ಲಸಿಕೆ ಹಾಕುವ ಬಗ್ಗೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ: 2 ಗಂಟೆ ತಾಲೀಮು
3 ಕಡೆ ಕೊರೋನಾ ಲಸಿಕಾ ತಾಲೀಮು | ಡ್ರೈ ರನ್ ಕುರಿತು ಅಧಿಕಾರಿ, ಸಿಬ್ಬಂದಿಗೆ ತರಬೇತಿ | 2 ತಂಟೆ ತಾಲೀಮು | ಬಿಬಿಎಂಪಿಯಿಂದ ಸಿದ್ಧತೆ: ಗೌರವ್ ಗುಪ್ತಾ
ಬೆಂಗಳೂರು(ಜ.02): ಬಿಬಿಎಂಪಿ ವ್ಯಾಪ್ತಿಯ ಎರಡು ಆರೋಗ್ಯ ಕೇಂದ್ರ ಹಾಗೂ ಬೆಂಗಳೂರು ಹೊರವಲಯದ ಒಂದು ಕೇಂದ್ರದಲ್ಲಿ ಜ.2ರಂದು ಕೊರೋನಾ ಲಸಿಕೆ ಹಾಕುವ ತಾಲೀಮು (ಡ್ರೈ ರನ್) ನಡೆಯಲಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ತಿಳಿಸಿದ್ದಾರೆ.
ದೇಶದಲ್ಲಿ ಲಸಿಕೆ ವಿತರಣೆ ಮಾಡುವ ಸಂಬಂಧ ಜ.2ರಂದು ಎಲ್ಲ ರಾಜ್ಯಗಳಲ್ಲಿಯೂ ಕೊರೋನಾ ನಿಯಂತ್ರಣದ ಕೊರೋನಾ ಲಸಿಕೆಯ ತಾಲೀಮು ನಡೆಯಲಿದೆ. ಪಾಲಿಕೆ ಸಹ ತಾಲೀಮು ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಲಸಿಕೆ ತಾಲೀಮು ನಡೆಸುವ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕನ ಮನೆ ಮುಂದೆ ಸಗಣಿ ರಾಶಿ ರಾಶಿ!
ದಕ್ಷಿಣ ವಲಯದ ವಿದ್ಯಾಪೀಠದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿ ಪಾಳ್ಯದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ಆನೇಕಲ್ ಭಾಗದ ಹರ್ಗಾದೆಯಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ತಾಲೀಮು ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎರಡು ಗಂಟೆ ಲಸಿಕಾ ತಾಲೀಮು ನಡೆಯಲಿದ್ದು, ಪ್ರತಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 25 ಮಂದಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದರು.
ಮೂರು ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ 75 ಕಾರ್ಯಕರ್ತರಿಗೆ ಲಸಿಕೆ ತಾಲೀಮು ನಡೆಸಲಾಗುತ್ತದೆ. ತಾಲೀಮು ನಡೆಸಿರುವ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಲಸಿಕೆ ನೀಡಲು ನಗರದಲ್ಲಿ ಒಟ್ಟು 1,517 ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಲಸಿಕೆ ನೀಡುವ ಕಾರ್ಯ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
464 ಜನರಲ್ಲಿ ಸೋಂಕು ಪತ್ತೆ ಸಕ್ರಿಯ ಕೇಸ್‌ಗಳು 7100ಕ್ಕೆ ಇಳಿಕೆ
ಬೆಂಗಳೂರು: ಬೆಂಗಳೂರು ನಗರದಲ್ಲಿ ಶುಕ್ರವಾರ 464 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 608 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಸೋಂಕಿನಿಂದ ಮೃತಪಟ್ಟಿರುವ ವರದಿಯಾಗಿದೆ.
ಈ ಮೂಲಕ ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 3,88,850ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,77,443ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳಲ್ಲಿ 4521 ಪುರುಷರು ಮತ್ತು 2566 ಮಹಿಳೆಯರಲ್ಲಿ ಸೋಂಕು ಇದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 7087ಕ್ಕೆ ಇಳಿಕೆಯಾಗಿದೆ. ಈ ಪೈಕಿ 82 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತದಲ್ಲಿ ಕೊರೋನಾ ಲಸಿಕೆ ಬಳಸಲು ತಜ್ಞರ ಗ್ರೀನ್ ಸಿಗ್ನಲ್!
ಶುಕ್ರವಾರ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4322ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 2945 ಮಂದಿ ಪುರುಷರು ಹಾಗೂ 1374 ಮಹಿಳೆಯರು ಹಾಗೂ ಮೂವರು ತೃತೀಯ ಲಿಂಗಿಗಳು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.