ಬೆಂಗಳೂರು(ಸೆ.18):ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರ ನೇಮಕಾತಿಗೆ ರೂಪಿಸಿರುವ ಮಾರ್ಗಸೂಚಿಯನ್ನು ಜಲ (ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆಗೆ ಅನುಗುಣವಾಗಿ ಮಾರ್ಪಡಿಸಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಸರ್ಕಾರ ರಚಿಸಿರುವ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿಯ ಆರ್‌.ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ರೂಪಿಸಿರುವ ಮಾರ್ಗಸೂಚಿಗಳು ಜಲಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ, ಅವುಗಳನ್ನು ಮಾರ್ಪಾಡು ಮಾಡುವಂತೆ ಸರ್ಕಾರಕ್ಕೆ ಸೂಚಿಸಿತು.

ಇದೇ ವೇಳೆ, ಕೆಎಸ್‌ಪಿಸಿಬಿ ಅಧ್ಯಕ್ಷರಷ್ಟೇ ಅಲ್ಲದೆ ಸದಸ್ಯರಿಗೂ ವಿಶೇಷ ಜ್ಞಾನ ಹಾಗೂ ವಿದ್ಯಾರ್ಹತೆ ನಿಗದಿಪಡಿಸಿ ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವಂತೆ ಕೋರಿ ಕೃಷ್ಣಯ್ಯ ಪಿ. ಶ್ರೀನಾಥ್‌ ಎಂಬುವರು ಸಲ್ಲಿಸಿರುವ ಅರ್ಜಿಯನ್ನೂ ವಿಚಾರಣೆ ನಡೆಸಿದ ಪೀಠ, ಈ ಅರ್ಜಿಯಲ್ಲಿನ ಮನವಿಯನ್ನೂ ಪರಿಗಣಿಸಿ ಸರ್ಕಾರ ಮಾರ್ಗಸೂಚಿ ಮಾರ್ಪಾಡು ಮಾಡಬೇಕು. ಇಲ್ಲವಾದರೆ ಇದೇ ವಿಚಾರ ಸಂಬಂಧ ಮತ್ತಷ್ಟುಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಸರ್ಕಾರ ಮಾರ್ಗಸೂಚಿಗಳನ್ನು ಮಾರ್ಪಾಡುಗೊಳಿಸಿ ಮುಂದಿನ ಸೋಮವಾರ ಕೋರ್ಟ್‌ಗೆ ಸಲ್ಲಿಸಬೇಕು. ಅದರ ಪ್ರತಿಗಳನ್ನು ಅರ್ಜಿದಾರರಿಗೂ ತಲುಪಿಸಬೇಕು ಎಂದು ಸೂಚಿಸಿದ ಪೀಠ, ಸರ್ಕಾರ ಸಲ್ಲಿಸುವ ಮಾರ್ಗಸೂಚಿಗಳ ಆಧಾರದ ಮೇಲೆ ಅರ್ಜಿ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿ ಸೆ.21ಕ್ಕೆ ವಿಚಾರಣೆ ಮುಂದೂಡಿತು.

ಮಾಲಿನ್ಯ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಸಿಎಂ ಸೂಚನೆ

ಅರ್ಜಿದಾರರ ಆರೋಪವೇನು?:

ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಗಳ ನೇಮಕಾತಿಗೆ ಮಾರ್ಗಸೂಚಿಗಳನ್ನು ರಚಿಸಿ ಕಳೆದ ಜೂ.19ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಈ ಮಾರ್ಗಸೂಚಿ ಜಲ (ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆಯ ಸೆಕ್ಷನ್‌ 4(2)ಕ್ಕೆ ವಿರುದ್ಧವಾಗಿದ್ದು, ಸುಪ್ರೀಂಕೋರ್ಟ್‌ ನಿರ್ದೇಶನಗಳಿಗೆ ಅನುಗುಣವಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

3 ತಿಂಗಳ ಒಳಗೆ ಕ್ಯಾಮ್ಸ್‌ ಮನವಿ ಪರಿಗಣಿಸಿ

ಪ್ರಸಕ್ತ ಶೈಕ್ಷಣಿಕ ವರ್ಷ ಹಾಗೂ ಕಳೆದ 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಬರಬೇಕಾಗಿರುವ ಬಾಕಿ ಟ್ಯೂಷನ್‌ ಶುಲ್ಕ ಸಂಗ್ರಹ ಮತ್ತು ಸರ್ಕಾರದಿಂದ ಬರಬೇಕಾಗಿರುವ ಶೇ.25 ರಷ್ಟು ಆರ್‌ಟಿಇ ಸೀಟುಗಳ ಶುಲ್ಕ ಪಾವತಿಸುವ ಕುರಿತು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಸಲ್ಲಿಸಿರುವ ಮನವಿಯನ್ನು ಮೂರು ತಿಂಗಳಲ್ಲಿ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಕ್ಯಾಮ್ಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ಸಂಸ್ಥೆ 2020ರ ಮಾ.31ರಂದು ನೀಡಿರುವ ಮನವಿಯನ್ನು ಮೂರು ತಿಂಗಳ ಒಳಗೆ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಸೂಚಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್‌.ಮೋಹನ್‌, 2020-21ನೇ ಶೈಕ್ಷಣಿಕ ವರ್ಷಕ್ಕೆ ಟ್ಯೂಷನ್‌ ಶುಲ್ಕ ಸಂಗ್ರಹಕ್ಕೆ ಮತ್ತು 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಬರಬೇಕಾಗಿರುವ ಬಾಕಿ ಟ್ಯೂಷನ್‌ ಶುಲ್ಕ ಸಂಗ್ರಹಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಈವರೆಗೆ ಪರಿಗಣಿಸಿಲ್ಲ. ಜೊತೆಗೆ ಸರ್ಕಾರ ಶೇ.25 ರಷ್ಟು ಆರ್‌ಟಿಇ ಸೀಟುಗಳಿಗೆ ನೀಡಬೇಕಾಗಿದ್ದ ಹಣವನ್ನು ಕಳೆದ ಎರಡು ವರ್ಷಗಳಿಂದಲೂ ಪಾವತಿಸಿಲ್ಲ. ಇದೀಗ ಕೋವಿಡ್‌ನಿಂದ ಶಾಲೆಗಳು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ಬಾಕಿಯಿರುವ ಆರ್‌ಟಿಇ ಶುಲ್ಕ ಪಾವತಿಗೆ ಕ್ರಮ ಕೈಗೊಳ್ಳಲು ಹಾಗೂ ಅರ್ಜಿದಾರರ ಸಂಸ್ಥೆ ನೀಡಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದರು.