ಬೆಂಗಳೂರು (ಫೆ.23):  ನೆರೆಯ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 72 ಗಂಟೆಯಲ್ಲಿ ಪಡೆದಿರುವ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಇದಕ್ಕಾಗಿ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್‌, ರಾಯಚೂರು ಜಿಲ್ಲೆಗಳಲ್ಲಿನ ಅಂತಾರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಶನಿವಾರ ರಾತ್ರಿಯಿಂದಲೇ ಪೊಲೀಸರೊಂದಿಗೆ ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.

ಏತನ್ಮಧ್ಯೆ ಬಸ್‌ಗಳಲ್ಲಿ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನೂ ತಪಾಸಣೆ ನಡೆಸುತ್ತಿರುವುದರಿಂದ ಚೆಕ್‌ಪೋಸ್ಟ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿನಿಂತ ಪರಿಣಾಮ ಸವಾರರು, ವೃದ್ಧರು, ಮಕ್ಕಳು, ಮಹಿಳೆಯರು ಗಂಟೆಗಟ್ಟಲೆ ಪರದಾಡುವಂತಾಗಿದೆ. ರಾಜ್ಯಾಡಳಿತದ ಈ ಕ್ರಮ ಅನ್ಯ ರಾಜ್ಯದ ವಾಹನ ಸವಾರರಿಗೆ ಬಿಸಿತುಪ್ಪವಾಗಿ ಪರಿಣಾಮಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗಗಳಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೊಗನೋಳ್ಳಿ, ವಿಜಯಪುರ ಜಿಲ್ಲೆಯ ಶಿರಾಡೋಣ, ಧೂಳಖೇಡ, ಕಲಬುರಗಿ ಜಿಲ್ಲೆಯ ಹಿರೋಳಿ, ಖಜೂರಿ, ನಿಂಬಾಳ, ಬಳ್ಳೂರ್ಗಿ, ಮಾಶಾಳ, ಬೀದರ್‌ ಜಿಲ್ಲೆಯ ಚಂಡಕಾಪೂರ, ರಾಯಚೂರು ಜಿಲ್ಲೆಯ ಶಕ್ತಿನಗರ, ಯರಗೇರಾ, ತಿಂಥಿಣಿ, ಹೂವಿನಹೆಡಗಿ, ರೋಡಲಬಂಡಾಗಳ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇಲ್ಲೆಲ್ಲ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದೆ. ಜೊತೆಗೆ ಥರ್ಮಲ್‌ ಸ್ಕ್ರೀನಿಂಗ್‌, ಪಲ್ಸ್‌ ಅಕ್ಸಿ ಮೀಟರ್‌ನಿಂದ ತಪಾಸಣೆಯನ್ನೂ ಮಾಡಲಾಗುತ್ತಿದೆ. ಇದೇವೇಳೆ ಯಾದಗಿರಿ ರೈಲುನಿಲ್ದಾಣ, ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ತಂಡಗಳು ಬೀಡುಬಿಟ್ಟಿದ್ದು, ಪ್ರಯಾಣಿಕರ ಕೋವಿಡ್‌ ಪ್ರಮಾಣಪತ್ರಗಳನ್ನು ಪರಿಶೀಲಿಸುತ್ತಿದೆ. ಈ ನಡುವೆ ಕೆಲವೆಡೆ ನೆಗೆಟಿವ್‌ ಪ್ರಮಾಣ ಪತ್ರವಿಲ್ಲದಿದ್ದರೂ ಕೇವಲ ಸ್ಕ್ರೀನಿಂಗ್‌ ನಡೆಸಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿವೆ.

ಮಾಸ್ಕ್, ಅಂತರ ಮರೆತ್ರೆ, ಜನ- ಜಾತ್ರೆ ಹೀಗೆ ಇದ್ರೆ ಕೊರೊನಾ 2 ನೇ ಅಲೆ .

ಇನ್ನು ಕರ್ನಾಟಕವನ್ನು ಕೇರಳದೊಂದಿಗೆ ಸಂಧಿಸುವ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ, ನೆಟ್ಟಣಿಗೆ ಮುಡ್ನೂರು, ಜಾಲ್ಸೂರು, ಕೊಡಗು ಜಿಲ್ಲೆಯ ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ, ಸಂಪಾಜೆ, ಮೈಸೂರು ಜಿಲ್ಲೆಯ ಬಾವಲಿ, ಚಾಮರಾಜನಗರ ಜಿಲ್ಲೆಯ ಮೂಲೆಹೊಳೆ ಚೆಕ್‌ಪೋಸ್ಟ್‌ಗಳಲ್ಲೂ ತಹಸೀಲ್ದಾರ್‌, ಪೊಲೀಸ್‌, ಆರೋಗ್ಯ ಇಲಾಖೆಯ ಸಿಬ್ಬಂದಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ.

ಕೇರಳ ನಾಗರಿಕರಿಂದ ರಸ್ತೆತಡೆ ಪ್ರತಿಭಟನೆ

ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರವಿಲ್ಲದರಿಗೆ ರಾಜ್ಯಪ್ರವೇಶ ನಿರಾಕರಣೆ ವಿರೋಧಿಸಿ ಅನ್ಯರಾಜ್ಯದ ನಾಗರಿಕರು ಚೆಕ್‌ಪೋಸ್ಟ್‌ಗಳಲ್ಲಿ ಸೋಮವಾರ ರಸ್ತೆತಡೆ ಪ್ರತಿಭಟನೆ ನಡೆಸಿ ಕರ್ನಾಟಕದಿಂದ ಕೇರಳ ಪ್ರವೇಶಿಸುವ ವಾಹನಗಳನ್ನು ತಡೆದಿರುವ ಪ್ರತ್ಯೇಕ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಮತ್ತು ಮೈಸೂರು ಜಿಲ್ಲೆಗಳ ಬಾವಲಿಗಳಿಂದ ವರದಿಯಾಗಿವೆ. ತಲಪಾಡಿಯಲ್ಲಿ ರಸ್ತೆ ಮೇಲೆ ಸುಮಾರು 1 ಗಂಟೆ ಮಲಗಿ ಪ್ರತಿಭಟಿಸಿದ ಕಾಸರಗೋಡು ಗಡಿಪ್ರದೇಶದ ನಾಗರಿಕರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಏಕಾಏಕಿ ಇಂಥ ಕಾನೂನು ಜಾರಿಯಿಂದ ಗಡಿನಾಡಿನ ವಿದ್ಯಾರ್ಥಿಗಳು, ಉದ್ಯೋಗಿಗಳು ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಮಂಜೇಶ್ವರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಎಚ್‌.ಡಿ.ಕೋಟೆ ತಾಲೂಕಿನ ಬಾವಲಿಯಲ್ಲೂ ರಾಜ್ಯದ ಅಧಿಕಾರಿಗಳು ಮತ್ತು ಕೇರಳ ವಯನಾಡಿನ ಶಾಸಕರು, ಅಧಿಕಾರಿಗಳು ಸಂಧಾನ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.