ಬೆಂಗಳೂರು(ಜ.06): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹರಡಿರುವ ಕೊರೋನಾ ವೈರಸ್‌ಗೆ ಬಾಂಗ್ಲಾದೇಶದ ಕೊರೋನಾ ವೈರಸ್‌ನ ಹತ್ತಿರದ ನಂಟಿದೆ ಎಂಬ ಮಹತ್ವದ ಅಂಶವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಕೋವಿಡ್‌-19ರ ವೈರಾಣುವಿನ ಜೀವ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಐಐಎಸ್‌ಸಿಯ ಜೀವ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಉತ್ಪಲ್‌ ತಾತು ನೇತೃತ್ವದ ತಂಡವು ವಿವಿಧ ದೇಶ ಮತ್ತು ಪ್ರದೇಶಗಳ ಕೊರೋನಾ ವೈರಾಣುವಿನ ಪ್ರೊಟೀಯೊ ಜೆನೊಮಿಕ್‌ ವಿಶ್ಲೇಷಣೆಯನ್ನು ನೆಕ್ಸ್ಟ್‌ಜನರೇಷನ್‌ ಸಿಕ್ವೆನ್ಸಿಂಗ್‌ (ಎನ್‌ಜಿಎಸ್‌) ಮೂಲಕ ನಡೆಸಿ ಈ ಅಂಶವನ್ನು ಕಂಡುಕೊಂಡಿದೆ.

ಫೆಬ್ರವರಿಯ ‘ಪ್ರೊಟಿಯೋಮ್‌ ರೀಸಚ್‌ರ್‍’ ನಿಯತಕಾಲಿಕದಲ್ಲಿ ಈ ಕುರಿತ ಸಂಶೋಧನಾ ವರದಿ ಪ್ರಕಟವಾಗಿದೆ. ಕಳೆದ ವರ್ಷವೇ ಸಂಶೋಧನೆಯನ್ನು ನಡೆಸಿ ವರದಿಯನ್ನು ಪ್ರಕಟಿಸಲು ಸಲ್ಲಿಸಲಾಗಿತ್ತು. ಬೆಂಗಳೂರಿನಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟವ್ಯಕ್ತಿಗಳ ಮೂಗಿನ ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಿದ್ದೆವು. ಈ ಸಂದರ್ಭದಲ್ಲಿ ಪ್ರತಿ ನಮೂನೆಯಲ್ಲಿಯೂ 11 ಅಥವಾ 11ಕ್ಕಿಂತ ಹೆಚ್ಚು ರೂಪಾಂತರ ಕಂಡು ಬಂದಿದೆ. ಬೆಂಗಳೂರಿನಲ್ಲಿ ಸಂಗ್ರಹಿಸಿದ ನಮೂನೆಯನ್ನು ಭಾರತ ಮತ್ತು ಜಗತ್ತಿನ ಇತರ 20 ದೇಶಗಳ ಪ್ರಭೇದಗಳೊಂದಿಗೆ ತಾಳೆ ನೋಡಲು ಪೈಲೋಜೆನೆಟಿಕ್‌ (ವೈರಾಣುವಿನ ವಂಶವಾಶಿ ವಿಶ್ಲೇಷಣೆ ನಡೆಸುವ ವಿಧಾನ) ವಿಶ್ಲೇಷಣೆ ನಡೆಸಿದೆವು. ಆಗ ಬೆಂಗಳೂರಿನ ವೈರಸ್‌ಗೆ ಬಾಂಗ್ಲಾ ದೇಶದ ಒಂದು ಪ್ರಭೇದದೊಂದಿಗೆ ಹತ್ತಿರದ ಸಾಮ್ಯತೆ ಇರುವುದು ಬೆಳಕಿಗೆ ಬಂದಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನಿಂದ ಮೂರು ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮೆಗಾ ಎಕ್ಸ್‌ ಸಾಫ್ಟ್‌ವೇರ್‌ ಬಳಸಿ ಕೊರೋನಾ ವೈರಸ್‌ನ ಜಾಗತಿಕ ಪೈಲೊಜೆನೆಟಿಕ್‌ ವೃಕ್ಷ ರಚಿಸಿ ಸಂಶೋಧನೆ ನಡೆಸಲಾಗಿತ್ತು. ಪೈಲೊಜೆನೆಟಿಕ್‌ ವಿಶ್ಲೇಷಣೆಯಲ್ಲಿ ಮಾದರಿ 2 ಮತ್ತು 3 ತೀರಾ ಹತ್ತಿರದ ಸಂಬಂಧ ಹೊಂದಿದ್ದು, ಈ ಮೂರು ಮಾದರಿಗಳು ಕೂಡ ಬಾಂಗ್ಲಾದೇಶದ ಒಂದು ಪ್ರಭೇದದೊಂದಿಗೆ ಹೆಚ್ಚು ತಾಳೆ ಆಗುತ್ತದೆ. ಈ ರೂಪಾಂತರಿ ವೈರಸ್‌ಗೆ ಫ್ರಾನ್ಸ್‌ನ ವೈರಾಣು ಮೂಲವಾಗಿರುವ ಸಾಧ್ಯತೆ ಸಂಶೋಧನೆ ವೇಳೆ ಕಂಡು ಬಂದಿದೆ ಎಂದರು.

ಬೆಂಗಳೂರಲ್ಲಿ ವಿಶ್ವದಲ್ಲೇ ಅತಿಹೆಚ್ಚು ರೂಪಾಂತರ

ಅಧ್ಯಯನದವೇಳೆ ಕರೋನಾ ವೈರಸ್‌ ವಿಶ್ವದಲ್ಲೇ ಅತಿ ಹೆಚ್ಚು ರೂಪಾಂತರವನ್ನು ಅಂದರೆ 27 ರೂಪಾಂತರವನ್ನು ಬೆಂಗಳೂರಿನಲ್ಲಿ ಕಂಡಿದೆ ಎಂಬ ಆತಂಕಕಾರಿ ಅಂಶ ಕಂಡು ಬಂದಿದೆ. ಇದು ಜಾಗತಿಕ ರೂಪಾಂತರದ ಸರಾಸರಿ ಶೇ.7.3 ಹಾಗೂ ಭಾರತದ ಸರಾಸರಿ ಶೇ.8.4ಕ್ಕಿಂತ ಅಧಿಕ. ಬೆಂಗಳೂರಿನಲ್ಲಿ ಡಿ614ಜಿ ಪ್ರಭೇದದ ಕೊರೋನಾ ಹೆಚ್ಚಾಗಿ ಕಂಡು ಬರುತ್ತಿದೆ. ಕೋವಿಡ್‌ ಪೀಡಿತರಲ್ಲಿ 441 ಭಿನ್ನ ಬಗೆಯು ಪ್ರೊಟೀನ್‌ ಕಂಡುಬಂದಿದ್ದು, ಇದು ದೇಹದ ರೋಗ ನಿರೋಧಕ ಶಕ್ತಿ ಸ್ಪಂದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಪ್ರೊಟೋಮಿಕ್‌ ವಿಶ್ಲೇಷಣೆಯಲ್ಲಿ ಕೋವಿಡ್‌ ಪೀಡಿತರಲ್ಲಿ 13 ಪ್ರೊಟೀನ್‌ಗಳನ್ನು ಹೊಸದಾಗಿ ಗುರುತಿಸಲಾಗಿದೆ.

ಭಾರತದಲ್ಲಿನ ವೈರಸ್‌ಗೂ ಬಾಂಗ್ಲಾ, ನೇಪಾಳ, ಹಾಂಕಾಂಗ್‌ ನ ವೈರಸ್‌ಗೂ ಹೆಚ್ಚಿನ ಸಾಮ್ಯತೆಯಿದೆ. ಹಾಗೆಯೇ ದೇಶದೊಳಗೂ ವೈರಸ್‌ ಅನೇಕ ರೂಪಾಂತರ ಹೊಂದಿದೆ. ಅಷ್ಟೇ ಅಲ್ಲದೆ ಭಾರತದಲ್ಲಿನ ವೈರಸ್‌ಗೆ ಅನೇಕ ಮೂಲಗಳಿವೆ ಎಂದು ಐಐಎಸ್‌ಸಿಯ ಸಂಶೋಧಕರು ಕಂಡುಕೊಂಡಿದ್ದಾರೆ.