ಬೆಂಗಳೂರು, (ಅ.06):  ಇನ್ಮುಂದೆ ಕರ್ನಾಟಕದಲ್ಲಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಕೊರೋನಾ ಸೋಂಕಿನ ಪರೀಕ್ಷೆ ಕಡ್ಡಾಯಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಓಂ ಪ್ರಕಾಶ್ ಪಾಟೀಲ್ ಅವರು ಸುತ್ತೋಲೆ ಹೊಡಿಸಿದ್ದಾರೆ.

ರಾಜ್ಯದಲ್ಲೀಗ ಯುವಕರಲ್ಲೇ ಕೊರೋನಾ ಹೆಚ್ಚು: ಪುಟ್ಟಮಕ್ಕಳು, ಹಿರಿಯರಿಗೆ ಅಪಾಯ..!

ಸುತ್ತೋಲೆಯಲ್ಲೇನಿದೆ?
ಕೋವಿಡ್-19 ರೋಗದ ಶಂಕಿತ ವ್ಯಕ್ತಿಗಳು ಹಾಗೂ ಕೋವಿಡ್-19 ಸೋಂಕಿಗೆ ತುತ್ತಾದ ವ್ಯಕ್ತಿಗಳನ್ನು ಸಕಾಲದಲ್ಲಿ ಗುರುತಿಸುವುದು ಮೂಲಭೂತ ತತ್ವಗಳಲ್ಲಿ ಒಂದಾಗಿದೆ. ಪರಿಣಾಮಕಾರಿ ಹಾಗೂ ಶೀಘ್ರ ತಪಾಸಣೆಯು ಜೀವಗಳನ್ನು ಉಳಿಸುವಲ್ಲಿ ಹಾಗೂ ಮರಣ ಪ್ರಮಾಣ ದರವನ್ನು ತಗ್ಗಿಸಲು ಸಹಾಯಕವಾಗಲಿದೆ.

ರಾಜ್ಯ ಸರ್ಕಾರವು ಯಾವ ಯಾವ ವ್ಯಕ್ತಿಗಳಿಗೆ ಪರೀಕ್ಷೆಯ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಲು ಈಗಾಗೇ ಕಾಲ ಕಾಲಕ್ಕೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಒಳಗಾದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿಗಳು ಸೇರಿದಂತೆ ಜ್ವರದ ಲಕ್ಷಣವಿರುವ ವ್ಯಕ್ತಿ ( ಐಎಲ್‌ಐ), ಉಸಿರಾಟ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವ ( ಸಾರಿ) ರೋಗಿಗಳು, ಕೋವಿಡ್-19 ಚಿಕಿತ್ಸೆಯಲ್ಲಿ ತೊಡಗಿರುವ ಸಿಬ್ಬಂದಿಗಳು ಮತ್ತು ಆರೋಗ್ಯ ಸೇವಾ ಕ್ಷೇತ್ರದ ಕಾರ್ಯಕರ್ತರು, ಕಂಟೈನ್ಮೆಂಟ್, ಬಫರ್ ವಲಯದಲ್ಲಿನ ವ್ಯಕ್ತಿಗಳು, ಅಥವಾ ಆರೋಗ್ಯ ಸಿಬ್ಬಂದಿಯಿಂದ ಗುರ್ತಿಸಲ್ಪಟ್ಟ ಯಾವುದೇ ವ್ಯಕ್ತಿ ಅಥವಾ ಕೋವಿಡ್-19 ಶಂಕಿತ ವ್ಯಕ್ತಿಗಳು ಸೇರಿದಂತೆ ಇತರ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ತಗಲುವ ಅಪಾಯವಿರುತ್ತದೆ.

ಕೊರೋನಾ ಪಾಸಿಟಿವ್‌-ನೆಗೆಟಿವ್‌ ಸಂದೇಶ ರವಾನೆ: ಬಿಬಿಎಂಪಿಗೆ ಸಾರ್ವಜನಿಕರಿಂದ ಹಿಡಿಶಾಪ

ಈಗಾಲೇ ಸರ್ಕಾರದ ಗಮನಕ್ಕೆ ಬಂದಿರುವಂತ ಕೆಲವು ವ್ಯಕ್ತಿಗಳು ಕೋವಿಡ್-19 ಪರೀಕ್ಷೆಗೊಳಪಡಲು ನಿರಾಕರಿಸುತ್ತಿರುವುದು ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆ ಸರ್ಕಾರವು ಕೈಗೊಂಡಿರುವ ಪ್ರಯತ್ನಕ್ಕೆ ತೀವ್ರ ಹಿನ್ನಲೆಯಾಗಿರುತ್ತದೆ. ಸರಿಯಾದ ಸಮಯದಲ್ಲಿ ಸೋಂಕನ್ನು ಪತ್ತೆ ಹಚ್ಚುವುದರಿಂದ ಮಾತ್ರ ಕೋವಿಡ್ ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಮತ್ತು ಆತನ ಸಹೋದ್ಯೋಗಿಗಳಿಗೆ ಸಹಾಯವಾಗಲಿದ್ದು, ಸೋಂಕನ್ನು ಪತ್ತೆ ಹಚ್ಚಲು ಮತ್ತು ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗೊಳಪಡಿಸಲು ಸಹಕಾರಿಯಾಗಲಿದೆ. ಆದ್ದರಿಂದ ಸೆಕ್ಷನ್ (4) ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡಂತೆ ಆದೇಶವನ್ನು ಹೊರಡಿಸಲಾಗಿದೆ.

ಈ ಹಿನ್ನಲೆಯಲ್ಲಿ, ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಯಾವ ವ್ಯಕ್ತಿಗಳು ಕೋವಿಡ್-19 ಪರೀಕ್ಷೆಗೊಳಪಡಿಸಲು ತಿಳಿಸಲಾಗಿದೆಯೋ, ಅಂತಹ ಎಲ್ಲಾ ವ್ಯಕ್ತಿಗಳು ಕಡ್ಡಾಯವಾಗಿ ಪರೀಕ್ಷೆಗೊಳಪಡತಕ್ಕದ್ದು, ಅದರಿಂದಾಗಿ ಕೋವಿಡ್-19 ಸೋಂಕನ್ನು ನಿಯಂತ್ರಿಸಬಹುದಾಗಿ ಮತ್ತು ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತ, ರೋಗದ ಲಕ್ಷಣ ಹೊಂದಿರುವ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯಗೊಳಿಸಿದೆ.