Asianet Suvarna News Asianet Suvarna News

ಫೆಬ್ರವರಿಗೆ ಲಸಿಕೆ ನಿರೀಕ್ಷೆ: ಹಂಚಿಕೆಗೆ ರಾಜ್ಯ ಸಿದ್ಧತೆ!

ಫೆಬ್ರವರಿಗೆ ಲಸಿಕೆ ನಿರೀಕ್ಷೆ: ಹಂಚಿಕೆಗೆ ರಾಜ್ಯ ಸಿದ್ಧತೆ| ಮುಂದಿನ ವಾರ ಸಭೆ: ಸಚಿವ ಡಾ| ಸುಧಾಕರ್‌| ಮುಂದೆ ಚಳಿಗಾಲ ಬರಲಿದೆ| ಇನ್ನು 3 ತಿಂಗಳು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ| ಆರೋಗ್ಯ ಇದೆ ಎಂದು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೇ ಅಪಾಯವಾದೀತು

Covid vaccine may come out in February karnataka getting ready to distribute pod
Author
Bangalore, First Published Oct 20, 2020, 7:14 AM IST

ಬೆಂಗಳೂರು(ಅ.20): ಕೊರೋನಾಗೆ ಬಹುತೇಕ ಜನವರಿ, ಫೆಬ್ರವರಿ ತಿಂಗಳ ವೇಳೆಗೆ ಲಸಿಕೆ ಬರುವ ವಿಶ್ವಾಸವಿದೆ. ಹೀಗಾಗಿ ಲಸಿಕೆ ಬಂದಕೂಡಲೇ ರಾಜ್ಯದ ಏಳು ಕೋಟಿ ಜನರಿಗೂ ಸಮರೋಪಾದಿಯಲ್ಲಿ ಹೇಗೆ ತಲುಪಿಸಬೇಕು ಎಂಬ ಕುರಿತು ಮುಂದಿನ ವಾರ ಸಂಬಂಧಪಟ್ಟಅಧಿಕಾರಿಗಳು ಹಾಗೂ ತಜ್ಞರ ಸಭೆ ಕರೆಯುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಇದೇ ವೇಳೆ, ಮುಂದಿನ ಮೂರು ತಿಂಗಳು ಚಳಿಗಾಲದಿಂದಾಗಿ ಸೋಂಕು ಉಲ್ಬಣಿಸುವ ಸಾಧ್ಯತೆ ಇದೆ. ಜೊತೆಗೆ ಕೊರೋನಾಗೆ ಲಸಿಕೆ ಬರಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕು. ಹೀಗಾಗಿ ನಿಮ್ಮನ್ನು ನೀವು 3 ತಿಂಗಳು ರಕ್ಷಣೆ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿನ ವಯೋವೃದ್ಧರು ಹಾಗೂ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಲಸಿಕೆ ವಿಶ್ವಾಸ:

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ಲಸಿಕೆ ಬರುವ ವಿಶ್ವಾಸವಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಲಸಿಕೆ ಬಂದರೆ ಮೊದಲು ಯಾವ ವರ್ಗದವರಿಗೆ ನೀಡಬೇಕು? ರೋಗನಿರೋಧಕ ಶಕ್ತಿ ಕಡಿಮೆ ಇರುವ ವೃದ್ಧರು, ಮಕ್ಕಳು ಹಾಗೂ ಕೊರೋನಾ ಯೋಧರನ್ನು ಗುರುತಿಸಿ ಮೊದಲ ಹಂತದಲ್ಲಿ ಹೇಗೆ ತಲುಪಿಸಬೇಕು? ಒಟ್ಟಾರೆ 7 ಕೋಟಿ ಜನರಿಗೂ ಸಮರೋಪಾದಿಯಲ್ಲಿ ಹೇಗೆ ತಲುಪಿಸಬೇಕು ಎಂಬುದಕ್ಕೆ 2-3 ತಿಂಗಳ ಮೊದಲೇ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದೇವೆ. ಹೀಗಾಗಿ ಮುಂದಿನ ವಾರವೇ ಸಭೆ ಕರೆಯಲಾಗಿದೆ ಎಂದು ಸಚಿವರು ತಿಳಿಸಿದರು.

ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ:

ಕೊರೋನಾ ಲಸಿಕೆ ಬರುವವರೆಗೂ ಎಚ್ಚರಿಕೆಯಿಂದ ಇರಬೇಕು. ನಾನು ಶಕ್ತಿಶಾಲಿಯಾಗಿದ್ದೇನೆ, ಕೊರೋನಾ ನನ್ನನ್ನು ಕಾಡುವುದಿಲ್ಲ ಎನ್ನುವವರೂ ಐಸಿಯು ಹಾಗೂ ವೆಂಟಿಲೇಟರ್‌ನಲ್ಲಿ ಸಮಸ್ಯೆ ಎದುರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗಾಗಿ ನಿರ್ಲಕ್ಷ್ಯದ ಬದಲು ಸರಳ ಉಪಾಯಗಳಿಂದ ಸೋಂಕಿನಿಂದ ದೂರವಿರಿ ಎಂದು ಇದೇ ವೇಳೆ ಸಚಿವರು ಹೇಳಿದರು.

ಸೋಂಕು ಪರೀಕ್ಷೆ ವೇಳೆ ಹಲವು ಮಂದಿ ತಪ್ಪು ಮೊಬೈಲ್‌ ಸಂಖ್ಯೆ ಹಾಗೂ ವಿಳಾಸ ನೀಡುತ್ತಿದ್ದಾರೆ. ಇದು ನೀವು ಸರ್ಕಾರಕ್ಕೆ ಮಾಡುತ್ತಿರುವ ಮೋಸ ಅಲ್ಲ. ನಿಮ್ಮ ಪ್ರಾಣಕ್ಕೆ ನೀವೇ ಮಾಡಿಕೊಳ್ಳುತ್ತಿರುವ ಮೋಸ. ಇದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ನಿಮ್ಮ ಪ್ರಾಣಕ್ಕೇ ಕುತ್ತು ಉಂಟಾಗಬಹುದು ಎಂದು ಎಚ್ಚರಿಸಿದರು.

ಬಿಸಿ ನೀರ ಹಬೆ ತೆಗೆದುಕೊಳ್ಳಿ

ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಣೆ ಪಡೆಯಲು ಆಯುಷ್‌ ವೈದ್ಯರು ‘ಬಿಸಿ ನೀರಿನಿಂದ ಆವಿ’ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದರಿಂದ ಮೂಗು ಹಾಗೂ ಗಂಟಲಿನಲ್ಲಿರುವ ಕಫ ಹೊರಗೆ ಹೋಗುತ್ತದೆ. 50ರಿಂದ 60 ಡಿಗ್ರಿ ಸೆಲ್ಷಿಯಸ್‌ನಲ್ಲಿ ವೈರಸ್‌ ನಿಷ್ಕಿ್ರಯವಾಗುತ್ತದೆ. ಈ ನಿಟ್ಟಿನಲ್ಲಿ ಮೂಗಿನಿಂದ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ದೊಡ್ಡ ಆಶಾಕಿರಣ ಎಂದು ಸುಧಾಕರ್‌ ತಿಳಿಸಿದ್ದಾರೆ. ಈ ವೇಳೆ, ಪುದಿನ ಅಥವಾ ತುಳಸಿ ಎಲೆ ನೀರಿಗೆ ಹಾಕಿ ಕುದಿಸಿದರೆ ಉತ್ತಮ. ಯುನಾನಿಯಲ್ಲಿ ಆರ್ಕಿಅಜೀಬ್‌ ಎಂಬ ಔಷಧಿಯಿದ್ದು, ಅದನ್ನು ಎರಡು ಹನಿ ನೀರಿಗೆ ಹಾಕಿಕೊಂಡು ಸಹ ಆವಿ ಪಡೆಯಬಹುದು ಎಂದು ಆಯುಷ್‌ ಇಲಾಖೆ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios