ಬೆಂಗಳೂರು(ನ.01): ರಾಜ್ಯದಲ್ಲಿ ಸತತ 10ನೇ ದಿನವಾದ ಶನಿವಾರ ಕೂಡ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅಲ್ಲದೆ, ಸೋಂಕಿತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರ ಬಿಡುಗಡೆಯೊಂದಿಗೆ ಒಟ್ಟು ಗುಣಮುಖವಾದವರ ಸಂಖ್ಯೆ 7 ಲಕ್ಷ ಗಡಿ ದಾಟಿದೆ. ಈ ಮಧ್ಯೆ, ಮತ್ತೆ 52 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

"

ಶನಿವಾರ ರಾಜ್ಯದಲ್ಲಿ 1.12 ಲಕ್ಷಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದರೂ ಇದರಲ್ಲಿ 4,471 ಸೋಂಕು ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಸೋಂಕು 5 ಸಾವಿರಕ್ಕಿಂತ ಕೆಳಗೆ ಇಳಿದಿದ್ದು 3 ತಿಂಗಳಲ್ಲೇ ಇದೇ ಮೊದಲು. ಇದರೊಂದಿಗೆ ಪಾಸಿಟಿವಿಟಿ ದರ ಶೇ.3.97ಕ್ಕೆ ಇಳಿಕೆಯಾಗಿದೆ. ಇದೇ ದಿನ ಸೋಂಕಿನಿಂದ ಗುಣಮುಖರಾದ 7,153 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 7,98,378 ತಲುಪಿದರೆ, ಗುಣಮುಖರಾದವರ ಸಂಖ್ಯೆ 7,00,737 ಕ್ಕೇರಿದೆ. ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಚೇತರಿಕೆ ಪ್ರಮಾಣ ಶೇ. 87.77ಕ್ಕೆ ಏರಿಕೆಯಾಗಿದೆ.

ಉಳಿದಂತೆ 86,749 ಸಕ್ರಿಯ ಸೋಂಕಿತರು ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದು, ಕೆಲವರು ಲಕ್ಷಣ ರಹಿತ ಸೋಂಕಿತರು ಮನೆ ಆರೈಕೆಗೆ ಒಳಗಾಗಿದ್ದಾರೆ. ಈ ಪೈಕಿ 935 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಮಧ್ಯೆ ಸೋಂಕಿತರ ಪ್ರಮಾಣ ಕಡಿಮೆ ಮತ್ತು ಗುಣಮುಖರ ಪ್ರಮಾಣ ಏರಿಕೆ ನಡುವೆಯೂ ಶನಿವಾರ 52 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇದುವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 10,873 ಮುಟ್ಟಿದೆ.

ಯಾವ ಜಿಲ್ಲೆ, ಎಷ್ಟು ಸೋಂಕು?:

ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು 2,251 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ತುಮಕೂರು 232, ಮೈಸೂರು 173, ಮಂಡ್ಯ 163, ದಕ್ಷಿಣ ಕನ್ನಡ, ಹಾಸನ ತಲಾ 136, ಬಳ್ಳಾರಿ 129, ಬೆಂಗಳೂರು ಗ್ರಾಮಾಂತರ 102, ಧಾರವಾಡ 93, ಚಿಕ್ಕಮಗಳೂರು 85, ಚಿತ್ರದುರ್ಗ 84, ಉಡುಪಿ 81, ಶಿವಮೊಗ್ಗ 79, ಚಿಕ್ಕಬಳ್ಳಾಪುರ 78, ಬೆಳಗಾವಿ 73, ಕಲಬುರಗಿ 71, ವಿಜಯಪುರ 62, ಬಾಗಲಕೋಟೆ 57, ದಾವಣಗೆರೆ 52, ಕೊಪ್ಪಳ 49, ಉತ್ತರ ಕನ್ನಡ 48, ಕೋಲಾರ 45, ಚಾಮರಾಜನಗರ 34, ಕೊಡಗು 33, ಹಾವೇರಿ 30, ಯಾದಗಿರಿ 27, ರಾಯಚೂರು 25, ರಾಮನಗರ 22, ಗದಗ 14 ಮತ್ತು ಬೀದರ್‌ನಲ್ಲಿ 7 ಮಂದಿಗೆ ಸೋಂಕು ದೃಢಪಟ್ಟಿದೆ.

15 ಜಿಲ್ಲೆಗಳಲ್ಲಿ ಒಂದೂ ಸಾವಿಲ್ಲ:

ಬೆಂಗಳೂರಿನಲ್ಲಿ ಅತಿ ಹೆಚ್ಚು 26 ಮಂದಿ, ಮೈಸೂರಿನಲ್ಲಿ 6, ಚಾಮರಾನಗರ, ದಕ್ಷಿಣ ಕನ್ನಡದಲ್ಲಿ ತಲಾ ಮೂವರು, ಬಳ್ಳಾರಿ, ಧಾರವಾಡ, ಕೋಲಾರ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾವೇರಿ, ಕಲಬುರಗಿ, ಶಿವಮೊಗ್ಗ, ತುಮಕೂರು, ವಿಜಯಪುರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಉಳಿದ 15 ಜಿಲ್ಲೆಗಳಲ್ಲಿ ಒಂದೂ ಸಾವು ವರದಿ ಆಗಿಲ್ಲ.