ಬೆಂಗಳೂರು (ಜ.25):  ಡೀಸೆಲ್‌ ದರ ಏರಿಕೆಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್‌ ಮೇಲಿನ ಮಾರಾಟ ತೆರಿಗೆ (ಸೇಲ್ಸ್‌ ಟ್ಯಾಕ್ಸ್‌) ವಿನಾಯಿತಿ ಕೋರಿ ಕೆಎಸ್‌ಆರ್‌ಟಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸಾರಿಗೆ ಆದಾಯ ಕುಸಿತದಿಂದ ಕಂಗಾಲಾಗಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್‌ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ದಿನ ನಾಲ್ಕು ಸಾರಿಗೆ ನಿಗಮಗಳಿಗೆ ಸುಮಾರು 26 ಲಕ್ಷ ರು. ಹಾಗೂ ಮಾಸಿಕ ಸುಮಾರು 8 ಕೋಟಿ ರು. ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ಈ ನಡುವೆ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗದ ಪರಿಣಾಮ ಸಾರಿಗೆ ಆದಾಯವೂ ಕುಸಿದಿದೆ.

ಗಮನಿಸಿ KSRTC ಯಲ್ಲಿ ಆರಂಭವಾಗುತ್ತಿದೆ ಹೊಸ ವ್ಯವಸ್ಥೆ : ಏನದು..?

ಕಳೆದ ಏಳೆಂಟು ತಿಂಗಳಿಂದ ಸುಮಾರು 1.30 ಲಕ್ಷ ನೌಕರರಿಗೆ ವೇತನ ನೀಡಲಾಗದ ಸ್ಥಿತಿ ತಲುಪಿರುವ ಸಾರಿಗೆ ನಿಗಮಗಳಿಗೆ ಡೀಸೆಲ್‌ ದರ ಏರಿಕೆಯಿಂದ ಆರ್ಥಿಕ ಸ್ಥಿತಿ ಮತ್ತಷ್ಟುಬಿಗಡಾಯಿಸಿದೆ. ಹೀಗಾಗಿ ಅನ್ಯ ಮಾರ್ಗವಿಲ್ಲದೆ ನೆರವಿಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರತಿ ವರ್ಷ ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್‌ಗೆ ಮಾರಾಟ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಪಾವತಿಸುವ 500 ಕೋಟಿ ರು. ಭರಿಸಲಾಗುತ್ತಿದೆ. ಹೀಗಾಗಿ ಈ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ದಿನಕ್ಕೆ 1,632 ಕಿ.ಲೀ. ಡೀಸೆಲ್‌:

ನಾಲ್ಕು ಸಾರಿಗೆ ನಿಗಮಗಳಿಂದ ಸುಮಾರು 25 ಸಾವಿರ ಬಸ್‌ಗಳಿದ್ದು, ಕೆಎಸ್‌ಆರ್‌ಟಿಸಿಗೆ ಪ್ರತಿ ನಿತ್ಯ 635 ಕಿಲೋ ಲೀಟರ್‌, ಬಿಎಂಟಿಸಿ 342 ಕಿ.ಲೀ., ಎನ್‌ಡಬ್ಲ್ಯೂಕೆಆರ್‌ಟಿಸಿ 340 ಕಿ.ಲೀ. ಹಾಗೂ ಎನ್‌ಇಕೆಆರ್‌ಟಿಸಿ 315 ಕಿ.ಲೀ. ಡೀಸೆಲ್‌ ಬಳಸುತ್ತಿವೆ. ನಿತ್ಯ ಲಕ್ಷಾಂತರ ಲೀಟರ್‌ ಡೀಸೆಲ್‌ ಅಗತ್ಯವಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಸಗಟು ದರದಲ್ಲಿ ಡೀಸೆಲ್‌ ಖರೀದಿಸಲಾಗುತ್ತಿದೆ. ಈ ಸಗಟು ದರವು ಸಾಮಾನ್ಯ ದರಕ್ಕಿಂತ 2-3 ರು. ಕಡಿಮೆ ಇರುತ್ತದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆದರಕ್ಕೆ ಅನುಗುಣವಾಗಿ ದೇಶದಲ್ಲಿ ನಿತ್ಯ ತೈಲ ದರ ಪರಿಷ್ಕರಣೆ ಮಾಡುವುದರಿಂದ ದರ ಏರಿಕೆಯಾದಾಗ ಡೀಸೆಲ್‌ ಸಗಟು ದರವೂ ಹೆಚ್ಚಳವಾಗುತ್ತಿದೆ.

ಎಷ್ಟುಡೀಸೆಲ್‌ ಬೇಕು?

ಸಾರಿಗೆ ನಿಗಮ ದಿನಕ್ಕೆ ಡೀಸೆಲ್‌(ಕೆ.ಎಲ್‌) ತಿಂಗಳಿಗೆ(ಕೆ.ಎಲ್‌)

ಕೆಎಸ್‌ಆರ್‌ಟಿಸಿ 635 19,050

ಬಿಎಂಟಿಸಿ 342 10,260

ಎನ್‌ಡಬ್ಲ್ಯೂಕೆಆರ್‌ಟಿಸಿ 340 10,200

ಎನ್‌ಇಕೆಆರ್‌ಟಿಸಿ 315 9,450

(ಕೆ.ಎಲ್‌-ಕಿಲೋ ಲೀಟರ್‌)

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಲಭ್ಯ ಸಂಪನ್ಮೂಲ ಬಳಸಿಕೊಂಡು ನೌಕರರ ಡಿಸೆಂಬರ್‌ ತಿಂಗಳ ಶೇ.50ರಷ್ಟುವೇತನ ಮಾತ್ರ ಪಾವತಿಸಲಾಗಿದೆ. ಇದೀಗ ಡೀಸೆಲ್‌ ದರ ಏರಿಕೆಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯಲ್ಲಿ ವಿನಾಯಿತಿ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

- ಶಿವಯೋಗಿ ಸಿ.ಕಳಸದ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ