ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆ ಇರುವ ಕಾರಣ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ತೆರಳಿದ ಪರಿಣಾಮ ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ಬೆಂಗಳೂರು (ಅ.21): ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆ ಇರುವ ಕಾರಣ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ತೆರಳಿದ ಪರಿಣಾಮ ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ವಾರಾಂತ್ಯ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರದವರೆಗೆ ರಜೆಯಿದೆ. ಹೀಗಾಗಿ ಬೆಂಗಳೂರಿನಿಂದ ಬೇರೆ ನಗರ, ಪಟ್ಟಣಗಳಿಗೆ ತೆರಳುವವರ ಸಂಖ್ಯೆ ಶುಕ್ರವಾರದಿಂದಲೇ ಹೆಚ್ಚಾಗಿತ್ತು. ಅದರ ಪರಿಣಾಮ ಶುಕ್ರವಾರ ರಾತ್ರಿ ಮೆಜೆಸ್ಟಿಕ್‌, ಶಾಂತಿನಗರ, ಮೈಸೂರು ರಸ್ತೆ ಬಸ್‌ ನಿಲ್ದಾಣ ಸೇರಿದಂತೆ ಇನ್ನಿತರ ಪಿಕಪ್‌ ಪಾಯಿಂಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಮೈಸೂರು ರಸ್ತೆ, ತುಮಕೂರು ರಸ್ತೆ, ಮೆಜೆಸ್ಟಿಕ್‌ ಸುತ್ತಲಿನ ಪ್ರದೇಶ ಸೇರಿದಂತೆ ಮತ್ತಿತರ ಪ್ರಮುಖ ಮಾರ್ಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವಂತಾಗಿತ್ತು.

ಹಿಂದೂ ಆಚರಣೆಗಳ ದ್ವೇಷಕ್ಕೆ ಒಂದಾದ ಸಿದ್ಧರಾಮಯ್ಯ-ಸ್ಟ್ಯಾಲಿನ್‌, ಆಯುಧಪೂಜೆಯೇ ಟಾರ್ಗೆಟ್‌!

ಪ್ರಯಾಣಿಕರ ಒತ್ತಡವನ್ನು ನಿಭಾಯಿಸುವ ಸಲುವಾಗಿ ಕೆಎಸ್ಸಾರ್ಟಿಸಿಯು ಶುಕ್ರವಾರದಿಂದಲೇ 500ಕ್ಕೂ ಹೆಚ್ಚಿನ ಬಸ್‌ಗಳ ಕಾರ್ಯಾಚರಣೆ ಮಾಡಿತು. ಸುಗಮ ಸೇವೆ ನೀಡಲು ಪ್ರಮುಖ ನಿಲ್ದಾಣಗಳಲ್ಲಿ ನಿಯೋಜಿಸಿದ್ದ ಹೆಚ್ಚುವರಿ ಸಿಬ್ಬಂದಿ, ಅಧಿಕಾರಿಗಳು ತಡರಾತ್ರಿ 1ರವರೆಗೆ ಕಾರ್ಯನಿರ್ವಹಿಸಿದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಂದಲೂ ತಲಾ 100 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿತ್ತು.

ಹೊರ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌

ನಗರದ ವಿವಿಧ ಬಡಾವಣೆಗಳಿಂದ ಬಸ್‌ ನಿಲ್ದಾಣಗಳ ಕಡೆಗೆ ಹೆಚ್ಚಿನ ಜನರು ಬಂದ ಹಿನ್ನೆಲೆಯಲ್ಲಿ ರಾತ್ರಿ ಕಾರ್ಯಾಚರಣೆಗಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿತ್ತು. ಚಾಮರಾಜಪೇಟೆ, ಬನಶಂಕರಿ, ಯಶವಂತಪುರ ಸೇರಿದಂತೆ ಇನ್ನಿತರ ಬಸ್‌ ನಿಲ್ದಾಣಗಳ, ಬಡಾವಣೆಗಳಿಂದ ಬಸ್‌ಗಳು ಸೇವೆ ನೀಡಿದವು. ಅಲ್ಲದೆ ಕೆಲ ಬಿಎಂಟಿಸಿ ಬಸ್‌ಗಳನ್ನು ಶಿವಮೊಗ್ಗ, ತುಮಕೂರು, ರಾಮನಗರ, ಕೋಲಾರ ಸೇರಿದಂತೆ ಬೆಂಗಳೂರು ಸುತ್ತಲಿನ ಜಿಲ್ಲೆಗಳಿಗೂ ಸೇವೆ ನೀಡುವಂತೆ ವ್ಯವಸ್ಥೆ ಮಾಡಲಾಗಿತ್ತು.

ನಾಡಹಬ್ಬ ದಸರಾ ಜೀವಂತ ಮಹಾಕಾವ್ಯ: ನಾದ ಬ್ರಹ್ಮ ಹಂಸಲೇಖ ಮಾತು

ಖಾಸಗಿ ಬಸ್‌ಗಳಿಂದ ಹೆಚ್ಚುವರಿ ದರ ವಸೂಲಿ

ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಮಿತಿಮೀರಿ ಟಿಕೆಟ್‌ ದರ ವಸೂಲಿ ಮಾಡಿದವು. ಸಾರಿಗೆ ಇಲಾಖೆ ಎಚ್ಚರಿಕೆಯನ್ನೂ ಲೆಕ್ಕಿಸದೆ ಖಾಸಗಿ ಬಸ್‌ ಮಾಲೀಕರು ಶುಕ್ರವಾರ ರಾತ್ರಿಯಿಂದ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿದರು. ಅದರಲ್ಲೂ ಶಿವಮೊಗ್ಗ, ಮಂಗಳೂರು, ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಮತ್ತಿತರ ನಗರಗಳಿಗೆ ಸಂಚರಿಸುವ ಬಸ್‌ಗಳ ಪ್ರಯಾಣ ದರ ಮಾಮೂಲಿ ದರಕ್ಕಿಂತ ದುಪ್ಪಟ್ಟು ವಸೂಲಿ ಮಾಡಲಾಯಿತು.