ಸಿಟಿ ಸ್ಕ್ಯಾನ್: ಬಡವರಿಗೆ 1500, ಇತರರಿಗೆ ಜಾಸ್ತಿ
- ಆಸ್ಪತ್ರೆಗಳಲ್ಲಿ ಸಿ.ಟಿ. ಹಾಗೂ ಎಚ್‌ಆರ್ ಸಿಟಿ ಸ್ಕ್ಯಾನ್‌ಗಳಿಗೆ ಶುಲ್ಕ ಮಿತಿ ನಿಗದಿ ಆದೇಶ ಪರಿಷ್ಕರಣೆ
- ಬಿಪಿಎಲ್ ಕಾರ್ಡ್‌ದಾರರಿಗೆ 1,500 ರು. ಹಾಗೂ ಇತರರಿಗೆ 2,500 ರು. ನಿಗದಿ
- ಆದೇಶ ಉಲ್ಲಂಘಿಸಿದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ ಹಾಗೂ ಕೆಪಿಎಂಇ ಕಾಯಿದೆ ಅಡಿ ಕ್ರಮ
ಬೆಂಗಳೂರು (ಮೇ.09): ರಾಜ್ಯದಲ್ಲಿ ಖಾಸಗಿ ಪ್ರಯೋಗಾಲಯಗಳು, ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನ್ ಹಾಗೂ ಎಚ್‌ಆರ್ ಸಿಟಿ ಸ್ಕ್ಯಾನ್‌ಗಳಿಗೆ 1,500 ರು. ಶುಲ್ಕ ಮಿತಿ ನಿಗದಿ ಮಾಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಬಿಪಿಎಲ್ ಕಾರ್ಡ್‌ದಾರರಿಗೆ 1,500 ರು. ಹಾಗೂ ಇತರರಿಗೆ 2,500 ರು. ನಿಗದಿ ಮಾಡಿ ಆದೇಶ ಹೊರಡಿಸಿದೆ.
ಸಿ.ಟಿ. ಹಾಗೂ ಎಚ್‌ಆರ್ ಸಿಟಿ ಸ್ಕ್ಯಾನ್ ಪರೀಕ್ಷೆಗೆ 1,500 ರು.ಗಿಂತ ಹೆಚ್ಚು ಶುಲ್ಕ ಪಡೆಯುವಂತಿಲ್ಲ. ಇನ್ನು ಎಕ್ಸ್-ರೇ ಹಾಗೂ ಡಿಜಿಟಲ್ ಎಕ್ಸ್-ರೇ ಪರೀಕ್ಷೆಗೆ 250 ರು.ಗಿಂತ ಹೆಚ್ಚು ಶುಲ್ಕ ಪಡೆಯುವಂತಿಲ್ಲ ಎಂದು ಸರ್ಕಾರ ಶುಕ್ರವಾರವಷ್ಟೇ ಹೇಳಿತ್ತು.
ಇದರ ಬೆನ್ನಲ್ಲೇ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬೆಂಗಳೂರು ಡಯಾಗ್ನಸ್ಟಿಕ್ ಸೆಂಟರ್ಸ್ ಅಸೋಸಿಯೇಷನ್ (ಎಡಿಸಿಬಿ) ನಿಯೋಗ, ನಮಗೆ ವಿದ್ಯುತ್ ಬಿಲ್‌ನಲ್ಲಿ ರಿಯಾಯಿತಿ ಇಲ್ಲ. ಬಾಡಿಗೆ, ಸಿಬ್ಬಂದಿ ವೇತನಕ್ಕೆ ಭಾರೀ ವೆಚ್ಚ ತಗಲುತ್ತದೆ. ಹೀಗಾಗಿ ಸಿ.ಟಿ. ಸ್ಕ್ಯಾನ್ ಹಾಗೂ ಎಚ್‌ಆರ್ ಸಿಟಿ ಸ್ಕ್ಯಾನ್ ಶುಲ್ಕವನ್ನು 3,500 ರಿಂದ 4 ಸಾವಿರ ರು. ನಡುವೆ ನಿಗದಿ ಮಾಡುವಂತೆ ಮನವಿ ಮಾಡಿದ್ದರು.
ಹಣ ವಸೂಲಿಗೆ ಕಡಿವಾಣ, ಸಿಟಿ ಸ್ಕ್ಯಾನಿಂಗ್‌ಗೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ
ಹೀಗಾಗಿ ಪರಿಷ್ಕೃತ ಆದೇಶ ಹೊರಡಿಸಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಬಿಪಿಎಲ್ ಕಾರ್ಡ್‌ದಾರರಿಗೆ ಸಿ.ಟಿ. ಹಾಗೂ ಎಚ್‌ಆರ್‌ಸಿಟಿ ಸ್ಕ್ಯಾನ್ 1,500 ರು. ಮಾತ್ರ ಪಡೆಯಬೇಕು. ಉಳಿದವರಿಗೆ 2,500 ರು. ಪಡೆಯಬೇಕು. ಎಲ್ಲ ವಯೋಮಾನದವರಿಗೂ ಇದೇ ಶುಲ್ಕ ಅನ್ವಯವಾಗಲಿದ್ದು, ಸ್ಯಾನಿಟೈಜೇಷನ್ ಸೇರಿದಂತೆ ಎಲ್ಲ ಶುಲ್ಕವೂ ಒಳಗೊಂಡಂತೆ ಈ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ ಹಾಗೂ ಕೆಪಿಎಂಇ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ.
ಬಿಪಿಎಲ್ ಕಾರ್ಡ್‌ದಾರರಿಗೆ ಸಿ.ಟಿ. ಹಾಗೂ ಎಚ್‌ಆರ್‌ಸಿಟಿ ಸ್ಕಾ್ಯನ್‌ಗೆ 1,500 ರು. ಮಾತ್ರ ಪಡೆಯಬೇಕು. ಉಳಿದವರಿಗೆ 2,500 ರು. ಪಡೆಯಬೇಕು. ಎಲ್ಲ ವಯೋಮಾನದವರಿಗೂ ಇದೇ ಶುಲ್ಕ ಅನ್ವಯ. ಸ್ಯಾನಿಟೈಜೇಷನ್ ಸೇರಿದಂತೆ ಎಲ್ಲವನ್ನೂ ಇದು ಒಳಗೊಂಡಿದೆ. ಇದಕ್ಕಿಂತ ಹೆಚ್ಚು ಪಡೆದರೆ ಕೇಸು ದಾಖಲಿಸಲಾಗುವುದು.
- ಜಾವೇದ್ ಅಖ್ತರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona