Asianet Suvarna News Asianet Suvarna News

ಕೋವಿಡ್‌ ಓಟಕ್ಕೆ ಲಗಾಮು: ಸಾವು ಗಣನೀಯ ಇಳಿಕೆ

*  ಸಾಲುಸಾಲು ಹಬ್ಬ, ಸಾಮಾನ್ಯ ಜನಜೀವನ ಮರಳಿದ್ದರೂ ಸೋಂಕು, ಸಾವು ಏರಿಕೆ ಇಲ್ಲ
*  13 ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಒಂದೂ ಸಾವು ದಾಖಲಾಗಿಲ್ಲ, ಸೋಂಕೂ ಇಳಿಕೆ
*  ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.89 ಕೋಟಿ ಮಂದಿ ಕೋವಿಡ್‌ ಲಸಿಕೆ ಪಡೆಯಲು ಅರ್ಹ 
 

Covid Death Ration Decrease in Karnataka grg
Author
Bengaluru, First Published Oct 7, 2021, 7:13 AM IST
  • Facebook
  • Twitter
  • Whatsapp

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಅ.07): ರಾಜ್ಯದಲ್ಲಿ ಕೋವಿಡ್‌-19ರ(Covid19) ಉಪಟಳ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು, ಸಾಲು ಸಾಲು ಹಬ್ಬ, ಸಾಮಾನ್ಯ ಜನಜೀವನ ಸ್ಥಿತಿ ಇದ್ದರೂ ಸೋಂಕಿನ ಪ್ರಕರಣ, ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ದರ ಶೇ. 0.53ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ರಾಜ್ಯದಲ್ಲಿ ಶೇ.81ರಷ್ಟು ಅರ್ಹ ಫಲಾನುಭವಿಗಳು ಮೊದಲ ಡೋಸ್‌, ಶೇ.36ರಷ್ಟು ಜನರು ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ರಾಜ್ಯದ 13 ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್‌ನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. ಆರೋಗ್ಯ ಇಲಾಖೆ ಅಕ್ಟೋಬರ್‌ 5ರವರೆಗಿನ ಮಾಹಿತಿಯ ಪ್ರಕಾರ ಬಳ್ಳಾರಿ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ಉಡುಪಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಳೆದ ಏಳು ದಿನದಿಂದ ಕೋವಿಡ್‌ನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. ಉಳಿದ ಜಿಲ್ಲೆಗಳಲ್ಲೂ ಕೋವಿಡ್‌ನಿಂದ ಮೃತರಾಗುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಬೆಂಗಳೂರು ನಗರದಲ್ಲಿ ಪ್ರತಿದಿನ ನಾಲ್ಕೈದು ಸಾವು ವರದಿಯಾಗುತ್ತಿದ್ದರೆ ಉಳಿದ ಜಿಲ್ಲೆಗಳಲ್ಲಿ ಒಂದೆರಡು ಸಾವು ಘಟಿಸುತ್ತಿತ್ತು.

ಇದೇ ವೇಳೆ ಕೋವಿಡ್‌ ಪ್ರಕರಣದಲ್ಲಿಯೂ ಗಣನೀಯ ಇಳಿಕೆ ದಾಖಲಾಗಿದೆ. ಸೆಪ್ಟೆಂಬರ್‌ ತಿಂಗಳ ಮೊದಲ ವಾರ 5,612 ಪ್ರಕರಣ ವರದಿಯಾಗಿದ್ದರೆ ಅಕ್ಟೋಬರ್‌ನ ಮೊದಲ ವಾರ 3,676 ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ ಜಿಲ್ಲೆಗಳಲ್ಲಿನ ಸಕ್ರಿಯ ಪ್ರಕರಣಗಳು ಕೂಡ ಕಡಿಮೆ ಆಗಿದೆ.

ಅ.6 ರಂದು ಬೀದರ್‌ನಲ್ಲಿ 2, ಗದಗ ಮತ್ತು ರಾಯಚೂರು ತಲಾ 4, ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ ತಲಾ 5 ಸಕ್ರಿಯ ಪ್ರಕರಣಗಳಿದೆ. ವಿಜಯಪುರ 10, ಕಲಬುರಗಿ 14, ಚಿಕ್ಕಬಳ್ಳಾಪುರ 17, ರಾಮನಗರ 23, ಕೊಪ್ಪಳ 27, ಚಾಮರಾಜನಗರ 38, ದಾವಣಗೆರೆ 39, ಧಾರವಾಡ 43 ಮತ್ತು ಕೋಲಾರದಲ್ಲಿ 45 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ 7,572 ಹಾಗೂ ದಕ್ಷಿಣ ಕನ್ನಡದಲ್ಲಿ 744 ಸಕ್ರಿಯ ಪ್ರಕರಣಗಳಿವೆ.

ಕೊರೋನಾಗೆ 276 KSRTC ನೌಕರರು ಬಲಿ: 11 ಮಂದಿಗೆ ಮಾತ್ರ ಪರಿಹಾರ..!

ಲಸಿಕಾರಣವೂ ಚುರುಕು:

ರಾಜ್ಯದಲ್ಲಿ ಅರ್ಹ ಫಲಾನುಭವಿಗಳಲ್ಲಿ ಶೇ. 81 ಮಂದಿ ಮೊದಲ ಡೋಸ್‌ ಹಾಗೂ ಶೇ.36 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ಎರಡು ಜಿಲ್ಲೆಗಳು ಶೇ. 100 ಮೀರಿ ಮೊದಲ ಡೋಸ್‌ ನೀಡಿದ್ದು ಉಳಿದ ಏಳು ಜಿಲ್ಲೆಯಲ್ಲಿ ಶೇ. 90 ಮಂದಿ ಫಲಾನುಭವಿಗಳಿಗೆ ಲಸಿಕೆ(Vaccine) ನೀಡಲಾಗಿದೆ.

ಬೆಂಗಳೂರು(Bengaluru) ನಗರ ಜಿಲ್ಲೆ (ಬಿಬಿಎಂಪಿ ಹೊರತು ಪಡಿಸಿ) ಮತ್ತು ಉಡುಪಿ ಜಿಲ್ಲೆಯಲ್ಲಿ ಎಲ್ಲ ಅರ್ಹ ಫಲಾನುಭವಿಗಳು ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶೇ.99, ಹಾಸನ ಶೇ.94, ದಕ್ಷಿಣ ಕನ್ನಡ ಶೇ.93, ರಾಮನಗರ ಮತ್ತು ಉತ್ತರ ಕನ್ನಡ ಶೇ.92, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಶೇ.91 ಜನರಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ.

ಬಿಬಿಎಂಪಿಯನ್ನು(BBMP) ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ 9.81 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಇದ್ದರೂ 11.92 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 87.21 ಲಕ್ಷ ಮಂದಿಗೆ ಅರ್ಹ ಫಲಾನುಭವಿಗಳಲ್ಲಿ 77.64 ಲಕ್ಷ ಮಂದಿ ಲಸಿಕೆ ಪಡೆದಿದ್ದು ಶೇ. 89 ಗುರಿ ಸಾಧಿಸಲಾಗಿದೆ.

ಉಡುಪಿಯಲ್ಲಿ 9.01 ಲಕ್ಷ ಮಂದಿಗೆ ಲಸಿಕೆ ಗುರಿ ಪೈಕಿ 9.08 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಬಿಬಿಎಂಪಿ ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.58 ಮಂದಿ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.50 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಉಡುಪಿ (ಶೇ.48), ಕೊಡಗು (ಶೇ.46) ನಂತರದ ಸ್ಥಾನದಲ್ಲಿದೆ.

ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಜಿಲ್ಲೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆದರೆ ಯಾದಗಿರಿ ಮತ್ತು ಕಲಬುರಗಿಯಲ್ಲಿ ಶೇ. 57 ಫಲಾನುಭವಿಗಳು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.89 ಕೋಟಿ ಮಂದಿ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾಗಿದ್ದು, ಈ ಪೈಕಿ ಈವರೆಗೆ 3.96 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಇನ್ನೂ 93 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿಯಿದೆ.
 

Follow Us:
Download App:
  • android
  • ios