ಜೂ.20ರವರೆಗೆ ದರ್ಶನ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶ: ಠಾಣೆಯಲ್ಲಿ ಮುಂದುವರಿದ ವಿಚಾರಣೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ಪ್ರೇಯಸಿ ಪವಿತ್ರಾಗೌಡ ಸೇರಿದಂತೆ 16 ಆರೋಪಿಗಳನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಬೆಂಗಳೂರು (ಜೂ.16): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ಪ್ರೇಯಸಿ ಪವಿತ್ರಾಗೌಡ ಸೇರಿದಂತೆ 16 ಆರೋಪಿಗಳನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶಿಸಿದೆ. ಪೊಲೀಸ್ ಕಸ್ಟಡಿ ಅಂತ್ಯಕ್ಕೂ ಮುನ್ನವೇ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್ ತಂಡವನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಾಜರುಪಡಿಸಿದರು. ಪ್ರಕರಣದ ಹೆಚ್ಚಿನ ತನಿಖೆಗೆ ಆರೋಪಿಗಳನ್ನು ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್ ಪ್ರಬಲ ವಾದ ಮಂಡಿಸಿದರು. ಇದಕ್ಕೆ ದರ್ಶನ್ ಪರ ವಕೀಲರು ಪೊಲೀಸ್ ವಶಕ್ಕೆ ನೀಡುವುದನ್ನು ಆಕ್ಷೇಪಿಸಿದರು.
ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಜೂ.20ವರೆಗೆ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿ ಆದೇಶಿಸಿತು. ನ್ಯಾಯಾಲಯದ ಆದೇಶದ ನಂತರ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದು ದರ್ಶನ್ ತಂಡದ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಮೈಸೂರಿಗೆ ದರ್ಶನ್ ಕರೆದೊಯ್ದು ಮಹಜರ್ ಹತ್ಯೆ ಕೃತ್ಯದ ಬಳಿಕ ಮೈಸೂರಿಗೆ ತೆರಳಿದ್ದ ದರ್ಶನ್, ನಂತರ ಅಲ್ಲಿಗೆ ತಮ್ಮ ಆಪ್ತರನ್ನು ಕರೆಸಿಕೊಂಡು ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿಗೆ ದರ್ಶನ್ ತಂಡವನ್ನು ಕರೆದೊಯ್ದು ಪೊಲೀಸರು ಮಹಜರ್ ನಡೆಸಲಿದ್ದಾರೆ.
ಆರೋಪಿಗಳು ಮೊಬೈಲ್ ಪಾಸ್‌ವರ್ಡ್ ಹೇಳ್ತಿಲ್ಲ: ಕೃತ್ಯದ ಬಳಿಕ ಆರೋಪಿಗಳು ಮೊಬೈಲ್‌ನಲ್ಲಿದ್ದ ಕೆಲ ಮಾಹಿತಿ ಅಳಿಸಿ ಹಾಕಿದ್ದಾರೆ. ಹೀಗಾಗಿ ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಿ ರಿಟ್ರೀವ್ ಮಾಡಬೇಕಿದೆ ಎಂದು ನ್ಯಾಯಾಲಯಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ತಿಳಿಸಿದರು. ಈ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಮೊಬೈಲ್‌ನಲ್ಲಿ ಮಹತ್ವದ ಮಾಹಿತಿ ಅಡಕವಾಗಿದೆ. ಆದರೆ ವಿಚಾರಣೆ ವೇಳೆ ಮೊಬೈಲ್ ಪಾಸ್ ವರ್ಡ್ ಹೇಳುತ್ತಿಲ್ಲ. ಹೀಗಾಗಿ ತಜ್ಞರ ಸಹಾಯ ಪಡೆದು ಮೊಬೈಲ್ ರಿಟ್ರೀವ್ ಮಾಡಿ ಮಾಹಿತಿ ಪಡೆಯಬೇಕಿದೆ ಎಂದು ವಾದಿಸಿದರು.
ಏನೋ ಆಗಿಹೋಯ್ತು ಸಾರ್... ತನಿಖೆ ವೇಳೆ ಪೊಲೀಸರೆದುರು ದರ್ಶನ್ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ಚಿತ್ರದುರ್ಗದಲ್ಲಿ ಮತ್ತೆ ದರ್ಶನ್‌ನ ಮೂವರು ಸಹಚರರು ಪೊಲೀಸರಿಗೆ ಶರಣಾಗಿದ್ದರು. ಪ್ರಕರಣದಲ್ಲಿ ಬಂಧಿತರಾಗಿರುವ ಒಟ್ಟು 16 ಆರೋಪಿಗಳನ್ನು ಶನಿವಾರ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆ ಸಲುವಾಗಿ ಆರೋಪಿಗಳನ್ನು ವಶಕ್ಕೆ ನೀಡುವಂತೆ ಮನವಿ ಮಾಡಿದರು.