ಬೆಂಗಳೂರು (ಮೇ.15):  ಹಾಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಈ ತಿಂಗಳ 24ರವರೆಗೆ ಜಾರಿಯಲ್ಲಿರುವ ಮಧ್ಯೆಯೇ ಇದನ್ನು ವಿಸ್ತರಣೆ ಮಾಡಬೇಕೆ ಅಥವಾ ಬೇಡವೆ ಎಂಬ ಚರ್ಚೆ ಆರಂಭವಾಗಿದೆ.

ಬರುವ ಜೂನ್‌ ಪ್ರಾರಂಭದ ವೇಳೆಗೆ ಸೋಂಕು ಕಡಿಮೆಯಾಗಲಿದೆ ಎಂಬ ಅಭಿಪ್ರಾಯವನ್ನು ತಜ್ಞರು ಸರ್ಕಾರಕ್ಕೆ ತಿಳಿಸಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಈಗಿರುವ ಲಾಕ್‌ಡೌನ್‌ ಮುಂದುವರೆಸುವುದು ಉತ್ತಮ ಎಂದು ಕಂದಾಯ ಸಚಿವ ಆರ್‌.ಆಶೋಕ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ಕಂಟ್ರೋಲ್‌ಗೆ ಮುಕ್ಕಾಲು ಭಾರತವನ್ನು 8 ವಾರ ಲಾಕ್‌ಡೌನ್‌ ಮಾಡ್ಬೇಕಂತೆ! ...

ಇದಕ್ಕೆ ವ್ಯತಿರಿಕ್ತವಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸದ್ಯಕ್ಕೆ ಲಾಕ್‌ಡೌನ್‌ ವಿಸ್ತರಣೆ ಮಾಡುವ ಪ್ರಸ್ತಾಪ ಇಲ್ಲ. ಅದಕ್ಕೆ ಇನ್ನೂ ಕಾಲಾವಕಾಶವಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್‌, ಲಾಕ್‌ಡೌನ್‌ ಮಾಡಿದ್ದರಿಂದ ಕೊರೊನಾ ಸೋಂಕು ಹರಡುವುದು ಕಡಿಮೆ ಆಗಿದೆ. ಇನ್ನೂ ಕೆಲವು ದಿನಗಳು ಲಾಕ್‌ಡೌನ್‌ ಮುಂದುವರಿಸುವುದರಿಂದ ಕೊರೊನಾ ನಿಯಂತ್ರಣಕ್ಕೆ ತರಲು ಸಾಧ್ಯ. ಬೆಂಗಳೂರಿನ ಒಬ್ಬ ಸಾಮಾನ್ಯ ಪ್ರಜೆಯಾಗಿ ಈ ಮಾತು ಹೇಳುತ್ತಿದ್ದೇನೆ. ಈಗಿನ ಲಾಕ್‌ಡೌನ್‌ ಮುಗಿಯುವುದಕ್ಕೆ 3-4 ದಿನ ಮೊದಲು ಮುಖ್ಯಮಂತ್ರಿಯವರು ಸಭೆ ಕರೆಯಲಿದ್ದಾರೆ, ಅಲ್ಲಿ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಅವರು ಹೇಳಿದರು.

ಆರ್ಥಿಕ ಪ್ಯಾಕೇಜ್ ಘೋಷಿಸಿ, ಬಡವರ ಖಾತೆಗೆ 10 ಸಾವಿರ ರೂ ಹಾಕಿ: ಸರ್ಕಾರಕ್ಕೆ ಡಿಕೆಶಿ ಆಗ್ರಹ ..

ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಲಾಕ್‌ಡೌನ್‌ ಹಿಂಪಡೆದಲ್ಲಿ ಮತ್ತೆ ಜನದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಜೊತೆಗೆ, ಜನರನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಹೀಗಾಗಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮುಂದುವರೆಸುವುದು ಸೂಕ್ತ ಎಂದು ಅವರು ವಿವರಿಸಿದ್ದಾರೆ.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಲಾಕ್‌ಡೌನ್‌ನಿಂದಾಗಿ ಒತ್ತಡ ಕಡಮೆಯಾಗಿದೆ. ಲಾಕ್‌ಡೌನ್‌ ಅವಧಿ ಪೂರ್ಣಗೊಳ್ಳಲು ಇನ್ನೂ ಹತ್ತು ದಿನಗಳ ಕಾಲಾವಕಾಶ ಇದೆ. ಲಾಕ್‌ಡೌನ್‌ ವಿಸ್ತರಣೆ ಮಾಡುವ ಸಂಬಂಧ ಈಗಾಲೇ ತೀರ್ಮಾನ ಕೈಗೊಳ್ಳುವ ಅಗತ್ಯವಿಲ್ಲ. ಅಂದಿನ ಪರಿಸ್ಥಿತಿಯನ್ನು ಪರಿಗಣಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.