ಬೆಳಗಾವಿ (ಡಿ.21): ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯವು ಪ್ರಕರಣವನ್ನು ಶುಕ್ರವಾರ ಬೆಂಗಳೂರು ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತು.

ಸಿ.ಟಿ.ರವಿ ಅವರನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾ.ಸ್ಪರ್ಶ ಡಿಸೋಜ ಅವರು ಆದೇಶ ನೀಡಿದರು. ಟ್ರಾಜೆಂಟ್ ವಾರೆಂಟ್ ಆದೇಶದಂತೆ ಪೊಲೀಸರು ಸಿ.ಟಿ.ರವಿ ಅವರನ್ನು ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪೊಲೀಸರ ವಾಹನದ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಅವರು ಸೇರಿದಂತೆ ಬಿಜೆಪಿ ನಾಯಕರು ತಮ್ಮ ವಾಹನದಲ್ಲಿಯೇ ತೆರಳಿದರು.

ಬೆಳಗ್ಗೆ ಕೋರ್ಟ್‌ಗೆ ಕರೆತಂದ ಪೊಲೀಸರು:

ಸಚಿವೆಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಮೇಲ್ಮನೆ ಸದಸ್ಯ ಸಿ.ಟಿ.ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಶುಕ್ರವಾರ ಬೆಳಗ್ಗೆ ಬೆಳಗಾವಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆ ಸಂದರ್ಭದಲ್ಲಿ ಸಿ.ಟಿ.ರವಿ ಪರ ಎಂ.ಬಿ.ಝಿರಲಿ, ರವಿರಾಜ ಪಾಟೀಲ ಜಾಮೀನು ನೀಡುವಂತೆ ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಆದರೆ ತನಿಖಾಧಿಕಾರಿಗಳು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದರು. ಅವರ ಮನವಿಯಂತೆ ನ್ಯಾಯಾಧೀಶರು, ಬೆಂಗಳೂರಿಗೆ ಕರೆದೊಯ್ಯಲು ನಿಮಗೆ ಎಷ್ಟು ಸಮಯ ಬೇಕು ಎಂದು ಕೇಳಿತು. ಇದಕ್ಕೆ ಪೊಲೀಸರು ವಿಮಾನದ ಮೂಲಕ ಹೋಗುವುದಾದರೆ 2 ಗಂಟೆ, ರಸ್ತೆ ಮೂಲಕ ಹೋಗುವುದಾದರೆ 12 ಗಂಟೆ ಬೇಕು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ನಂತರ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತು.

ಸಿಟಿ ರವಿಗೆ 41ಎ ಅಡಿಯಲ್ಲಿ ನೋಟಿಸ್ ಕೊಡಬೇಕಿತ್ತು, ಬಂಧನ ಪ್ರಶ್ನಿಸಿದ ಹೈಕೋರ್ಟ್!

ನ್ಯಾಯಾಧೀಶರ ಮುಂದೆ ಸಿ.ಟಿ. ರವಿ ಹೇಳಿದ್ದೇನು?:

ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂಬುದನ್ನು ನನಗೆ ತಿಳಿಸಿಲ್ಲ. ಯಾರು ಕೂಡ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ಸಿ.ಟಿ. ರವಿ ಅವರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ಗುರುವಾರ ಮಧ್ಯಾಹ್ನ ವಿಧಾನಸಭಾ ಕಾರಿಡಾರ್​ನಲ್ಲಿ ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಮಂತ್ರಿ ಧಮಕಿ ಹಾಕಿದ್ದರು. ರಾತ್ರಿ ನನ್ನನ್ನು ಪೊಲೀಸರು ಎಲ್ಲೆಲ್ಲೋ ಕರೆದೊಯ್ಯುತ್ತಿದ್ದರು. ದೇವರ ಮೇಲೆ ಭಾರ ಹಾಕಿ ನಾನು ಹೋದೆ. ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಕೌನ್ಸಿಲ್ ಹಾಲ್ ಒಳಗೆ ಹೇಳಿದ್ದರು ಎಂದು ಅವರು ಜಡ್ಜ್‌ ಎದುರೇ ಆರೋಪಿಸಿದರು.

ನನ್ನನ್ನು ಪೊಲೀಸರು ನಿಗೂಢ ಜಾಗಕ್ಕೆ ಕರೆತಂದು ನಿಲ್ಲಿಸಿದ್ದಲ್ಲದೆ ದೂರ ಹೋಗಿ ಮಾತನಾಡುತ್ತಾ ಇದ್ದರು. ಖಾನಾಪುರದಲ್ಲಿ ನನಗೆ ಹೊಡೆದರು. ತಲೆಯಲ್ಲಿ ರಕ್ತ ಬರುತ್ತಿತ್ತು ಎಂದು ನ್ಯಾಯಾಧೀಶರ ಮುಂದೆ ಸಿಟಿ ರವಿ ಹೇಳಿದರು. ಇದೇ ವೇಳೆ, ಯಾರು ಹೊಡೆದಿದ್ದಾರೆ ಎಂದು ನ್ಯಾಯಾಧೀಶರು ಕೇಳಿದಾಗ, ಯಾರು ಹೊಡೆದರು ಎಂದು ಗೊತ್ತಾಗಲಿಲ್ಲ. ಪೊಲೀಸರೇ ಹೊಡೆದಿರಬಹುದು. ಅವರೇ ಎತ್ತಿಕೊಂಡು ಹೋದರು ಎಂದು ರವಿ ಉತ್ತರಿಸಿದರು.

ವಕೀಲ ಎಂ.ಬಿ.ಝಿರಲಿ ವಾದ ಮಂಡನೆ:

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಪರ ಜಾಮೀನು ಅರ್ಜಿ ಸಲ್ಲಿಸಿದ ವಕೀಲ ಎಂ.ಬಿ.ಝಿರಲಿ ವಾದ ಮಂಡನೆ ಮಾಡಿದರು. ಗುರುವಾರ ಸಂಜೆ 6.30ರ ಸುಮಾರಿಗೆ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುವರ್ಣಸೌಧದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ 10 ಗಂಟೆಗಳ ಕಾಲ 3 ಜಿಲ್ಲೆಗಳಲ್ಲಿ ಸಿಟಿ ರವಿಯನ್ನು ಸುತ್ತಿಸಿದ್ದಾರೆ. ನಂದಗಡ, ಖಾನಾಪುರ, ಧಾರವಾಡ, ಗದಗ, ರಾಮದುರ್ಗ, ಸವದತ್ತಿ ಹೀಗೆ ಎಲ್ಲ ಕಡೆಯೂ ಪೊಲೀಸರು ಸುತ್ತಿಸಿದ್ದಾರೆ. ಕೋರ್ಟ್​ಗೆ ಬರುವವರೆಗೂ ನಿಗೂಢ ಜಾಗಕ್ಕೆ ಕರೆದೊಯ್ದಿದ್ದರು. ಪ್ರತಿ 10 ನಿಮಿಷಕ್ಕೊಮ್ಮೆ ಪೊಲೀಸರಿಗೆ ಯಾರದ್ದೋ ಕರೆ ಬರುತ್ತಿತ್ತು. ಅವರ ಸೂಚನೆಯಂತೆ ಪೊಲೀಸರು ವರ್ತಿಸುತ್ತಿದ್ದರು ಎಂದು ರವಿ ಅವರು ನೀಡಿದ ಮಾಹಿತಿಯನ್ನು ವಕೀಲರು ನ್ಯಾಯಾಧೀಶರ ಮುಂದೆ ವಿವರಿಸಿದರು.

ನಾನು ಕೊಟ್ಟ ದೂರು FIR ಆಗಿಲ್ಲ, ಹೆಬ್ಬಾಳ್ಕರ್ ದೂರಿನ ಬೆನ್ನಲ್ಲೇ ಬಂಧನ, ಇದು ಹೇಗೆ ಸಾಧ್ಯ, ಸಿಟಿ ರವಿ ಪ್ರಶ್ನೆ!

ರವಿ ನನಗೂ ಕೂಡ ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆಂದು ತಿಳಿಸಿಲ್ಲ. ನಾನು ಕೇಳಿದರೂ ಹೇಳಿಲ್ಲ. ರವಿ ಅವರು ನಿನ್ನೆ ನಡೆದ ಘಟನೆಯಿಂದ ಭಾವನಾತ್ಮಕವಾಗಿ ನೊಂದಿದ್ದಾರೆ. ಪೊಲೀಸರು ಅವರ ವಾಚ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸಿಟಿ ರವಿ ದೂರು ನೀಡಿದರೂ ಪೊಲೀಸರು ಸ್ವೀಕರಿಸಿಲ್ಲ. ಎಫ್‌ಐಆರ್ ದಾಖಲಿಸಲು ಹೇಳಿದರೂ ಪೊಲೀಸರು ದಾಖಲಿಸಿಲ್ಲ. ಈ ವೇಳೆ ಎಫ್‌ಐಆರ್ ದಾಖಲಿಸಿಕೊಳ್ಳದಿರುವುದು ಕೂಡ ಅಪರಾಧ ಎಂದು ಜಿರಲಿ ವಾದ ಮಂಡಿಸಿದರು.

ಈ ವೇಳೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅರವಿಂದ್ ಬೆಲ್ಲದ ಸೇರಿದಂತೆ ಇತರೆ ಬಿಜೆಪಿ ನಾಯಕರು ಕೋರ್ಟ್‌ ಹಾಲ್​​ನಲ್ಲಿ ನಿಂತುಕೊಂಡು ವಾದ ಆಲಿಸಿದರು.