ಮೈಸೂರು(ಜೂ.02): ಸದ್ಯಕ್ಕೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನದ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ, ನಾಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುತೂಹಲಕರ ಹೇಳಿಕೆ ನೀಡದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವಾನುಮತದಿಂದ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳು ಬಹುಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡಬಹುದು. ಆದರೆ, ಸರ್ವಾನುಮತದಿಂದ ಸಾಧ್ಯವಿಲ್ಲ ಎಂದು ತಿಳಿಸಿದರು.

ಮೋದಿ ಆಡಳಿತದಿಂದ ದೇಶ 70 ವರ್ಷ ಹಿಂದಕ್ಕೆ ಹೋಗಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಿಮಗೆ ಪಟ್ಟಿಕೊಡಲಾ ದೇಶ ಹಿಂದಕ್ಕೆ ಹೋಗಿದ್ದು ಯಾವಾಗ, ಯಾರಿಂದ ಅಂತ? ಕಾಂಗ್ರೆಸ್‌ನಿಂದಲೇ ದೇಶ ಹಿಂದಕ್ಕೆ ಹೋಗಿರೋದು. ಕಾಂಗ್ರೆಸ್‌ನಲ್ಲಿ ಗುಲಾಮಗಿರಿಯ ರಾಜಕಾರಣ ಮಾತ್ರ ಇದೆ. ಅದರಲ್ಲಿ ನೀವು ಸೇರಿಕೊಂಡಿದ್ದೀರಿ. ಅದಕ್ಕಾಗಿ ನಿಮ್ಮ ಮೆದುಳು ಗುಲಾಮಗಿರಿಯ ತತ್ವವನ್ನು ಒಪ್ಪಿಕೊಂಡಿದೆ. ಹೀಗಾಗಿ ನೀವು ಹೀಗೆ ಮಾತನಾಡುತ್ತಿದ್ದೀರಾ ಎಂದು ತಿರುಗೇಟು ನೀಡಿದರು.

ನಿಮ್ಮ ಮೆದುಳು 70 ವರ್ಷ ಹಿಂದಕ್ಕೆ ಹೋಗಿದೆಯೋ? ನಿಮ್ಮ ಆಲೋಚನಾ ಶಕ್ತಿಯೇ ಕಳೆದು ಹೋಗಿದೆಯೋ? ರಾಜ್ಯ-ದೇಶದಲ್ಲಿ ಆಗಿರುವ ಅಭಿವೃದ್ಧಿ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿರೋದಾ ಎಂದು ಕೇಳಿದರು.

ವರ್ತಮಾನವಷ್ಟೇ ನನಗೆ ಗೊತ್ತು

ಸದ್ಯಕ್ಕೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನದ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ, ನಾಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ವಾನುಮತದಿಂದ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

- ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ