ದರ್ಶನ್‌ ಅವರು ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ನ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪ ಕುರಿತಂತೆ ಪೊಲೀಸರ ತನಿಖೆ  ನಮ್ಮ ಮೇಲೆ ಕೋಪಗೊಂಡಿದ್ದು ನಿಜ. ಸಿಟ್ಟಿನಲ್ಲಿ ಮಾತನಾಡಿದ್ದು ಕೂಡ ಸತ್ಯ. ಆದರೆ ಅವರು ಹಲ್ಲೆ ಮಾಡಿಲ್ಲ

ಮೈಸೂರು (ಜು.17): ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರು ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ನ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆಂಬ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ಹೋಟೆಲ್‌ಗೆ ತೆರಳಿದ ನಜರ್‌ಬಾದ್‌ ಠಾಣೆಯ ಪೊಲೀಸರು ಮಾಲೀಕ ಸಂದೇಶ್‌ ಸ್ವಾಮಿ, ನೌಕರರಾದ ಗಂಗಾಧರ್‌, ಸಮೀರ್‌ ಮತ್ತಿತರರನ್ನು ವಿಚಾರಣೆ ನಡೆಸಿದರು. ಈ ವೇಳೆ, ‘ದರ್ಶನ್‌ ಅವರು ಸರ್ವಿಸ್‌ ವಿಚಾರದಲ್ಲಿ ನಮ್ಮ ಮೇಲೆ ಕೋಪಗೊಂಡಿದ್ದು ನಿಜ. ಸಿಟ್ಟಿನಲ್ಲಿ ಮಾತನಾಡಿದ್ದು ಕೂಡ ಸತ್ಯ. ಆದರೆ ಅವರು ಹಲ್ಲೆ ಮಾಡಿಲ್ಲ’ ಎಂದು ಪೊಲೀಸರು ಹಾಗೂ ಮಾಧ್ಯಮದವರ ಮುಂದೆ ನೌಕರರು ತಿಳಿಸಿದರು.

ಹೋಟೆಲ್‌ನಲ್ಲಿನ ಸಿಸಿಟೀವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದ ಪೊಲೀಸರು, ಘಟನೆ ನಡೆಯಿತೆನ್ನಲಾದ ಸ್ಥಳವನ್ನು ಪರಿವೀಕ್ಷಣೆ ನಡೆಸಿ ತೆರಳಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೂ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸಿದರು. ಸಂಜೆ ವೇಳೆಗೆ ಹೋಟೆಲ್‌ಗೆ ಭೇಟಿ ನೀಡಿದ ಹೋಟೆಲ್‌ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆದರು.

'HDK, ಸಿದ್ದರಾಮಯ್ಯ ಹೆಸರನ್ನು ಯಾಕೆ ತರ್ತೀರಾ, ನನಗೆ ಯಾರೂ ಕೀ ಕೊಟ್ಟಿಲ್ಲ

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ್ದ ಚಿತ್ರ ನಿರ್ದೇಶಕರೂ ಆಗಿರುವ ಇಂದ್ರಜಿತ್‌, ದಲಿತ ಸಮುದಾಯದ ಗಂಗಾಧರ್‌ ಎಂಬುವರ ಮೇಲೆ ದರ್ಶನ್‌ ಹಲ್ಲೆ ನಡೆಸಿದ್ದಾರೆ. ಅವರ ಕಣ್ಣಿಗೆ ಗಾಯವಾಗಿದೆ. ಅವರ ಪತ್ನಿ ಪೊರಕೆ ಹಿಡಿದು ಬಂದು ಗಲಾಟೆ ಮಾಡಿದ್ದಾರೆ ಎಂದು ದೂರಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಈ ಕುರಿತು ದೂರು ನೀಡಿದ್ದರು.

ಪೊಲೀಸ್‌ ವಿಚಾರಣೆ ಬಳಿಕ ಮಾಧ್ಯಮದವರ ಮುಂದೆ ಹಾಜರಾದ ಗಂಗಾಧರ್‌ ಅವರು, ನಾನು ದಲಿತ ಅಲ್ಲ, ಬ್ರಾಹ್ಮಣ. ನನಗೆ ಮದುವೆಯಾಗಿಲ್ಲ. ನನ್ನ ಕಣ್ಣಿಗೆ ಗಾಯವೂ ಆಗಿಲ್ಲ ಎಂದು ಮಾಸ್ಕ್‌ ತೆಗೆದು ಮುಖ ತೋರಿಸಿದರು. ಇದೇ ವೇಳೆ ಬಿಹಾರ ಮೂಲದ ಸಪ್ಲೈಯರ್‌ ಸಮೀರ್‌ ಪ್ರತಿಕ್ರಿಯಿಸಿ, ದರ್ಶನ್‌ ಕೋಪಗೊಂಡರು. ಆ ವಿಚಾರವನ್ನು ಮಾಲೀಕರಿಗೆ ತಿಳಿಸಿದೆವು. ದರ್ಶನ್‌ ದೈಹಿಕವಾಗಿ ಹಲ್ಲೆ ನಡೆಸಿಲ್ಲ ಎಂದು ತಿಳಿಸಿದರು.

ಈ ಮಧ್ಯೆ, ಪತ್ರಕರ್ತರ ಜತೆ ಮಾತನಾಡಿದ ಹೋಟೆಲ್‌ ಮಾಲೀಕ ಎನ್‌. ಸಂದೇಶ್‌, ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಅವರು ಈ ರೀತಿ ಆರೋಪ ಏಕೆ ಮಾಡಿದ್ದಾರೋ ಗೊತ್ತಿಲ್ಲ. ಈ ವಿಚಾರವನ್ನು ಇಲ್ಲಿಗೇ ನಿಲ್ಲಿಸುವುದು ಒಳ್ಳೆಯದು ಎಂದು ಮನವಿ ಮಾಡಿದರು.

ನಾನು ದಲಿತ ಅಲ್ಲ, ನಾಯರ್‌: ಗಂಗಾಧರ್‌

ಪೊಲೀಸ್‌ ವಿಚಾರಣೆ ಬಳಿಕ ಮಾಧ್ಯಮಗಳೆದುರು ಮಾತನಾಡಿದ ಪ್ರಿನ್ಸ್‌ ಹೋಟೆಲ್‌ನ ಸರ್ವಿಸ್‌ ಮ್ಯಾನೇಜರ್‌ ಗಂಗಾಧರ್‌ ಅವರು, ನಾನು ದಲಿತ ಅಲ್ಲ, ನಾಯರ್‌ ಸಮುದಾಯದವನು. ಅದು ಬ್ರಾಹ್ಮಣ ವರ್ಗಕ್ಕೆ ಸೇರುತ್ತೆ. ನನ್ನ ಮೇಲೆ ಹಲ್ಲೆ ಆಗಿಲ್ಲ, ಕಣ್ಣಿಗೆ ಗಾಯವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ದಲಿತ ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ ಎಂದು ಇಂದ್ರಜಿತ್‌ ಆರೋಪಿಸಿದ್ದರು.