* ದೇಶದಲ್ಲಿ ಉಗ್ರರಿಗೆ ಬಿರಿಯಾನಿ ತಿನ್ನಿಸುವ ಕಾಲ ಈಗಿಲ್ಲ* ಮಸೀದಿ ಮುಂದೆ ಮೆರವಣಿಗೆ ಹೋದರೆ ಏನು ತಪ್ಪು?* ಮೋದಿ ಕೊಡುವ ಮನೆ, ಹಣ, ಗ್ಯಾಸ್ ಬೇಕು. ಆದರೆ, ಅವರಿಗೆ ಮತ ಹಾಕಲ್ಲ ಎನ್ನುವುದು ನ್ಯಾಯನಾ?
ಬೆಂಗಳೂರು(ಏ.23): ದೇಶದಲ್ಲಿ ಭಯೋತ್ಪಾದಕರಿಗೆ(Terrorists) ಬಿರಿಯಾನಿ ತಿನ್ನಿಸುವ ಕಾಲ ಇತ್ತು. ಈಗ ಬಿರಿಯಾನಿ-ಗಿರಿಯಾನಿ ಇಲ್ಲ. ಯಾರಾದರೂ ಬಾಲ ಬಿಚ್ಚಿದರೆ ಬುಲ್ಡೋಜರ್ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನ್ನಿಸುವುದಿಲ್ಲ. ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡುತ್ತೇವೆ. ಬುಲ್ಡೋಜರ್ ಮೂಲಕ ಉತ್ತರ ನೀಡುತ್ತೇವೆ. ತಪ್ಪು ಮಾಡಿದವರನ್ನು ತಲೆ ಮೇಲೆ ಕೂರಿಸಿಕೊಳ್ಳುವ ಜನ ನಾವಲ್ಲ ಎಂದರು.
ತಪ್ಪು ಮಾಡಿದವರು ನೀರು ಕುಡಿಯಲೇಬೇಕು. ಶಿಕ್ಷೆಯಾಗಲೇ ಬೇಕು. ತಪ್ಪು ಮಾಡಿದವರ ಮತಗಳ ಆಸೆಗೆ ಓಲೈಕೆ ಕಾಲ ಇಲ್ಲ. ತಪ್ಪು ಮಾಡಿದವರು ಬಡವರು, ಶ್ರೀಮಂತ ಎನ್ನುವ ಪ್ರಶ್ನೆ ಇಲ್ಲ. ನಮ್ಮ ನೆಲದಲ್ಲಿ ಎಲ್ಲರಿಗೂ ಒಂದೇ ಕಾನೂನು. ಊರಿಗೆ ಬೆಂಕಿ ಹಾಕುವಾಗ ಬಡತನ ನೆನಪಿಗೆ ಬರುವುದಿಲ್ಲವೇ? ಶ್ರೀರಾಮನವಮಿ ದಿನದಂದು ಯಾಕೆ ಕಲ್ಲು ಎಸೆಯುತ್ತಾರೆ? ನಾವು ಅವರ ಮೆರವಣಿಗೆ ವೇಳೆ ಕಲ್ಲು ಹಾಕುತ್ತೇವಾ? ಯಾರೋ ಒಬ್ಬರು ಮಸೀದಿ ಮುಂದೆ ಯಾಕೆ ಬರಬೇಕು ಎಂದು ಹೇಳುತ್ತಾರೆ. ಇಡೀ ಭಾರತವೇ ಹಿಂದೂಗಳ ದೇಶ. ಬಹುಸಂಖ್ಯಾತ ಹಿಂದೂಗಳಿರುವ ದೇಶ. ನಾವೇನು ಅರಬ್‌ಗೆ ಹೋಗಿ ಆಕ್ರಮಿಸಿಕೊಂಡಿದ್ದೇವಾ? ನಾವು ಹೋಗಿ ಆಕ್ರಮಿಸಿಕೊಂಡರೆ ತಪ್ಪು. ನಾವು ಮೆರವಣಿಗೆ ಮಾಡಬಾರದು ಎಂದರೆ ಯಾವ ಮಾನಸಿಕತೆ ಅದು ಎಂದು ಹರಿಹಾಯ್ದರು.
Karnataka Politics: ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಗಲುಗನಸು ಕಾಣ್ತಿದೆ: ಸಿ.ಟಿ.ರವಿ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಸಿದ್ದರಾಮಯ್ಯ ಅವರು ನಾನು ಹಿಂದೂ ಎಂದು ಹೇಳುತ್ತಾರೆ. ಆದರೆ, ಕೇಸರಿ ಟೋಪಿ ಮಾತ್ರ ಬೇಡ. ಕೇಸರಿ ಟೋಪಿ ಹಾಕಲು ಮುಂದಾದರೆ ಅದನ್ನು ಕಿತ್ತಾಕಿದರು. ಇಂತಹವರು ಹಿಂದೂಗಳ(Hindu) ಬಗ್ಗೆ ಮಾತನಾಡುತ್ತಾರೆ. ಕುಂಕುಮ ಇಟ್ಟವರ ಕಂಡರೆ ಹೆದರಿಕೆಯಾಗುತ್ತದೆ ಅವರಿಗೆ. ಅವರ ತಾಯಿ, ಹೆಣ್ಣುಮಕ್ಕಳು ಕುಂಕುಮ ಇಡುವುದಿಲ್ಲವೇ? ಕುಂಕುಮ ಇಟ್ಟವರು ಯಾರಾದರೂ ಬಾಂಬ್ ಹಾಕಿದ್ದಾರಾ? ಬಿಳಿ ಟೋಪಿ ಎಂದರೆ ಸಿದ್ದರಾಮಯ್ಯ ಅವರಿಗೆ ಬಹಳ ಪ್ರೀತಿ ಎಂದು ವಾಗ್ದಾಳಿ ನಡೆಸಿದರು.
ಸಬ್‌ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಒಂದೆರೆಡು ತಿಂಗಳು ಮಾತ್ರವಲ್ಲ, 26 ತಿಂಗಳು ಉಚಿತ ಪಡಿತರ ನೀಡಿದ್ದಾರೆ. 100 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದಾರೆ. ಮೋದಿ ಅವರು ಕೊಡುವ ಮನೆ, ಹಣ, ಗ್ಯಾಸ್ ಬೇಕು. ಆದರೆ, ಅವರಿಗೆ ಮತ ಹಾಕಲ್ಲ ಎನ್ನುವುದು ನ್ಯಾಯನಾ ಎಂದು ರವಿ ಪ್ರಶ್ನಿಸಿದರು.
