- ಸಿಪಿಐ ಆನಂದ ಮೇತ್ರೆಯ ವಿಚಾರಣೆ ವೇಳೆ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಅನೇಕ ವಿಚಾರ ಬಹಿರಂಗ- ಬಂಧಿತ ಆನಂದ ಮೇತ್ರೆ ವಿಚಾರಣೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ- 4 ಅಭ್ಯರ್ಥಿಗಳಿಂದ ಸುಮಾರು 2 ಕೋಟಿ ಪಡೆದಿದ್ದ ಪೊಲೀಸ್ ಅಧಿಕಾರಿ
ಕಲಬುರಗಿ(ಮೇ.09): ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಬಂಧಿತ ಪಿಎಸ್ಐ ಆನಂದ ಮೇತ್ರೆ ಕಿಂಗ್ಪಿನ್ಗಳ ಜತೆ ಸೇರಿ ಡೀಲ್ ಕುದುರಿಸುತ್ತಿದ್ದುದಷ್ಟೇ ಅಲ್ಲ, ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡುವಲ್ಲೂ ನೆರವು ನೀಡುತ್ತಿದ್ದರು ಎಂಬ ವಿಚಾರ ಸಿಐಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ನಾಲ್ಕು ಅಭ್ಯರ್ಥಿಗಳಿಂದ ಸುಮಾರು .2 ಕೋಟಿ ಡೀಲ್ ಮಾಡಿದ ಆರೋಪದ ಮೇರೆಗೆ ಬಂಧಿತ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆಯ ವಿಚಾರಣೆ ವೇಳೆ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಅನೇಕ ವಿಚಾರಗಳು ಹೊರಬರುತ್ತಿವೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿ ಅದನ್ನು ಕಿಂಗ್‌ಪಿನ್ ಸೂಚಿಸುವ ಪರಿಣಿತ ತಂಡಕ್ಕೆ ಇದೇ ಮೇತ್ರೆ ತಲುಪಿಸುತ್ತಿದ್ದ ಎನ್ನಲಾಗಿದೆ. ಪರಿಣತ ತಂಡ ಸಿದ್ಧಪಡಿಸಿ ಕಳುಹಿಸಿಕೊಡುವ ಸರಿ ಉತ್ತರವನ್ನು ಮತ್ತೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸೋ ಕೆಲಸವನ್ನೂ ಈತನ ಉಸ್ತುವಾರಿಯಲ್ಲೇ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಸಿಪಿಐ ಮೇತ್ರೆ ಪರೀಕ್ಷಾ ಕೇಂದ್ರದೊಳಗೆ ನೇರವಾಗಿ ಹೋಗಿ ಬರುತ್ತಿದ್ದರು. ಮೇತ್ರೆ ಸ್ವತಃ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಪೊಲೀಸ್ ಅಧಿಕಾರಿಯಾಗಿದ್ದ ಕಾರಣ ಇವರು ಆಗಾಗ ಪರೀಕ್ಷಾ ಕೇಂದ್ರದೊಳಗೆ ಹೋಗಿ ಬರುತ್ತಿದ್ದರೂ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಈ ವೇಳೆ ಅವರು ಕಿಂಗ್ಪಿನ್ಗಳ ತಂಡ ಸಿದ್ಧಪಡಿಸಿ ಕಳುಹಿಸಿಕೊಡುತ್ತಿದ್ದ ಸರಿ ಉತ್ತರಗಳನ್ನು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ತಲುಪಿಸುತ್ತಿದ್ದರು. ಅಲ್ಲಿ ಡೀಲ್ ಮಾಡಿಕೊಂಡಿದ್ದ ಅಭ್ಯರ್ಥಿಗಳ ಓಎಂಆರ್ಶೀಟ್ ತುಂಬುವ ಕೆಲಸ ಮಾಡಲಾಗುತ್ತಿತ್ತು.
ಇನ್ನು ಪ್ರಕರಣದಲ್ಲಿ ಬಂಧಿತ ಕೆಎಸ್‌ಆರ್‌ಪಿ ಬಟಾಲಿಯನ್ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ ರಾರಯಂಕ್) ವೈಜನಾಥ ರೇವೂರ್ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲನ ಆಪ್ತ ಎಂಬುದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿತರಾಗಿರುವ ಪೊಲೀಸರಲ್ಲಿ ಅಕ್ರಮಕ್ಕೆ ಸಾಥ್ ನೀಡುವಂಥವರನ್ನು ಹುಡುಕಿ ಆರ್.ಡಿ.ಪಾಟೀಲನಿಗೆ ಪರಿಚಯಿಸುವ ಕೆಲಸವನ್ನು ವೈಜನಾಥ ರೇವೂರ್ ಮಾಡುತ್ತಿದ್ದರು ಎಂದು ತನಿಖೆಯಿಂದ ಬಯಲಾಗಿದೆ.
ಆರ್.ಡಿ.ಪಾಟೀಲಗೆ ತಾನೊಬ್ಬನೇ ದುಡ್ಡು ಮಾಡುವ ಹಪಾಹಪಿ
ಕಲಬುರಗಿ: ಬ್ಲೂಟೂತ್ ತಜ್ಞ ಎಂಜಿನಿಯರ್ ಮಂಜುನಾಥ್ ಜತೆ ಸೇರಿಕೊಂಡು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಜೈಲು ಸೇರಿರುವ ಕಿಂಗ್‌ಪಿನ್ ಆರ್.ಡಿ.ಪಾಟೀಲನಿಗೆ ತಾನೊಬ್ಬನೇ ದುಡ್ಡು ಮಾಡಬೇಕೆಂಬ ಹಪಾಹಪಿ. ಈ ದಂಧೆಯಲ್ಲಿ ತಾನೊಬ್ಬನೇ ಮೆರೆಯಬೇಕು, ದುಡ್ಡುಮಾಡಬೇಕು ಎಂಬ ಕಾರಣಕ್ಕೆ ಎಂಜಿನಿಯರ್ ಮಂಜುನಾಥ್ ಸೇರಿ ತನಗಾಗದವರ ವಿರುದ್ಧ ಅವಕಾಶ ಬಿದ್ದಾಗಲೆಲ್ಲ ಕತ್ತಿ ಮಸೆಯುತ್ತಿದ್ದ. ಇದಕ್ಕಾಗಿ ಆತ ತನ್ನ ಆತ್ಮೀಯರಾದ, ಸದ್ಯ ಸಿಐಡಿ ವಶದಲ್ಲಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕೆಎಸ್‌ಆರ್‌ಪಿ 6ನೇ ಬಟಾಲಿಯನ್ನ ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರ್, ಸಿಪಿಐ ಆನಂದ ಮೇತ್ರೆ ನೆರವು ಪಡೆಯುತ್ತಿದ್ದ ಎಂದು ಹೇಳಲಾಗಿದೆ.
