Asianet Suvarna News Asianet Suvarna News

ರಾಜ್ಯದ 17 ಲಕ್ಷ ಮಂದಿ ವಾರಿಯರ್ಸ್‌ಗೆ ಲಸಿಕೆ

16ರಿಂದ ಲಸಿಕೆ ವಿತರಣೆ ಅಭಿಯಾನ ಆರಂಭ | ಮೊದಲ ಹಂತದಲ್ಲಿ ಆರೋಗ್ಯ, ಕಂದಾಯ, ಪೊಲೀಸ್‌ ಸಿಬ್ಬಂದಿಗೆ ಲಸಿಕೆ | 28 ದಿನಗಳ ಬಳಿಕ ಎರಡನೇ ಡೋಸ್‌ | ವ್ಯಾಕ್ಸಿನ್‌ ವಿತರಣೆಗೆ 235 ಕೇಂದ್ರಗಳಲ್ಲಿ ಸಕಲ ಸಿದ್ಧತೆ: ಸಿಎಂ ಯಡಿಯೂರಪ್ಪ

covid19 vaccine to 17 lakh corona warriors in Karnataka dpl
Author
Bangalore, First Published Jan 12, 2021, 9:54 AM IST

ಬೆಂಗಳೂರು(ಜ.12): ರಾಜ್ಯದಲ್ಲಿ ಜ. 16ರಿಂದ 16.90 ಲಕ್ಷ ಕೊರೋನಾ ಯೋಧರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದ್ದು, ಇದಕ್ಕಾಗಿ 235 ಲಸಿಕಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಕೊರೋನಾ ಲಸಿಕೆ ವಿತರಣೆ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಕೊರೋನಾ ಯೋಧರಾದ ಆರೋಗ್ಯ ಇಲಾಖೆ, ಕಂದಾಯ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುವುದು. 28 ದಿನಗಳ ಬಳಿಕ ಅವರಿಗೆ ಎರಡನೇ ಡೋಸ್‌ ನೀಡಲಾಗುವುದು ಎಂದರು.

ಕಾರ್ಯಪಡೆ ರಚನೆ:

ರಾಜ್ಯಕ್ಕೆ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಎರಡೂ ಮಾದರಿಯ ಲಸಿಕೆಗಳು ಬರಲಿವೆ. ರಾಜ್ಯಮಟ್ಟದ ಎರಡು ಪ್ರಮುಖ ದಾಸ್ತಾನು ಮಳಿಗೆಗಳಿಂದ ಜಿಲ್ಲಾ ಮಟ್ಟಕ್ಕೆ ಪೂರೈಸಲು ಕೋಲ್ಡ್‌ ಚೈನ್‌ ವ್ಯವಸ್ಥೆ ಮಾಡಿದ್ದೇವೆ. ಇವುಗಳನ್ನು ಸಮರ್ಪಕವಾಗಿ ನಿಗಾವಹಿಸಿ ಅನುಷ್ಠಾನಕ್ಕೆ ತರಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕಾರ್ಯಪಡೆ ರಚಿಸಿದ್ದೇವೆ ಎಂದು ಅವರು ವಿವರಿಸಿದರು.

45 ದಿನಗಳಲ್ಲಿ ರೋಗನಿರೋಧಕ ಶಕ್ತಿ​- ಸುಧಾಕರ್‌:

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ಲಸಿಕೆ ಪಡೆದ ವ್ಯಕ್ತಿಯಲ್ಲಿ 45 ದಿನಗಳಲ್ಲಿ ಕೊರೋನಾ ಸೋಂಕಿನ ವಿರುದ್ಧದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. 45 ದಿನಗಳವರೆಗೂ ಲಸಿಕೆ ಪಡೆದವರು ಸಹ ಎಚ್ಚರವಾಗಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ತಿಳಿಸಿದರು.

ಕೊರೋನಾ ಯೋಧರ ಬಳಿಕ ಜನಸಾಮಾನ್ಯರಿಗೆ:

ಮೊದಲ ಹಂತದ ಕೊರೋನಾ ಲಸಿಕಾ ಅಭಿಯಾನದಲ್ಲಿ ಕೊರೋನಾ ಯೋಧರಿಗೆ ಮೊದಲ ಆದ್ಯತೆ ನೀಡಲಾಗುವುದು. ಕೊರೋನಾ ಯೋಧರ ಬಳಿಕ ಜನಸಾಮಾನ್ಯರಿಗೆ ಲಸಿಕೆ ನೀಡಲು ಕೇಂದ್ರ ಕ್ರಮ ಕೈಗೊಳ್ಳಲಿದೆ. ಈ ವೇಳೆ 50 ವರ್ಷದೊಳಗಿನ ಅಥವಾ ಮೇಲ್ಪಟ್ಟದೀರ್ಘಕಾಲೀನ ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ ಮೊದಲ ಆದ್ಯತೆಯಾಗಿ ಗುರುತಿಸಿ ಕೊರೋನಾ ಲಸಿಕೆ ನೀಡಲಾಗುವುದು. ಈ ಬಗ್ಗೆಯೂ ಪ್ರಧಾನಮಂತ್ರಿಗಳು ಸಲಹೆ ನೀಡಿದರು ಎಂದು ಹೇಳಿದರು. ಈ ಲಸಿಕೆಯು ಕ್ಲಿನಿಕಲ್‌ ಪರೀಕ್ಷೆಯಾಗಿದ್ದು, ಯಾವುದೇ ಅಪಾಯವಿಲ್ಲ. ಹೀಗಾಗಿ ಜನರು ಭಯ, ಆತಂಕವಿಲ್ಲದೆ ಸುರಕ್ಷಿತವಾಗಿ ಲಸಿಕೆ ಪಡೆಯಬಹುದು ಎಂದರು.

ಇಂದು ರಾಜ್ಯಕ್ಕೆ ಲಸಿಕೆ?

ಸೋಮವಾರ ರಾತ್ರಿ ಅಥವಾ ಮಂಗಳವಾರ ರಾಜ್ಯಕ್ಕೆ 16.90 ಲಕ್ಷ ಕೊರೋನಾ ಲಸಿಕೆಗಳು ಕೇಂದ್ರದಿಂದ ಬರಲಿವೆ ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

KR ಮಾರ್ಕೆಟ್‌ಗೆ ಸ್ಮಾರ್ಟ್‌ ಲುಕ್‌: ಪಾರ್ಕಿಂಗ್‌ ವ್ಯವಸ್ಥೆ, ಲಿಫ್ಟ್‌, ಎಸ್ಕಲೇಟರ್‌ ಅಳವಡಿಕೆ

ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು, ಜ.16 ರಂದು ಕೊರೋನಾ ಲಸಿಕೆ ಅಭಿಯಾನ ಆರಂಭವಾಗುವ ಹಿನ್ನೆಲೆಯಲ್ಲಿ ಮುಂಚಿತವಾಗಿ ಲಸಿಕೆ ರಾಜ್ಯಕ್ಕೆ ಬರಲಿದೆ. ರಾಜ್ಯಕ್ಕೆ ಬಂದ ಲಸಿಕೆಯನ್ನು ಎಲ್ಲ ಪ್ರಾದೇಶಿಕ ಹಾಗೂ ಜಿಲ್ಲಾ ದಾಸ್ತಾನು ಕೇಂದ್ರಗಳಿಗೆ ಕಳುಹಿಸಬೇಕು. ಬಳಿಕ ಅಲ್ಲಿಂದ ಕೋಲ್ಡ್‌ಚೈನ್‌ ಮೂಲಕವೇ 235 ಲಸಿಕಾ ಕೇಂದ್ರಗಳಿಗೆ ಕಳುಹಿಸಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಹೀಗಾಗಿ ಸಹಜವಾಗಿಯೇ ಲಸಿಕೆ ಬೇಗನೇ ರಾಜ್ಯ ತಲುಪಲಿದೆ ಎಂದರು.

Follow Us:
Download App:
  • android
  • ios