ಕೊರೋನಾಗೆ 276 KSRTC ನೌಕರರು ಬಲಿ: 11 ಮಂದಿಗೆ ಮಾತ್ರ ಪರಿಹಾರ..!
* ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ ಘೋಷಿಸಿದ್ದ ಸರ್ಕಾರ
* ಕೊರೋನಾ ವಾರಿಯರ್‌ಗಳಾಗಿ ಕಾರ್ಯ ನಿರ್ವಹಿಸಿದ್ದ ಸಾರಿಗೆ ನೌಕರರು
* ಮೃತ ನೌಕರರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂಬುದು ಸಾರಿಗೆ ನೌಕರರ ಆಗ್ರಹ
ಬೆಂಗಳೂರು(ಅ.06): ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಕೊರೋನಾ(Coronavirus) ಮೊದಲ ಹಾಗೂ ಎರಡನೇ ಅಲೆಯಲ್ಲಿ ಒಟ್ಟು 276 ಮಂದಿ ನೌಕರರು ಮೃತಪಟ್ಟಿದ್ದಾರೆ. ಈ ಪೈಕಿ ಕೇವಲ 11 ಮೃತ ನೌಕರರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಲಾಗಿದೆ !
ಕೆಎಸ್‌ಆರ್‌ಟಿಸಿಯಲ್ಲಿ(KSRTC) ಕೊರೋನಾ ಸೋಂಕಿಗೆ ಬಲಿಯಾದ ಒಟ್ಟು 96 ನೌಕರರ ಈ ಪೈಕಿ ಏಳು ಮೃತ ನೌಕರರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಬಿಎಂಟಿಸಿಯಲ್ಲಿ 108 ಮೃತ ನೌಕರರ ಪೈಕಿ ನಾಲ್ವರು ಮೃತ ನೌಕರರ ಕುಟುಂಬಕ್ಕೆ ಮಾತ್ರ ಪರಿಹಾರ(Compensation) ನೀಡಲಾಗಿದೆ. ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ 48 ಹಾಗೂ ಕೆಕೆಆರ್‌ಟಿಸಿಯಲ್ಲಿ 24 ನೌಕರರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಎರಡೂ ನಿಗಮಗಳಲ್ಲಿ ಓರ್ವ ಮೃತ ನೌಕರನ ಕುಟುಂಬಕ್ಕೂ ಪರಿಹಾರ ನೀಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಅವರಿಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಈ ಮಾಹಿತಿ ನೀಡಿವೆ.
KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ನ ಬಾಕಿ ಅರ್ಧ ಸಂಬಳ
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಾರಿಗೆ ನೌಕರರು ಕೊರೋನಾ ವಾರಿಯರ್‌ಗಳಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಸಾರಿಗೆ ನೌಕರರು ಕೊರೋನಾ ವಾರಿಯರ್‌ಗಳಾಗಿ ಪರಿಗಣಿಸಿದ್ದು, ಕೊರೋನಾ ಸೋಂಕಿನಿಂದ ಮೃತಪಟ್ಟಲ್ಲಿ 30 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಅದರಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಸಾಂಕೇತಿಕವಾಗಿ ನಾಲ್ವರು ಮೃತ ನೌಕರರ ಕುಟುಂಬಕ್ಕೆ ತಲಾ 30 ಲಕ್ಷ ರು. ಮೊತ್ತದ ಪರಿಹಾರ ಚೆಕ್ ವಿತರಿಸಲಾಗಿತ್ತು. ಇದಾದ ಬಳಿಕ ಮೃತ ನೌಕರರಿಗೆ ಪರಿಹಾರ ವಿತರಿಸಿಲ್ಲ.
ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ ಬಿಎಂಟಿಸಿ ನೌಕರರ ಪ್ರಸನ್ನ ಕುಮಾರ್ ಎಂಬುವವರ ಪತ್ನಿ ಹಾಗೂ ಇಬ್ಬರು ಮಕ್ಕಳು ಕೆಲ ದಿನಗಳ ಹಿಂದೆಯಷ್ಟೇ ನೆಲಮಂಗಲ ಸಮೀಪದ ಮಾದನಾಯನಹಳ್ಳಿಯಲ್ಲಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆ ಬರೆದಿದ್ದ ಮರಣಪತ್ರದಲ್ಲಿ ಬಿಎಂಟಿಸಿ ನೌಕರರಾಗಿದ್ದ ಪತಿ ಪ್ರಸನ್ನ ಕುಮಾರ್ ಅವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಉಲ್ಲೇಖಿಸಿದ್ದರು. ಕೋರೋನಾ ಸೋಂಕಿನಿಂದ ಮೃತಪಟ್ಟನೌಕರರ ಕುಟುಂಬಗಳು, ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಸಾರಿಗೆ ಸಚಿವರು ಮೃತ ನೌಕರರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂದು ಸಾರಿಗೆ ನೌಕರರ ಸಂಘಟನೆಗಳು ಆಗ್ರಹಿಸುತ್ತಿವೆ.