ಬೆಂಗಳೂರು (ಅ.06):  ಲಾಕ್‌​ಡೌನ್‌ ತೆರವು ಆಗು​ತ್ತಿ​ದ್ದಂತಯೇ ಜನರು ಈಗ ಸಮೀಪದ ಕಾಡುಗಳು, ಗಿರಿಧಾಮ, ರೆಸಾರ್ಟ್‌ಗಳಿಗೆ ತೆರಳುವ ಮೂಲಕ ಸಂಭ್ರಮಿಸತೊಡಗಿದ್ದಾರೆ. ಕಳೆದ ಆರು ತಿಂಗಳಿಂದ ಪ್ರವಾಸಿಗರು ಇಲ್ಲದೇ ಬಣಗುಡುತ್ತಿದ್ದ ಪ್ರವಾಸೋದ್ಯಮ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ಇದೇ ವೇಳೆ, ವಿಶೇಷವಾಗಿ ಹದಿ ಹರೆಯದ ಯುವಜನರು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿನ ಯಾವುದೇ ಭಯವಿಲ್ಲದೇ ಈ ಸ್ಥಳಗಳಿಗೆ ದಾಂಗುಡಿ ಇಡುತ್ತಿರುವುದು ಆತಂಕದ ವಿಷಯವಾಗಿದೆ.

ಲಾಕ್‌ಡೌನ್‌ ಜಾರಿ, ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಮನೆಯಲ್ಲೇ ಇದ್ದ ಯುವಜನರು, ಸರ್ಕಾರಗಳು ಬಹುತೇಕ ನಿರ್ಬಂಧಗಳನ್ನು ವಾಪಸು ಅನ್‌ಲಾಕ್‌ ಘೋಷಿಸುತ್ತಿದ್ದಂತೆ ಬೈಕ್‌, ಕಾರು ಇತ್ಯಾದಿಗಳಲ್ಲಿ ಆಗಮಿಸತೊಡಗಿದ್ದಾರೆ. ವಾರಾಂತ್ಯದ ವೇಳೆಯಂತೂ ಸಾವಿರಾರು ಜನರು ಬರುತ್ತಿದ್ದಾರೆ. ಆದರೆ ಸಂಭ್ರಮಿಸುವ ಭರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್‌ ಸಹ ಧರಿಸದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.

ಬಿಎಸ್‌ವೈ ಸಂಪುಟದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ..! ...

ವಿವಿದ ರೆಸಾರ್ಟ್‌ ಸೇರಿದಂತೆ ರಾಜ್ಯದ ಪ್ರಮುಖ ಗಿರಿಧಾಮವಾಗಿರುವ ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ, ಕೋಡಚಾದ್ರಿ, ಜೋಗ ಜಲಪಾತ, ಸಕಲೇಶಪುರ, ತಲಕಾವೇರಿ, ಮಾಂದಲಪಟ್ಟಿ, ಬೆಂಗಳೂರು ಸಮೀಪದ ನಂದಿ ಗಿರಿಧಾಮ ಸೇರಿದಂತೆ ಹಲವೆಡೆ ಜನರು ಕೊರೋನಾ ಆತಂಕ ಇಲ್ಲದೇ ಸಂಚರಿಸುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಪಾರ್ಟಿ, ಫೈರ್‌ ಕ್ಯಾಂಪ್‌, ಟ್ರಕ್ಕಿಂಗ್‌, ಸ್ವಿಮ್ಮಿಂಗ್‌ ವೇಳೆ ಯಾವುದೇ ಅಂತರ ಕಾಯ್ದು ಕೊಳ್ಳದೇ, ಮಾಸ್ಕ್‌ ಧರಿಸದೇ ಕಾಲ ಕಳೆಯುತ್ತಿದ್ದಾರೆ

ಪ್ರವಾಸಿ ತಾಣಗಳಲ್ಲಿ ಜನರು ನಿಯಮಗಳನ್ನು ಉಲ್ಲಂಘಿಸಿದ ವೇಳೆ ದಂಡ ವಿಧಿಸುವುದು ಅಥವಾ ನಿಯಮ ಉಲ್ಲಂಘಿಸದಂತೆ ತಿಳಿ ಹೇಳುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿಲ್ಲ.

ಸ್ಥಳೀಯರ ಆತಂಕ:

ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ಬೆಂಗಳೂರಿನ ನಿವಾಸಿಗಳೇ ಹೆಚ್ಚಿನವರಾಗಿದ್ದಾರೆ. ಬೆಂಗಳೂರು ನಗರದಲ್ಲಿಯೇ ಕೊರೋನಾ ಸೋಂಕಿತರು ಹೆಚ್ಚಾಗಿರುವುದರಿಂದ ಸ್ಥಳೀಯ ಪ್ರವಾಸಿ ತಾಣಗಳ ಸಿಬ್ಬಂದಿ ಜನರು ಆತಂಕಕ್ಕೆ ಒಳಗಾಗುವಂತಾಗಿದೆ. ಬಂದಂತಹ ಕೆಲವರು ಎಲ್ಲೆಂದರಲ್ಲಿ ಮದ್ಯ ಸೇವನೆ, ಧೂಮಪಾನ ಮಾಡುತ್ತಿದ್ದಾರೆ. ಇದರಿಂದ ಇತರೆ ಪ್ರವಾಸಿಗರಿಗೂ ಕೊರೋನಾ ಹರಡಿಸುತ್ತಿದ್ದಾರೆ ಎನ್ನುತ್ತಾರೆ ನಂದಿ ಗಿರಿಧಾಮದ ಅಂಗಡಿ ಮಾಲೀಕ ವೆಂಕಟಪ್ಪ.

ಪ್ರವಾಸೋದ್ಯಮ ಶೇ.25ರಷ್ಟುಚೇತರಿಕೆ

ಲಾಕ್‌ಡೌನ್‌ ಸಮಯಕ್ಕೆ ಹೋಲಿಸಿಕೊಂಡರೆ ರಾಜ್ಯದ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಶೇ.25ರಷ್ಟುಚೇತರಿಸಿಕೊಳ್ಳುತ್ತಿದೆ. ಜನರು ಕೂಡ ನಿಧಾನವಾಗಿ ಬರುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರವಾಸಿಗರ ಥರ್ಮಲ್‌ ಸ್ಕಾ್ಯನಿಂಗ್‌, ಸ್ಯಾನಿಟೈಸ್‌, ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಒಟ್ಟಾರೆ ಸಾಮರ್ಥ್ಯದಲ್ಲಿ ಕೇವಲ ಶೇ.50ರಷ್ಟುಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೆಚ್ಚಿನ ಜನರು ಕೊರೋನಾ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುತ್ತಾರೆ ರೆಸಾರ್ಟ್‌ ಮಾಲೀಕರು.

ಬಿಎಸ್‌ವೈ ಸಂಪುಟದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ..! ..

ಈ ಕುರಿತು ಮಾತನಾಡಿದ ಜಲಧಾಮ ಮಾಲೀಕ ನಾರಾಯಣ, ‘ಕೆಲವು ಪ್ರವಾಸಿಗರು ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ. ಕೆಲವರು ಈಜುಕೊಳದಲ್ಲಿ ಈಜಾಡಲು ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಈಜುಕೊಳದಲ್ಲಿ ಕ್ಲೋರಿನ್‌ ಸಿಂಪಡಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಏಕೆ ಹೆದರುತ್ತೀರಿ ಎಂದು ನಮಗೇ ಪ್ರಶ್ನಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೀಗ ನಿಧಾನವಾಗಿ ರೆಸಾರ್ಟ್‌ಗಳಿಗೆ ಜನರು ಬರುತ್ತಿದ್ದಾರೆ. ನಿಯಮ ಪಾಲನೆ ಮಾಡುವಂತೆ ಗಂಭೀರವಾಗಿ ಹೇಳಿದರೂ ಕೆಲವರು ಕೇಳುತ್ತಿಲ್ಲ. ಹೀಗಾಗಿ, ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ. ನಮ್ಮ ಸುರಕ್ಷತೆ ನಾವು ಕಾಯ್ದುಕೊಳ್ಳುತ್ತಿದ್ದೇವೆ. ಪ್ರವಾಸಿಗರಿಗೆ ನಿಯಮಗಳನ್ನು ತಿಳಿಸುವುದು ನಮ್ಮ ಕರ್ತವ್ಯ. ಪಾಲನೆ ಮಾಡದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮೈಸೂರು ಬಳಿಯ ರೆಸಾರ್ಟ್‌ ಮಾಲೀಕ ನವೀನ್‌ ಹೇಳುತ್ತಾರೆ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಳ; ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್

ಪ್ರವಾಸಿ ತಾಣಗಳಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರ್ಗಸೂಚಿ ಪಾಲಿಸುವಂತೆ ರಾಜ್ಯದ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ದೇಶನ ನೀಡಲಾಗಿದೆ. ಬೆಟ್ಟ-ಗುಡ್ಡ ಪ್ರದೇಶಗಳಂತಹ ತಾಣಗಳಲ್ಲಿ ಜನರೇ ಜಾಗ್ರತೆಯಿಂದ ನಡೆದುಕೊಳ್ಳಬೇಕಿದೆ.

- ಕೆ.ಎನ್‌. ರಮೇಶ್‌, ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ