ಬೆಂಗಳೂರು(ಎ.16): ಉತ್ತರಖಂಡದ ಹರಿದ್ವಾರದಲ್ಲಿ ಕುಂಭ ಮೇಳದಿಂದ ಹಿಂದಿರುಗಿದ ಎಲ್ಲಾ ಕರ್ನಾಟಕ ಯಾತ್ರಿಕರಿಗೆ ಕೋರೋನಾ ಪರೀಕ್ಷೆ ಕಡ್ಡಾಯ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಹರಿದ್ವಾರದಲ್ಲಿ ನಡೆದ ಪವಿತ್ರ ಕುಂಭಮೇಳದಲ್ಲಿ ಭಾಗವಹಿಸಿದ ನಂತರ ರಾಜ್ಯಕ್ಕೆ ಮರಳುವ ಯಾತ್ರಿಕರು ಒಂದು ವಾರ ತಮ್ಮ ಮನೆಯಲ್ಲಿ ಸ್ವಯಂ-ಕ್ವಾರೆಂಟೈನ್ ಆಗಬೇಕು. RT-PCR ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸುಧಾಕರ್ ಟ್ವೀಟ್‌ ಮಾಡಿದ್ದಾರೆ.

ಬೇಕಾಬಿಟ್ಟಿ ಕೋವಿಡ್‌ ಚಿಕಿತ್ಸಾ ದರ ವಸೂಲಿಗೆ ಸರ್ಕಾರ ಬ್ರೇಕ್‌..!

ಹಿಂದಿರುಗಿದವರಿಗೆ ತಮ್ಮ ಕೋವಿಡ್ ಪರೀಕ್ಷಾ ವರದಿ ಫಲಿತಾಂಶವು ನೆಗೆಟಿವ್ ಬಂದ ನಂತರವೇ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಸೂಚಿಸಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಉತ್ತರಾಖಂಡ್‌ ರಾಜ್ಯದಲ್ಲಿ ಏಪ್ರಿಲ್ 10-14ರ ನಡುವೆ ಕುಂಭ ಮೇಳದಲ್ಲಿ ಭಾಗವಹಿಸಿದ ನಂತರ ದೇಶಾದ್ಯಂತ ಕನಿಷ್ಠ 1,700 ಯಾತ್ರಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹಾಗಿದ್ದರೂ ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ರಾಜ್ಯದಿಂದ ಯಾತ್ರಿಕರು ಹೋಗುತ್ತಿದ್ದಾರೆ.

ಹರಿದ್ವಾರದಲ್ಲಿ ಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಿಕರು 2021 ರ ಫೆಬ್ರವರಿ 23 ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕು ”ಎಂದು ಆದೇಶದಲ್ಲಿ ತಿಳಿಸಲಾಗಿದೆ.