ಸಿಲಿಕಾನ್‌ ಸಿಟಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ಕಿಕ್ಕಿರಿದು ಸೇರಿ ಹಬ್ಬದ ಸಾಮಗ್ರಿಗಳ ಖರೀದಿಸಿದ್ದಾರೆ. ನಗರದ ಪ್ರಮುಖ ದೇವಸ್ಥಾನಗಳು ವಿಶೇಷ ಪೂಜೆಗೆ ಅಣಿಯಾಗಿವೆ. ಈ ನಡುವೆ ಹೂವು, ಹಣ್ಣು ಹಾಗೂ ಕೆಲವು ತರಕಾರಿಗಳ ಬೆಲೆ ಕೊಂಚ ಏರಿಕೆಯಾಗಿದೆ.

ಬೆಂಗಳೂರು (ಅ.23) : ಸಿಲಿಕಾನ್‌ ಸಿಟಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ಕಿಕ್ಕಿರಿದು ಸೇರಿ ಹಬ್ಬದ ಸಾಮಗ್ರಿಗಳ ಖರೀದಿಸಿದ್ದಾರೆ. ನಗರದ ಪ್ರಮುಖ ದೇವಸ್ಥಾನಗಳು ವಿಶೇಷ ಪೂಜೆಗೆ ಅಣಿಯಾಗಿವೆ. ಈ ನಡುವೆ ಹೂವು, ಹಣ್ಣು ಹಾಗೂ ಕೆಲವು ತರಕಾರಿಗಳ ಬೆಲೆ ಕೊಂಚ ಏರಿಕೆಯಾಗಿದೆ.

ಸೋಮವಾರದ ಆಯುಧ ಪೂಜೆ ಮತ್ತು ಮಂಗಳವಾರದ ವಿಜಯದಶಮಿ ಹಿನ್ನೆಲೆಯಲ್ಲಿ ಹಣ್ಣು ಹಾಗೂ ತರಕಾರಿ ಖರೀದಿಗೆ ಜನ ಮುಂದಾಗಿದ್ದರು. ಸರ್ಕಾರಿ ರಜೆ ಇರುವುದರಿಂದ ಬಹುತೇಕ ಕಚೇರಿ, ಕಾಲೇಜುಗಳು, ವ್ಯಾಪಾರಿ ಮಳಿಗೆ, ಗೋದಾಮು, ಫ್ಯಾಕ್ಟರಿಗಳಲ್ಲಿ ಶನಿವಾರವೇ ಪೂಜೆಗಳು ನಡೆದವು. ಸೋಮವಾರ ಮನೆ ಮನೆಗಳಲ್ಲಿ ಪೂಜೆ ನಡೆಯಲಿದ್ದು, ಅಗತ್ಯ ಪೂಜಾ ಪರಿಕರಗಳ ಖರೀದಿಗಾಗಿ ಜನ ಮಾರುಕಟ್ಟೆಗಳತ್ತ ಧಾವಿಸಿದ್ದರು.

ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 49 ಸ್ತಬ್ಧಚಿತ್ರ

ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿಬಜಾರ್, ಮಡಿವಾಳ, ಚಿಕ್ಕಪೇಟೆ, ಜಯನಗರ, ಶಿವಾಜಿನಗರ ಮಾರುಕಟ್ಟೆಯಲ್ಲಿ ಖರೀದಿ ಭರ್ಜರಿಯಾಗಿ ವ್ಯಾಪಾರ ನಡೆಯಿತು. ಮಾರುಕಟ್ಟೆಗಳಲ್ಲಿ ಎತ್ತ ಕಣ್ಣಾಡಿಸಿದರೂ ಬೂದಕುಂಬಳ ಕಾಯಿ, ಬಾಳೆ ಕಂದುಗಳು ಕಂಡು ಬಂದವು. ಬಿಸಿಲಿನ ನಡುವೆಯು ಮಾರುಕಟ್ಟೆಗಳಲ್ಲಿ ಜನಜಂಗುಳಿ ಜೋರಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ನಗರದ ಬನಶಂಕರಿ, ಬಸವನಗುಡಿ, ಹೆಬ್ಬಾಳ, ಮಲ್ಲೇಶ್ವರ, ಕುಮಾರಸ್ವಾಮಿ ಲೇಔಟ್, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಗಾಯಿತ್ರಿ ನಗರ ಸೇರಿದಂತೆ ಪ್ರಮುಖ ಬಡಾವಣೆಗಳ ರಸ್ತೆಗಳು, ವೃತ್ತಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳು ತಲೆ ಎತ್ತಿವೆ. ಫ್ಲೈಓವರ್, ಮೆಟ್ರೋ ಸೇತುವೆ ಕೆಳಭಾಗ, ಪಾದಚಾರಿ ಮಾರ್ಗಗಳಲ್ಲಿ ಗ್ರಾಮಾಂತರ ಭಾಗಗಳಿಂದ ರೈತರು, ವ್ಯಾಪಾರಿಗಳು ಆಗಮಿಸಿ ಬಾಳೆಕಂದು, ಮಾವಿನಸೊಪ್ಪು, ಹೂವು, ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ.

ಹಬ್ಬದ ಪ್ರಯುಕ್ತ ಕೋಲಾರ, ಆನೇಕಲ್, ಹೊಸಕೋಟೆ, ಮಾಲೂರು, ಮಾಗಡಿ, ರಾಮನಗರ, ಹೊಸೂರು ಸೇರಿದಂತೆ ಬೆಂಗಳೂರು ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಿಗೆ ಹೂವು ಹಣ್ಣು ತರಕಾರಿಗಳನ್ನು ವರ್ತಕರು, ರೈತರು ತಂದು ಮಾರುತ್ತಿದ್ದಾರೆ. ಮಾರುಕಟ್ಟೆ ಮಾತ್ರವಲ್ಲದೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲೂ ವ್ಯಾಪಾರ ನಡೆಯುತ್ತಿದೆ.

ಹೂವಿನ ದರ ಏರಿಕೆ

ಗಣೇಶ ಚತುರ್ಥಿ ಮತ್ತು ಕಳೆದ ವಾರಗಳಿಗೆ ಹೋಲಿಸಿದರೆ ಹೂವಿನ ದರ ಕೊಂಚ ಹೆಚ್ಚಳವಾಗಿತ್ತು. ಕಳೆದ ವಾರ ₹50-₹100 ಇದ್ದ ಕೇಜಿ ಸೇವಂತಿಗೆ ಈ ವಾರ ₹150, ಒಂದು ಕೇಜಿ ಉತ್ತಮ ಗುಲಾಬಿಗೆ ₹350, ಚೆಂಡು ₹60ರಿಂದ ₹70, ಕನಕಾಂಬರ ಕೇಜಿಗೆ ₹1,200, ಮಲ್ಲಿಗೆ ಹೂವು ಕೇಜಿ ₹2,000 ಸುಗಂಧರಾಜ ₹300 ಸಂಪಿಗೆ ₹250 ಮಾರಾಟ ಮಾಡಲಾಗುತ್ತಿದೆ. ವಾಹನ ಪೂಜೆ ಹಿನ್ನೆಲೆಯಲ್ಲಿ ಸೇವಂತಿಗೆ ಮತ್ತು ಚಂಡು ಹೂವಿಗೆ ಸಾಕಷ್ಟು ಬೇಡಿಕೆ ಇದ್ದು, ಇವುಗಳ ದರ ಕೂಡ ದುಪ್ಪಟ್ಟು ಏರಿಕೆಯಾಗಿದೆ. ತಮಿಳುನಾಡಿನಿಂದ ಬರುವ ಮಲ್ಲಿಗೆ, ಮಾರಿಗೋಲ್ಡ್, ಸೇವಂತಿಗೆ, ಐಸ್‌ಬರ್ನ್ ಸೇವಂತಿಗೆ ದರ ಸ್ವಲ್ಪ ಏರಿಕೆಯಾಗಿದೆ.

ಬೂದುಗುಂಬಳ ಪೂರೈಕೆ ಕಡಿಮೆ, ಹೆಚ್ಚಿದ ದರ

ಕಳೆದ ವರ್ಷ ದಸರಾ ವೇಳೆಗೆ ಕೆಜಿಗೆ ₹ 60 ದರ ತಲುಪಿ ದಾಖಲೆ ಬರೆದಿದ್ದ ಬೂದುಗುಂಬಳ ಈ ಬಾರಿ ಕೇಜಿಗೆ ₹30- ₹40 ಇದೆ. ಆಯುಧ ಪೂಜೆ ದಿನ ಅಂಗಡಿ, ಮನೆ, ವಾಹನಗಳು, ಕಚೇರಿಗಳು, ಕಾರ್ಖಾನೆ ಬಳಿ ಒಡೆಯುವ ಬೂದು ಗುಂಬಳಕ್ಕೆ ಹೆಚ್ಚಿನ ಬೇಡಿಕೆ ಇದೆ. ಸಗಟು ದರದಲ್ಲಿ ಕೇಜಿಗೆ ₹10-₹15 ಇದ್ದರೆ, ಚಿಲ್ಲರೆ ದರದಲ್ಲಿ ಒಂದು ಕೆಜಿಗೆ ₹40 ಇದೆ. ಹಾಪ್‌ಕಾಮ್ಸ್‌ನಲ್ಲಿ ₹5-10 ವ್ಯತ್ಯಾಸವಾಗಿದೆ. ಬಹುತೇಕ ಮಾರುಕಟ್ಟೆಗಳಲ್ಲಿ ಇಡೀ ಕಾಯಿಯನ್ನು ಗಾತ್ರದ ಆಧಾರದಲ್ಲಿ ₹80-120, ದೊಡ್ಡ ಕಾಯಿ ₹150 ರವರೆಗೂ ಮಾರಾಟ ಮಾಡಲಾಗುತ್ತಿದೆ. ಮಳೆ ಕೊರತೆಯಿಂದ ತಮಿಳುನಾಡು, ಆಂಧ್ರಪ್ರದೇಶದಿಂದ ಕಡಿಮೆ ಪ್ರಮಾಣದ ದಾಸ್ತಾನು ಬಂದಿದ್ದು, ಬೆಲೆ ಏರಿಕೆಯಾಗಲು ಕಾರಣವಾಗಿದೆ. ನಿಂಬೆ ಹಣ್ಣು ಸೇರಿ ಇತರೆ ಹಣ್ಣುಗಳ ದರವೂ ಹೆಚ್ಚಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ಉಳಿದಂತೆ ಮೂಸಂಬಿ ಹಣ್ಣು ₹60, ದಾಳಿಂಬೆ ₹60ರಿಂದ ₹80, ಬಾಳೆಹಣ್ಣು ಕೇಜಿಗೆ ಸುಮಾರು ₹70, ಸೇಬು ₹100, ಸಪೋಟಾ ₹70 - ₹80, ಸೀತಾಫಲ ಸುಮಾರು ₹170, ದ್ರಾಕ್ಷಿ ₹250ಕ್ಕೆ ವ್ಯಾಪಾರವಾಗುತ್ತಿದೆ.

ಹಬ್ಬದ ಪೂಜೆಗೆ ಅಗತ್ಯವಾದ ಉಳಿದಂತೆ ಮಾವಿನ ಸೊಪ್ಪಿನ ಕಟ್ಟಿಗೆ ₹30, ಒಂದು ಮಾರು ತುಳಸಿಗೆ ₹60ರಿಂದ ₹80, ತೆಂಗಿನ ಕಾಯಿಗೆ ₹30, ಒಂದು ಕಟ್ಟು ವೀಳ್ಯದೆಲೆಗೆ ₹60 ರಿಂದ ₹80, ಒಂದು ನಿಂಬೆ ಹಣ್ಣು ₹4, ಜೋಡಿ ಬಾಳೆ ಕಂಬಗಳಿಗೆ ₹100 ಇತ್ತು.

ದಸರಾ ಪ್ರಯುಕ್ತ ತರಕಾರಿಗಳ ದರ ಬೆಲೆ ಹೆಚ್ಚಾಗಿದ್ದು, ಟೊಮೆಟೋ ₹15 ಬಿಟ್ಟರೆ ಉಳಿದೆಲ್ಲವುಗಳ ದರ ಕೊಂಚ ಹೆಚ್ಚಾಗಿದೆ. ಬದನೆ ₹50, ಕ್ಯಾರೇಟ್‌ ₹50, ಬೀನ್ಸ್ ₹100, ಬಿಟ್ರೂಟ್‌ ₹50 ಉತ್ತಮ ಗುಣಮಟ್ಟದ ಆಲೂಗಡ್ಡೆ ₹30ಕ್ಕೆ ಮಾರಾಟವಾಗುತ್ತಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಆಯುಧಪೂಜೆ, ವಿಜಯದಶಮಿ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಬಳಿಯ ಅಣ್ಣಮ್ಮ ದೇವಾಲಯ, ಶೇಷಾದ್ರಿಪುರಂನ ಮಹಾಲಕ್ಷ್ಮೀ ದೇವಾಲಯ, ಟಿ.ಆರ್‌.ಮಿಲ್‌ ಬಳಿಯ ಬಂಡೀಕಾಳಮ್ಮ, ಮುತ್ಯಾಲನಗರದ ಮುತ್ಯಾಲಮ್ಮ ದೇವಿ ದೇವಾಲಯ, ಶಂಕರ ಮಠದ ಶ್ರೀ ಶಾರದಾ ದೇವಿ ದೇವಳ, ಮಲ್ಲೇಶ್ವರದ ಕನ್ನಿಕಾ ಪರಮೇಶ್ವರಿ ದೇವಾಲಯ, ವಿವಿಪುರಂನ ವಾಸವಿದೇವಿ ದೇವಾಲಯ, ಮತ್ತೀಕೆರೆಯ ಶ್ರೀ ಚೌಡೇಶ್ವರಿ ದೇವಿ ದೇವಾಲಯ, ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಾಲಯ, ಗಂಗಮ್ಮ ದೇವಾಲಯ, ಸರ್ಕಲ್‌ ಮಾರಮ್ಮ ದೇವಸ್ಥಾನ ಸೇರಿ ನಗರದ ದೇವಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿವೆ.

ಸಿಎಂ- ಡಿಸಿಎಂಗೆ ಸಿದ್ಧವಾಗಿದೆ ವಿಶೇಷ ದಸರಾ ಗಿಫ್ಟ್!

ಹಣ್ಣು ಕೇಜಿಗೆ

  • ಸೇಬು ₹100
  • ಮೂಸಂಬಿ ₹60
  • ದಾಳಿಂಬೆ ₹60-100
  • ದ್ರಾಕ್ಷಿ ₹240
  • ಬಾಳೆಹಣ್ಣು ₹70-80
  • ಅನಾನಸ್‌ ₹60-80
  • ಸಪೋಟಾ ₹80-100
  • ಸೀತಾಫಲ ₹150

ಹೂವು ಕೇಜಿಗೆ

  • ಕನಕಾಂಬರ ₹1000
  • ಮಲ್ಲಿಗೆ ₹2000
  • ಸೇವಂತಿ ₹100
  • ಗುಲಾಬಿ ₹300
  • ಸುಗಂಧರಾಜ ₹250
  • ಚೆಂಡುಹೂ ₹80