ನವದೆಹಲಿ(ನ.04): ಅ.3-ನ.4ರ ಅವಧಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರ ಪ್ರದೇಶಗಲ್ಲಿ ಕೋವಿಡ್‌-19 ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ಹೇಳಿದೆ. ಇದೇ ವೇಳೆ ಕೇರಳ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಸೋಂಕು ಏರುಗತಿಯಲ್ಲಿ ಸಾಗಿದೆ ಎಂದು ಮಾಹಿತಿ ನೀಡಿದೆ.

ಕೊರೋನಾ ಅಂಕಿ ಅಂಶಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ಕಳೆದ ಏಳು ವಾರಗಳ ಅವಧಿಯಲ್ಲಿ ಸೋಂಕಿತರು ಹಾಗೂ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಇಳಿಕೆಯಾಗಿದೆ. ಇದೇ ವೇಳೆ ದೈನಂದಿನ 90,346 ಕೇಸುಗಳು ಪತ್ತೆಯಾಗುತ್ತಿದ್ದರೇ, ಈಗ ಅದು 45,884ಕ್ಕೆ ಇಳಿದೆ. ಸಾವಿರಕ್ಕಿಂತ ಹೆಚ್ಚು ದಾಖಲಾಗುತ್ತಿದ್ದ ಸಾವಿನ ಸಂಖ್ಯೆ 500ಕ್ಕೆ ಇಳಿದಿದೆ. ಈ ವರೆಗೆ 11 ಕೋಟಿಗೂ ಅಧಿಕ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇರಳ, ದೆಹಲಿಯಲ್ಲಿ ದಾಖಲೆ ಹೊಸ ಕೇಸ್‌

ಕಳೆದೊಂದು ವಾರದಿಂದ ದೇಶದಲ್ಲೇ ಅತಿ ಹೆಚ್ಚು ಕೊರೋನಾ ಕೇಸು ದಾಖಲಾಗುತ್ತಿರುವ ಪುಟ್ಟರಾಜ್ಯ ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ ಮಂಗಳವಾರವೂ ಅದೇ ಸಂಪ್ರದಾಯ ಮುಂದುವರೆದಿದೆ. ನಿನ್ನೆ ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು 6862 ಪ್ರಕರಣ ದಾಖಲಾಗಿದ್ದರೆ, ದೆಹಲಿಯಲ್ಲಿ ಈವರೆಗಿನ ಅತ್ಯಧಿಕ 6700 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.

ದೆಹಲಿಯಲ್ಲಿ ಹಬ್ಬದ ಋುತು ಹಾಗೂ ವಾಯು ಮಾಲಿನ್ಯದ ನಡುವೆಯೇ ಕೊರೋನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ನಡೆಸಿದ 59,540 ಟೆಸ್ಟ್‌ಗಳ ಪೈಕಿ 6725 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ.

ಕೇರಳದಲ್ಲಿ 6862 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.50 ಲಕ್ಷಕ್ಕೆ ತಲುಪಿದೆ.