಿಣ ಕನ್ನಡದ ಚಂಡೆ ವಾದನಕ್ಕೆ ಹೆಜ್ಜೆಹಾಕಿ ಅಮಿತೋತ್ಸಾಹದಲ್ಲಿ ಮಿಂದೆದ್ದರು.ಬಾಯಲ್ಲೂ ಕೇಳಿಬಂದ ದತ್ತಪೀಠ ನಮ್ಮದೆಂಬ ಘೋಷಣೆ ಮುಗಿಲು ಮುಟ್ಟಿತು. ಬಸವನಹಳ್ಳಿ ಮುಖ್ಯರಸ್ತೆಯ ಶಂಕರ ಮಠದಿಂದ ಮತ್ತೊಂದು ತುದಿಯ ಆಜಾದ್ ಪಾರ್ಕ್ ಸರ್ಕಲ್ವರೆಗೆ ನದಿಯಂತೆ ಹರಿದುಬಂದ ಕೇಸರಿ ಕಲವರ ನೋಡುಗರನ್ನು ನಿಬ್ಬೆರಗಾಗಿಸಿತು.ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ದತ್ತಾತ್ರೇಯರು, ಶ್ರೀರಾಮ, ಆಂಜನೇಯ, ಶಿವಾಜಿ ಮಹರಾಜ, ಭಾರತ ಮಾತೆಯ ಘೋಷಣೆಗಳು ಬಾನೆತ್ತರಕ್ಕೆ ಮೊಳಗಿದವು. ಬೃಹದಾಕಾರವಾದ ಭಗವಾಧ್ವಜಗಳನ್ನು ಬೀಸಿದ ಮಕ್ಕಳು, ಯುವಕರು ಶೋಭಾಯಾತ್ರೆಗೆ ರಂಗು ತುಂಬಿದರು.
ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನ ಶಾಂತಿಯುತ ತೆರೆ; ಪೊಲೀಸ್ ಬಿಗಿಭದ್ರತೆ, ಮಳೆ ನಡುವೆ ಭಕ್ತರಿಂದ ದತ್ತಪಾದುಕೆ ದರ್ಶನ
ದಣಿವರಿಯದೆ ಉತ್ಸಾಹ
ಎದೆನಡುಗಿಸುವ ಡಿಜೆ ಸದ್ದಿಗೆ ಅಷ್ಟೇ ಉತ್ಸಾಹದಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು ದಣಿವರಿಯದೆ ನೃತ್ಯ ಮಾಡಿದರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿನಿಯರು, ಮಹಿಳೆಯರು, ಪುಟಾಣಿ ಮಕ್ಕಳು ಜೈಕಾರ ಹಾಕುತ್ತ ಕುಣಿದು ಸಂಭ್ರಮಿಸಿದರು.
ಮೆರಗು ತುಂಬಿದ ಕಲಾ ತಂಡಗಳು
ಮೆರವಣಿಗೆಯಲ್ಲಿ ಸಾಗಿ ಬಂದ ಶ್ರೀರಾಮನ ಬೃಹದಾಕಾರದ ಆಕರ್ಷಕ ಪ್ರತಿಮೆ, ಅಜಾನುಬಾಹು ಹನುಮನ ವೇಷಧಾರಿ ಸೇರಿದಂತೆ ಗಾರುಡಿ ಬೊಂಬೆಗಳು, ಮತ್ತಿತರರೆ ಕಲಾತಂಡಗಳು ಶೋಭಾಯಾತ್ರೆಯ ಸೊಬಗನ್ನು ಹೆಚ್ಚಿಸಿದವು.
ಕಣ್ತುಂಬಿಕೊಂಡ ಜನತೆ
ವರ್ಣರಂಜಿತ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಇಡೀ ನಗರದ ಜನತೆ ಎಂಜಿ ರಸ್ತೆ, ಹನುಮಂತಪ್ಪ ಸರ್ಕಲ್, ಆಜಾದ್ ವೃತ್ತಗಳಲ್ಲಿ ಕಿಕ್ಕಿರಿದು ಸೇರಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡದ ಮಹಡಿಗಳ ಮೇಲೆ ನಿಂತು ವೀಕ್ಷಿಸಿದ್ದಲ್ಲದೆ ಅಲ್ಲಿಂದಲೇ ಯುವ ಶಕ್ತಿಯನ್ನು ಹುರಿದುಂಬಿಸಿದರು.
ಗಣ್ಯರ ದಂಡು
ಬೆಳಗ್ಗೆ ದತ್ತಪೀಠಕ್ಕೆ ಭೇಟಿ ನೀಡಿ ವಾಪಾಸಾದ ವಿಧಾನ ಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ.ಟಿ.ರವಿ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಸೇರಿದಂತೆ ವಿಶ್ವಹಿಂದೂ ಪರಿಷತ್, ಬಜರಂಗದಳದ ಮುಖಂಡರುಗಳು ಮಧ್ಯಾಹ್ನ 4 ಗಂಟೆ ವೇಳೆಗೆ ಕಾಮಧೇನು ಗಣಪತಿ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ದತ್ತಾತ್ರೇಯರ ಮೂರ್ತಿಯನ್ನೊಳಗೊಂಡ ಭವ್ಯ ಪ್ರಭಾವಳಿಯೊಂದಿಗೆ ಸಾವಿರಾರು ಭಕ್ತರು ದತ್ತಾತ್ರೇಯರಿಗೆ ಜೈಕಾರ ಹಾಕುತ್ತ ಮುಂದಡಿ ಇಟ್ಟರು.
ಮುಂಚೂಣಿಯಲ್ಲಿ ಸಂಘಟಕರು
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ಸೂರ್ಯನಾರಾಯಣ್, ಮಾಜಿ ಶಾಸಕ ಡಿ.ಎನ್.ಜೀವರಾಜ್ ಸೇರಿದಂತೆ ಬಿಜೆಪಿ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.
ಸಂಚಾರ ದಟ್ಟಣೆ
ಶೋಭಾಯಾತ್ರೆಯ ಮಾರ್ಗವಾದ ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧಿಸಿದ್ದರಿಂದ ನಗರದ ವಾಹನಗಳ ಭಾರೀ ದಟ್ಟಣೆ ಅನುಭವಿಸಬೇಕಾಯಿತು. ಇತರ ಬೀದಿಗಳಲ್ಲಿ ಸಹ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸಪಡಬೇಕಾಯಿತು.
ಶ್ರೀ ರಾಮಸೇನೆ ವತಿಯಿಂದ ನಡೆಯುವ ದತ್ತ ಜಯಂತಿಗೆ ಕಾಫಿನಾಡು ಹೈಅಲರ್ಟ್
ಪೊಲೀಸ್ ಸರ್ಪಗಾವಲು
ಶೋಭಾಯಾತ್ರೆಗೆ ಸಾವಿರಾರು ಪೊಲೀಸರ ಬಿಗಿ ರಕ್ಷಣೆ ಒದಗಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂಧಿಗಳು ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಿಬ್ಬಂಧಿಗಳನ್ನು ಮೆವಣಿಗೆಯ ಎರಡೂ ಬದಿಯಲ್ಲಿ ನೇಮಿಸಲಾಗಿತ್ತು.ಪ್ರಮುಖ ವೃತ್ತಗಳಲ್ಲಿ, ರಸ್ತೆ ಬದಿಗಳಲ್ಲಿ ಬೆಳಗಿನಿಂದಲೇ ದತ್ತಾತ್ರೇಯರು, ಶ್ರೀರಾಮ, ಹನುಮಂತನ ಆಳೆತ್ತರದ ಕಟೌಟ್ಗಳು, ಕೇಸರಿ ಬಾನರ್, ಬಂಟಿಂಗ್ಗಳನ್ನು ಕಟ್ಟಿ ಶೋಭಾಯಾತ್ರೆಗೆ ಸಿದ್ಧತೆ ನಡೆಸಿದ್ದರು.