ವಿಜಯಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆಗೆ ಸುಮಾರು 1,500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಈ ಸಂಬಂಧ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಬೋರ್ಡ್‌ ಅಧ್ಯಕ್ಷ ಎಂ.ಎಸ್‌.ರುದ್ರಗೌಡರ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. 

ಬೆಂಗಳೂರು(ಮಾ.19): ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬೇಸಿಗೆ ಕಾಲದ ಮಳೆಗೆ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ. ವಿಜಯಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆಗೆ ಸುಮಾರು 1,500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಈ ಸಂಬಂಧ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಬೋರ್ಡ್‌ ಅಧ್ಯಕ್ಷ ಎಂ.ಎಸ್‌.ರುದ್ರಗೌಡರ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 1,500 ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ, ಆಲಿಕಲ್ಲು ಮಳೆಯ ತೇವಾಂಶಕ್ಕೆ ಸಿಲುಕಿ ನಷ್ಟವಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಮೆಣಸಿನ ಕಾಯಿ, ಗೋಬಿ, ಬೀನ್ಸ್‌ ಸಸಿಗಳು ಆಲಿಕಲ್ಲು ಮಳೆಗೆ ಹಾನಿಗೊಳಗಾಗಿದ್ದು, ಅಂದಾಜು 50 ರಿಂದ 80 ಲಕ್ಷ ರು.ಗಳ ನಷ್ಟಉಂಟಾಗಿದೆ . ಕೋಲಾರ, ಜಿಲ್ಲೆಯ ಹಲವೆಡೆ ಮಳೆಗೆ 400ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ಮಾವು, ಹುಣಸೆ ಹೂಗಳು ಹಾನಿಗೆ ಒಳಗಾಗಿವೆ. ಮಳವಳ್ಳಿ ತಾಲೂಕಿನಲ್ಲಿ 250 ಹೆಕ್ಟೇರ್‌ಗೂ ಹೆಚ್ಚು ಪ್ರದೇಶವ್ಯಾಪ್ತಿಯ ಭತ್ತದ ಬೆಳೆ ನಾಶವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೇಟೋ, ಆಲೂಗಡ್ಡೆ, ಸೇವಂತಿಗೆ, ದ್ರಾಕ್ಷಿ, ಮಾರಿಗೋಲ್ಡ್‌ ಸೇರಿ 100 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು 3.50 ಕೋಟಿಗೂ ಅಧಿಕ ನಷ್ಟಸಂಭವಿಸಿದೆ. ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿ ಮಳೆಗೆ ಜೋಳ ಮತ್ತು ಮಾವಿನ ಫಸಲು ಹಾಳಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ: ಇನ್ನೂ 5 ದಿನ ಮಳೆ..!

ಅಕಾಲಿಕ ಮಳೆ, ಸಿಡಿಲಿಗೆ 2 ಬಲಿ

ರಾಜ್ಯದಲ್ಲಿ ಅಕಾಲಿಕ ಮಳೆ ಮುಂದುವರಿದಿದ್ದು, ರಾಮನಗರ, ಬೆಂಗಳೂರು ಗ್ರಾಮಾಂತರ, ರಾಯಚೂರು, ವಿಜಯಪುರ, ಬೀದರ್‌, ಕಲಬುರಗಿ, ಯಾದಗಿರಿ, ಮಂಡ್ಯ, ಬಳ್ಳಾರಿ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಬೀದರ್‌ ಜಿಲ್ಲೆಯ ಕಮಲನಗರ ತಾಲೂಕಿನ ಸೋನಾಳ ಗ್ರಾಮದಲ್ಲಿ ಸಿಡಿಲಿಗೆ ಲಹು ಮಾಧವರಾವ ಬೀರ್ಗೆ(36) ಎಂಬುವರು ಮೃತಪಟ್ಟಿದ್ದಾರೆ. ಹೊಲದಲ್ಲಿ ಜೋಳ ಶೇಖರಣೆ ಮಾಡುವ ಸಂದರ್ಭದಲ್ಲಿ ಸಿಡಿಲು ಬಡಿಯಿತು. ರಾಯಚೂರು ಜಿಲ್ಲೆ ಲಿಂಗ​ಸು​ಗೂ​ರು ತಾಲೂಕಿನ ​ಮೆ​ದ​ಕಿ​ನಾ​ಳ ಗ್ರಾಮ​ದಲ್ಲಿ ತುಂಬಿ ​ಹ​ರಿ​ಯು​ತ್ತಿದ್ದ ಚರಂಡಿ​ಯಲ್ಲಿ ಬಿದ್ದು ಭೀರಪ್ಪ ಶಿವ​ರಾಜ (2) ಎನ್ನುವ ಬಾಲಕ ಮೃತ​ಪ​ಟ್ಟಿ​ದ್ದಾನೆ. ಚರಂಡಿ​ಯಲ್ಲಿ ಬಿದ್ದ ಮಗು 200 ಮೀಟರ್‌ ದೂರದವರೆಗೆ ಹರಿ​ದು ​ಹೋ​ಗಿದ್ದು, ನೀರಿನ ಪ್ರಮಾಣ ಕಡಿ​ಮೆ​ಯಾದ ಮೇಲೆ ಮೃತದೇಹ ಪತ್ತೆ​ಯಾ​ಗಿ​ದೆ.

ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಓರ್ವ ಬಲಿ

ರಾಮ​ನಗರ ಜಿಲ್ಲೆಯಲ್ಲಿ ಶುಕ್ರ​ವಾರ ರಾತ್ರಿ ಸುರಿದ ವರ್ಷದ ಮೊದಲ ಮಳೆ​ಯಿಂದಾಗಿ ರಾಮ​ನ​ಗರ ಹೊರವಲ​ಯದ ಸಂಗ​ಬ​ಸ​ವ​ನ​ದೊಡ್ಡಿ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಜಲಾ​ವೃ​ತ​ಗೊಂಡಿತ್ತು. ಸಿರುಗುಪ್ಪ, ಕುರುಗೋಡು ಸೇರಿ ಬಳ್ಳಾರಿ ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯಾಹ್ನ 45 ನಿಮಿಷಕ್ಕೂ ಹೆಚ್ಚು ಕಾಲ ಸಿಡಿಲು, ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಕಲಬುರಗಿ ಜಿಲ್ಲೆಯ ಹಲವು ಕಡೆ ಸುಮಾರು 1 ತಾಸು ಆಲಿಕಲ್ಲು ಸಹಿತ ಮಳೆಯಾಗಿದೆ. ಅಫ್ಜಲಪುರದಲ್ಲಿ 1 ಸೆಂ.ಮೀ. ಮಳೆಯಾಗಿದೆ.

ಬೀದರ್‌ನ ಭಾಲ್ಕಿಯ ಕೂಡಲಿಯಲ್ಲಿನ ಕೋಳಿ ಫಾಮ್‌ರ್‍ನಲ್ಲಿ ಸಿಡಿಲಿಗೆ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಕೋಳಿ ಫಾಮ್‌ರ್‍ ಶೆಡ್‌ನ ತಗಡುಗಳು ಹಾರಿ ಹೋಗಿವೆ. ಬೀದರ್‌ನ ಆಟೋನಗರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಗೆ ಅಲ್ಲಲ್ಲಿ ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಹಲವು ವಾಹನಗಳಿಗೆ ಹಾನಿ ಸಂಭವಿಸಿದೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಳೆಗೆ ಮರಗಳು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಹಲವೆಡೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಇದೇ ವೇಳೆ, ಚಾಮರಾಜನಗರ, ಬೆಂಗಳೂರು ನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.