Asianet Suvarna News Asianet Suvarna News

Covid In Karnataka: ರಾಜ್ಯದ 16 ಜಿಲ್ಲೆಗಳಲ್ಲಿ ಕೋವಿಡ್ ಏರಿಕೆ: ಶಿವಮೊಗ್ಗ, ಕೊಪ್ಪಳದಲ್ಲಿ 400% ಹೆಚ್ಚಳ!

* ಶಿವಮೊಗ್ಗ, ಕೊಪ್ಪಳದಲ್ಲಿ 400% ಹೆಚ್ಚಳ

* ರಾಜ್ಯದ 16 ಜಿಲ್ಲೆಗಳಲ್ಲಿ ಕೋವಿಡ್ ಏರಿಕೆ

* ನಿಯಂತ್ರಣಕ್ಕೆ ಬಂದಿದ್ದ ಜಿಲ್ಲೆಗಳಲ್ಲೂ ಸೋಂಕಿನ ಅಬ್ಬ ರ

Covid cases Are Rising In 16 Districts Of Karnataka pod
Author
Bangalore, First Published Dec 6, 2021, 11:21 AM IST

ಬೆಂಗಳೂರು(ಡಿ.06): ರಾಜ್ಯದ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ವಾರದಿಂದ ವಾರಕ್ಕೆ ಕಡಿಮೆ ಆಗುತ್ತಿದ್ದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇದೀಗ ಮತ್ತೆ ಹೆಚ್ಚಾಗುತ್ತಿದೆ. ನವೆಂಬರ್ ಮೊದಲ ವಾರ ರಾಜ್ಯದಲ್ಲಿ ಕೋವಿಡ್‌ನ ಬೆಳವಣಿಗೆ ಕಡಿಮೆಯಾಗಿತ್ತು. ಆದರೆ ಡಿಸೆಂಬರ್ ಮೊದಲ ವಾರ ರಾಜ್ಯದಲ್ಲಿ ಕೋವಿಡ್ ಪ್ರಕರಣ ಏರಿಕೆ ಕಂಡಿದೆ. ನವೆಂಬರ್ ಮೊದಲ ವಾರ ಕೊಡಗು, ಹಾವೇರಿ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ

ಮಾತ್ರ ಹೆಚ್ಚಿನ ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ಉಳಿದ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಇದ್ದವು. ಆದರೆ ಒಂದು ತಿಂಗಳ ನಂತರ ಅಂದರೆ ಡಿಸೆಂಬರ್ ಮೊದಲ ವಾರದಲ್ಲಿ ಕೋವಿಡ್ ತಹಬಂದಿಗೆ ಬಂದಿದ್ದ ಜಿಲ್ಲೆಗಳಲ್ಲಿ ಈ ಹಿಂದಿನ ವಾರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪ್ರಕರಣ ವರದಿಯಾಗಿವೆ. ನವೆಂಬರ್ 26 ರಿಂದ ಡಿ.3ರ ಅವಧಿಯಲ್ಲಿ ಅದರ ಹಿಂದಿನ ವಾರಕ್ಕೆ (ನ.18 ರಿಂದ ನ.25) ಹೋಲಿಸಿದರೆ ರಾಜ್ಯದ ಕೋವಿಡ್ ಪ್ರಕರಣ ಗಳಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ನ.26ರಿಂದ ಡಿ.3ರ ಅವಧಿಯಲ್ಲಿ 2,202 ಪ್ರಕರಣ ದಾಖಲಾಗಿದ್ದು, ಅದರ ಹಿಂದಿನ ವಾರ 1,835 ಪ್ರಕರಣ ದಾಖಲಾಗಿದ್ದವು. ನ.12ರಿಂದ ನ.19ರ ಅವಧಿಯಲ್ಲಿ ಕೇವಲ 1,588 ಪ್ರಕರಣ ಪತ್ತೆಯಾಗಿದ್ದವು.

ಅಂದರೆ ಕಳೆದ ಹದಿನೈದು ದಿನದ ಅವಧಿಯಲ್ಲಿ ರಾಜ್ಯದ ಕೋವಿಡ್ ಪ್ರಕರಣಗಳಲ್ಲಿ ಶೇ.25ರಷ್ಟು ಜಿಗಿತ ದಾಖಲಾಗಿದೆ. ಶಿವಮೊಗ್ಗ, ಕೊಪ್ಪಳದಲ್ಲಿ ನಾಲ್ಕು ಪಟ್ಟು, ಹಾವೇರಿ, ಬಳ್ಳಾರಿ, ದಾವಣಗೆರೆ, ಉತ್ತರ ಕನ್ನಡ, ಕೊಡಗು, ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಎರಡು ಪಟ್ಟಿಗಿಂತ ಹೆಚ್ಚು ವರದಿಯಾಗಿದೆ. ಹಾಸನ, ದಾವಣಗೆರೆ, ಚಾಮರಾಜನಗರ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದಿನ ವಾರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ಕೋವಿಡ್ ನಿಯಂತ್ರಣದಲ್ಲಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವುದು ಗಾಬರಿ ಹುಟ್ಟಿಸುತ್ತಿದೆ.

ಮತ್ತೆ 74 ಮಕ್ಕಳಿಗೆ ಕೊರೋನಾ

ನವೋದಯದಲ್ಲಿ 62, ಆನೇಕಲ್ ಶಾಲೆಯಲ್ಲಿ 12 ಕೇಸ್ ಬಾಳೆಹೊನ್ನೂರು/ಆನೇಕಲ್: ಶಾಲೆಕಾಲೇಜುಗಳಲ್ಲಿ ಕೊರೋನಾ ಸೋಂಕು ತಗಲುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಾನುವಾರ ಮತ್ತೆ ರಾಜ್ಯದ ಎರಡು ಕಡೆ ಒಟ್ಟು 74 ವಿದ್ಯಾರ್ಥಿಗಳು, ಬೋಧಕರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಕಳೆದ 12 ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿನ ಒಟ್ಟು 501 ಮಂದಿಗೆ ಸೋಂಕು ತಗಲಿದಂತಾಗಿದೆ. ಚಿಕ್ಕಮಗಳೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 62 ಮಂದಿಗೆ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸ್ಫೂರ್ತಿ ನರ್ಸಿಂಗ್ ಕಾಲೇಜಿನಲ್ಲಿ 7 ಮತ್ತು ದಿ ಇಂಟರ್‌ನ್ಯಾಶನಲ್ ಸ್ಕೂಲಿನಲ್ಲಿ 5 ಮಂದಿಗೆ ಸೋಂಕು ತಗುಲಿದೆ

Follow Us:
Download App:
  • android
  • ios