ಹಾಸನ(ಏ.29): ಕೊರೋನಾ ಎನ್ನುವ ಕ್ರೂರಿ ಎಷ್ಟೋ ಜನರ ಬದುಕನ್ನೇ ಕಸಿದುಕೊಂಡಿದೆ. ಎಷ್ಟೋ ಪೋಷಕರಿಂದ ಮಕ್ಕಳನ್ನು, ಮಕ್ಕಳಿಂದ ಅಪ್ಪ ಅಮ್ಮಂದಿರನ್ನು ಕಿತ್ತುಕೊಂಡಿದ್ದರೆ, ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ 22 ವರ್ಷಗಳ ಹಿಂದೆ ಅಪ್ಪ-ಅಮ್ಮನನ್ನು ತೊರೆದು ಹೋಗಿದ್ದ ಯುವಕನೋರ್ವ ಇದೀಗ ಕೊರೋನಾ ಕಾರಣದಿಂದಾಗಿ ವಾಪಸ್‌ ಬಂದು ಮನೆ ಸೇರಿದ್ದಾನೆ.

ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮದ ರಾಜೇಗೌಡ ಹಾಗೂ ಅಕ್ಕಯಮ್ಮ ದಂಪತಿ ಮಗನಾದ 38 ವರ್ಷದ ಶೇಖರ್‌ ಕೊರೋನಾದಿಂದಾಗಿ ಇದೀಗ ಪೋಷಕರನ್ನು ಸೇರಿರುವ ಯುವಕ. ಈತ ತನ್ನ 16ನೇ ವಯಸ್ಸಿನಲ್ಲೇ ಅಪ್ಪ-ಅಮ್ಮನನ್ನು ತೊರೆದು ಊರೂರೂ ಸುತ್ತಿದ್ದಾರೆ. 16ನೇ ವಯಸ್ಸಿನಲ್ಲಿದ್ದಾಗ ಓದು ತಲೆಗೆ ಹತ್ತಲಿಲ್ಲ. ಹಾಗಾಗಿ ಬೇಸರಗೊಂಡು ಮುಂಬೈ ಬಸ್‌ ಹತ್ತಿದ್ದರಂತೆ. ಮುಂಬೈ ಸೇರಿದ ನಂತರ ಅಲ್ಲಿ ಇಲ್ಲಿ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ದರು. ನಂತರ ಅಷ್ಟೂ ಇಷ್ಟೂಅಡುಗೆ ಕೆಲಸ ಕಲಿತುಕೊಂಡರು. ಸಾಲದ್ದಕ್ಕೆ ಪಾನಿಪೂರಿ, ಗೋಬಿ....ಹೀಗೆ ಹಲವು ಚಾಟ್ಸ್‌ಗಳನ್ನು ಮಾಡುವುದನ್ನು ಚೆನ್ನಾಗಿ ಕಲಿತಿದ್ದರು. ಹಾಗಾಗಿ ನಂತರದ ದಿನಗಳಲ್ಲಿ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಹಾಗಾಗಿ ಪಾಸ್‌ಪೋರ್ಟ್‌ ಮಾಡಿಸಿಕೊಂಡು ದುಬೈಗೆ ಹೋಗಿ ಅಲ್ಲಿಯೂ ಒಂದಷ್ಟುಕಾಲ ಕೆಲಸ ಮಾಡಿದ್ದರು. ಆದರೆ, ಕಳೆದ ವರ್ಷ ಕೋವಿಡ್‌ ಬಂದ ನಂತರದಲ್ಲಿ ಅಲ್ಲಿಯೂ ಕೆಲಸ ಹೋಗಿದ್ದರಿಂದ ವಾಪಸ್‌ ಮುಂಬೈಗೆ ವಾಪಸಾದರು.

ಹಿಂದೆ ಹಾಸನಕ್ಕೆ ಬಂದರೂ ವಾಪಸ್‌ ಹೋಗಿದ್ದ ಶೇಖರ್‌:

ಮುಂಬೈಗೆ ವಾಪಸ್‌ ಬಂದ ನಂತರದಲ್ಲಿ ಇಡೀ ಅರ್ಥ ವ್ಯವಸ್ಥೆಯೇ ಹಾಳಾಗಿದ್ದರಿಂದ ಹೋಟೆಲ್‌ ವ್ಯಾಪಾರ ಕೂಡ ಅಷ್ಟೇನು ಚೆನ್ನಾಗಿ ನಡೆಯುತ್ತಿರಲಿಲ್ಲ. ದುಬೈನಿಂದ ಬಂದ ನಂತರದಲ್ಲಿ ತಾನು ಸಂಪಾದಿಸಿದ್ದ ಹಣ ಹೂಡಿಕೆ ಮಾಡಿ ತಾನೇ ಒಂದು ಹೋಟೆಲ್‌ ತೆರೆದಿದ್ದೆ. ಹಾಗೋ ಹೀಗೋ ನಡೆಯುತ್ತಿತ್ತು. ಆದರೆ, ನಂತರದಲ್ಲಿ ಸ್ನೇಹಿತರಿಂದ ಆದ ಮೋಸ ಹಾಗೂ ಇದೀಗ ಮತ್ತೆ ಕಾಣಿಸಿಕೊಂಡ ಕೊರೋನಾದಿಂದಾಗಿ ಹೋಟೆಲ್‌ ಮುಚ್ಚಬೇಕಾಯಿತು. ಇದರಿಂದ ತೀವ್ರ ನಷ್ಟಅನುಭವಿಸಿದೆ. ಹಿಂದೊಮ್ಮೆ ಅಪ್ಪ-ಅಮ್ಮನನ್ನು ಭೇಟಿ ಮಾಡಬೇಕೆಂದು ಹಾಸನಕ್ಕೆ ಬಂದಿದ್ದೆ. ಆದರೆ, ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಈ ಸಂದರ್ಭದಲ್ಲಿ ಭೇಟಿಯಾಗುವುದು ಸರಿಯಲ್ಲವೆಂದು ವಾಪಸ್‌ ಹೋದೆ. ಆದರೆ, ಈ ಬಾರಿ ಕೊರೋನಾದಿಂದಾಗಿ ನಾನು ಇಲ್ಲಿಗೆ ಬರಲೇಬೇಕಾಯಿತು ಎಂದು ಶೇಖರ್‌ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

"

ಹೆಂಗೋ ಮಗ ಬಂದ್ನಲ್ಲಾ

ಊರು ಬಿಟ್ಟುಹೋಗಿ ನಷ್ಟಅನುಭವಿಸಿದ್ದರಿಂದ ವಾಪಸ್‌ ಬರುವುದು ಹೇಗೆಂದು ವಾಪಸ್‌ ಊರಿಗೆ ಬರಲು ಮಗ ಶೇಖರ್‌ ಹಿಂಜರಿದು ಇದೀಗ 22 ವರ್ಷಗಳ ಬಳಿಕ ಬಂದಿದ್ದಾನೆ. ಆದರೆ, ಆತನ ಅಪ್ಪ-ಅಮ್ಮ ಮಾತ್ರ ಮನೆ ಬಿಟ್ಟುಹೋಗಿದ್ದ ಮಗ ಲಾಸ್‌ ಆಗಿದ್ದಾನೋ ಲಾಭದಲ್ಲಿದ್ದಾನೋ ಎನ್ನುವುದನ್ನು ನೋಡದೆ ಸದ್ಯ ಮಗ ಬಂದನಲ್ಲಾ ಎನ್ನುವ ಸಂತೋಷದಲ್ಲಿದ್ದಾರೆ.

22 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಮಗ ನಾಪತ್ತೆಯಾಗಿದಾಗ ಇದ್ದಬದ್ದ ಊರುಗಳು, ನೆಂಟರ ಮನೆಗಳಲ್ಲೆಲ್ಲಾ ಹುಡುಕಿದ್ದರು. ವರ್ಷವಾದರೂ ಹುಡುಕುವುದನ್ನು ಬಿಟ್ಟಿರಲಿಲ್ಲ. ಕಡೆಗೆ ಪೊಲೀಸರಿಗೂ ದೂರು ನೀಡಿದ್ದರು. ಅದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ. ಒಂದಷ್ಟುವರ್ಷಗಳಾಗುತ್ತಲೇ ತಂದೆ ತಾಯಿ ಕೂಡ ಬಹುಶಃ ಮಗ ಬದುಕಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಹತಾಶರಾಗಿದ್ದರು. ಆದರೆ, ಈಗ ಮಗ ಇದ್ದಕ್ಕಿದ್ದಂತೆ ಮನೆಗೆ ಬಂದಿದ್ದರಿಂದ ತಂದೆ ತಾಯಿಗೆ ಆಗಿರುವ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಹಾಗಾಗಿ ತಂದೆ ರಾಜೇಗೌಡ ಹಾಗೂ ತಾಯಿ ಅಕ್ಕಯಮ್ಮ ಅವರ ಬಾಯಲ್ಲಿ ಮಾತೇ ಬರುತ್ತಿಲ್ಲ. ಬದಲಾಗಿ ಅವರ ಕಣ್ಣಂಚಿನಲ್ಲಿರುವ ಆನಂದ ಬಾಷ್ಪವೇ ಎಲ್ಲವನ್ನೂ ಹೇಳುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona