ಬೆಂಗಳೂರು: ದಸರಾ ಉದ್ಘಾಟನೆಗೆ ಇನ್ಫೋಸಿಸ್‌ನ ಸುಧಾ ಮೂರ್ತಿಯವರನ್ನು ಆಯ್ಕೆ ಮಾಡಿದ್ದಕ್ಕೆ ಅಪಸ್ವರವೆತ್ತಿದ ಚಿಂತಕಿಗೆ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು 'ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ' ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.

ಮಳೆಯಿಂದ ಕೊಡಗಿನ ಜನರು ಸಾಕಷ್ಟು ನೋವು ಅನುಭವಿಸಿದ ಹಿನ್ನೆಲೆಯಲ್ಲಿ ಈ ವರ್ಷದ ನಾಡ ಹಬ್ಬವನ್ನು ಸರಳವಾಗಿಯೇ ಚಿಂತಿಸಲು ಸರಕಾರ ನಿರ್ಧರಿಸಿದೆ. ಸರಳತೆಗೆ ಹೆಸರಾದ ಇನ್ಫೋಸಿಸ್ ಸುಧಾ ಮೂರ್ತಿಯವರನ್ನು ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಿದ ನಿರ್ಧಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ಇಂಥವರ ಆಯ್ಕೆಗೂ ಚಿಂತಕಿ ಪ್ರಭಾ ಎನ್.ಬೆಲವಂಗಲ ಅಪಸ್ವರ ಎತ್ತಿದ್ದಾರೆ.

'ದುಡ್ಡು ಮಾಡಿ ನಾಜೂಕಿನ ಮಾತು ಕಲಿತುಬಿಟ್ರೆ ದಸರಾ ಉದ್ಘಾಟನೆ ಮಾಡಬಹುದು,' ಎಂದು ಪ್ರಭಾ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು. ಇದಕ್ಕೆ ಕೆಲವರು ಪರವಾಗಿ ಪ್ರತಿಕ್ರಿಯೆ ನೀಡಿದ್ದರು, ಇನ್ನು ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಪ್ರವಾಹ ಸಂತ್ರಸ್ತರಿಗೆ ಸುಧಾ ಮೂರ್ತಿ ನೆರವು

ಪ್ರಭಾ ಅವರ ಸ್ಟೇಟಸ್ ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುರೇಶ್ ಕುಮಾರ್ ಅವರು, 'ಎಲ್ಲರೂ ಒಪ್ಪುವ ಸುಧಾಮೂರ್ತಿಯವರು ದಸರಾ ಉತ್ಸವವನ್ನು ಉದ್ಘಾಟಿಸುತ್ತಿರುವುದನ್ನು ಯಾರನ್ನೂ ಒಪ್ಪದ  "ಬುದ್ದಿವಂತೆ"ಯೊಬ್ಬರು ತಾಳಲಾರದ ಸಂಕಟದಿಂದ ಟೀಕಿಸಿದ್ದಾರೆ. ಆಗ ಅನಿಸಿದ್ದು "ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ,"' ಎಂದು ಟ್ವೀಟ್ ಮಾಡಿ, ಟಾಂಗ್ ನೀಡಿದ್ದಾರೆ.