ಬೆಂಗಳೂರು (ಸೆ.30):  ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಆಂಬ್ಯುಲೆನ್ಸ್‌ ಹಾಗೂ ಕೋವಿಡ್‌ ವೈದ್ಯಾಧಿಕಾರಿಗಳ ಸಾರಿಗೆ ವ್ಯವಸ್ಥೆಯ ಹೆಸರಲ್ಲಿ ಬೈಕು, ಆಟೋ, ಸರ್ಕಾರಿ ವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳ ನಂಬರ್‌ಗಳನ್ನೆಲ್ಲಾ ಸೇರಿಸಿ ಆರೋಗ್ಯ ಇಲಾಖೆಯಲ್ಲಿ 6 ಕೋಟಿ ರು.ಗಳಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆಸಿರುವುದು ಬಯಲಾಗಿದೆ.

ಅಷ್ಟೇ ಅಲ್ಲ, ಸಾಮಾನ್ಯ ದರ್ಜೆಯ ಕಾರುಗಳನ್ನು ಟ್ರಾವೆಲ್ಸ್‌ ಕಂಪನಿಗಳಿಂದ ಬಾಡಿಗೆ ಪಡೆದಿರುವ ಆರೋಗ್ಯ ಇಲಾಖೆ ಐಷಾರಾಮಿ ಕಾರುಗಳ ಹೆಸರಲ್ಲಿ ಬಾಡಿಗೆ ಬಿಲ್‌ ಪಾವತಿಸಿ ಭಾರೀ ಅಕ್ರಮ ನಡೆಸಿದೆ. ರಾಜ್ಯ ಸರ್ಕಾರವನ್ನು ಯಾಮಾರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಡೆಸಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರವನ್ನು ‘ಕನ್ನಡಪ್ರಭ’ ಸೋದರ ಸಂಸ್ಥೆ ‘ಸುವರ್ಣ ನ್ಯೂಸ್‌’ ಬಯಲಿಗೆಳೆದಿದೆ.

ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಕೋವಿಡ್‌ ವೈದ್ಯಾಧಿಕಾರಿಗಳ ಸಾರಿಗೆ ವ್ಯವಸ್ಥೆಗಾಗಿ ಬೆಂಗಳೂರಿನ ಮೂರು ಟ್ರಾವೆಲ್ಸ್‌ ಕಂಪನಿಗಳಿಂದ ನೂರಾರು ವಾಹನಗಳನ್ನು ಎರಡು ತಿಂಗಳ ಕಾಲ ಬಾಡಿಗೆ ಪಡೆದು ಕೋಟ್ಯಂತರ ರು. ಬಿಲ್‌ ಪಾವತಿಸಿದೆ. ಆದರೆ, ಈ ರೀತಿ ಬಾಡಿಗೆ ಪಡೆದಿರುವ ವಾಹನಗಳ ಸಂಖ್ಯೆಗಳನ್ನು ‘ಸುವರ್ಣ ನ್ಯೂಸ್‌’ಪರಿಶೀಲಿಸಿದಾಗ ಅವುಗಳಲ್ಲಿ ಸ್ಪೆ$್ಲಂಡರ್‌ ಪ್ಲಸ್‌ ಬೈಕು, ಅಪೆ ಆಟೋ, ವೈಟ್‌ ಬೋರ್ಡ್‌ ವಾಹನಗಳ ನಂಬರ್‌ಗಳೆಲ್ಲಾ ಪತ್ತೆಯಾಗಿವೆ. ಅಷ್ಟೇ ಅಲ್ಲ, ಆರ್‌ಟಿಒ ಅಧಿಕಾರಿಗಳ ಸಹಾಯದೊಂದಿಗೆ ಈ ವಾಹನಗಳ ಮಾಲಿಕರನ್ನು ಸಂಪರ್ಕಿಸಿದಾಗ ತಮ್ಮ ಯಾವುದೇ ವಾಹನಗಳನ್ನು ಬಾಡಿಗೆಗೆ ನೀಡಿಲ್ಲ ಎಂದು ಹೇಳಿದ್ದಾರೆ. ಖಾಸಗಿ ಟ್ರಾವೆಲ್ಸ್‌ ಕಂಪನಿಗಳ ಜೊತೆ ಕೈಜೋಡಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹಣ ನುಂಗಲು ಸಿಕ್ಕ ಸಿಕ್ಕ ವಾಹನಗಳ ನಂಬರ್‌ಗಳನ್ನೆಲ್ಲಾ ಸೇರಿಸುವ ಖತರ್ನಾಕ್‌ ಕೆಲಸ ಮಾಡಿದ್ದಾರೆ. ಆ ವಾಹನಗಳಿಗೆ ಬಾಡಿಗೆ ರೂಪದಲ್ಲಿ 6 ಕೋಟಿ ರು.ಗಳಿಗೂ ಅಧಿಕ ಬಾಡಿಗೆ ಪಾವತಿಸಿ ಅಧಿಕಾರಿಗಳು ಹಗಲು ದರೋಡೆ ನಡೆಸಿರುವುದು ಸಾಬೀತಾಗಿದೆ.

ಸರ್ಕಾರಕ್ಕೆ 51 ವಿಂಗರ್ ಆ್ಯಂಬುಲೆನ್ಸ್ ನೀಡಿದ ಟಾಟಾ ಮೋಟಾರ್ಸ್! ...

ಸಾಮಾನ್ಯ ಕಾರಿಗೆ ಐಷಾರಾಮಿ ಬಿಲ್‌: ಇಲಾಖೆಯ ದಾಖಲೆಗಳಲ್ಲಿ ಬಾಡಿಗೆ ಪಡೆದಿರುವ ಕಾರುಗಳ ನಂಬರ್‌ಗಳನ್ನು ಪರಿಶೀಲಿಸಿದಾಗ ಇಂಡಿಕಾ, ಸ್ವಿಫ್ಟ್‌ ಸೇರಿದಂತೆ ಸಾಮಾನ್ಯ ವರ್ಗದ ಕಾರುಗಳು ಕಾಣಸಿಗುತ್ತವೆ. ಆದರೆ, ಬಿಲ್‌ ಮಾಡಿರುವುದು ಮಾತ್ರ ಇನ್ನೋವಾ, ಕ್ರೆಸ್ಟಾದಂತಹ ಐಷಾರಾಮಿ ಕಾರುಗಳಿಗೆ. ಈ ದಾಖಲೆಯಲ್ಲಿನ ವಾಹನಗಳ ಪೂರ್ವಾಪರ ಪರಿಶೀಲಿಸದೆ ಆರೋಗ್ಯ ಇಲಾಖೆ ಆಯುಕ್ತರು, ಸ್ಟೇಟ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫ್ಯಾಮಿಲಿ ವೆಲ್ಫೇರ್‌ ಬೆಂಗಳೂರು ವಿಭಾಗದ ಉಪ ನಿರ್ದೇಶಕ ಸ್ವತಂತ್ರಕುಮಾರ್‌ ಬಿಲ್ಲುಗಳಿಗೆ ಸಹಿ ಹಾಕಿ ಹಣ ಬಿಡುಗಡೆ ಮಾಡಿದ್ದಾರೆ.

ಬೈಕೇ ಆ್ಯಂಬುಲೆನ್ಸ್‌, ಆಟೋ ಇನೋವಾ!

ಟಿಎನ್‌ 23 ಎಎಚ್‌-6098 ಇದು ಭಾಸ್ಕರನ್‌ ಎಂಬ ವ್ಯಕ್ತಿಯ ಸ್ಪೆ$್ಲಂಡರ್‌ ಪ್ಲಸ್‌ ಬೈಕು. ಖತರ್ನಾಕ್‌ ಅಧಿಕಾರಿಗಳು ಈ ನಂಬರಿನ ಆ್ಯಂಬುಲೆನ್ಸ್‌ ಬಾಡಿಗೆ ಪಡೆದಿರುವುದಾಗಿ ತೋರಿಸಿ ಬಿಲ್‌ ಮಾಡಿದ್ದಾರೆ. ಸರ್ಕಾರಿ ವಾಹನಗಳನ್ನೂ ಖಾಸಗಿ ವಾಹನವೆಂದು ತೋರಿಸಿ ಇನ್ನಷ್ಟುಬಿಲ್‌ ಮಾಡಲಾಗಿದೆ.

ಕೆಎ 51-6626 ನಂಬರ್‌ನ ಹೆಸರಲ್ಲಿ ಇನ್ನೋವಾ ಕಾರಿಗೆ ಬಿಲ್‌ ಮಾಡಲಾಗಿದೆ. ಆದರೆ, ಅದು ಮಾರುತಿ ರಿಟ್ಸ್‌ ಕಾರು. ಇನ್ನು, ಬಿಲ್‌ ಮಾಡಿರುವ ಕೆಎ 14-8017 ನಂಬರ್‌ನ ಮತ್ತೊಂದು ವಾಹನ ಪರಿಶೀಲಿಸಿದರೆ ಅದು ಅಪೇ ಆಟೋ ಆಗಿದೆ. ಇದು ನಗರದ ಪರಮೇಶ್‌ ಎಂಬ ವ್ಯಕ್ತಿಯ ಆಟೋ ಆಗಿದ್ದು, ಆತ ಬಾಡಿಗೆ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿ, ನಾನು ದೂರು ಕೊಡುತ್ತೇನೆ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಚಿಕ್ಕಮಗಳೂರಿನ ಡಿಎಚ್‌ಒ ಕಚೇರಿಯ ಕೆಎ 06 ಜಿ- 0582 ನಂಬರಿನ ಸರ್ಕಾರಿ ವಾಹನ, ಕೆಎ 07 ಜಿ 0367 ನಂಬರಿನ ಬೆಳಗಾವಿ ವಿಭಾಗದ ತಮ್ಮದೇ ಇಲಾಖೆಯ ಆ್ಯಂಬುಲೆನ್ಸ್‌ ಹೆಸರಲ್ಲೂ ಖಾಸಗಿ ವಾಹನ ಎಂಬ ಬಾಡಿಗೆ ಬಿಲ್‌ ಮಾಡಿದ್ದಾರೆ.

ಯಾವ್ಯಾವ ಟ್ರಾವೆಲ್ಸ್‌ ಕಂಪನಿಗಳ ಹೆಸರಿದೆ?

ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಮೂರು ಟ್ರಾವೆಲ್ಸ್‌ ಕಂಪನಿಗಳನ್ನು ಈ ಅಕ್ರಮಕ್ಕೆ ಬಳಸಿಕೊಂಡಿದ್ದಾರೆ.ನೀಲಾದ್ರಿ ಕಾರ್‌ ರೆಂಟಲ್ ಕಂಪನಿ, ಮೆಡಿಕ್ಯೂ ಹೆಲ್ತ್‌ ಕೇರ್‌ ಮತ್ತು ರಮೇಶ್‌ ಟೂ​ರ್‍ಸ್ ಅಂಡ್‌ ಟ್ರಾವೆಲ್ಸ್‌ ಹೆಸರಲ್ಲಿ ಇಲಾಖೆ ಎರಡು ತಿಂಗಳ ಬಾಡಿಗೆಗೆ ನೂರಾರು ವಾಹನಗಳನ್ನು ಪಡೆದುಕೊಂಡಿದೆ.

ಕೂಡ್ಲಿಗಿ: ಆ್ಯಂಬುಲೆನ್ಸ್‌ನಲ್ಲೇ ಕೊರೋನಾ ಸೋಂಕಿತ ಸಾವು .

ನೀಲಾದ್ರಿ ಕಾರ್‌ ರೆಂಟಲ್ ಕಂಪನಿಯಿಂದ 40 ಇನೋವಾ ಮತ್ತು 60 ಟಿಟಿ ವಾಹನ, ರಮೇಶ್‌ ಟೂ​ರ್‍ಸ್ ಅಂಡ್‌ ಟ್ರಾವೆಲ್ಸ್‌ ಕಂಪನಿಯಿಂದ 35 ಇನೋವಾ ಕಾರು ಬಾಡಿಗೆ ಪಡೆಯಲಾಗಿದ್ದು, ಪ್ರತಿ ಕಾರಿಗೆ ಒಂದು ದಿನಕ್ಕೆ 4300 ರು., ಒಂದು ಟಿಟಿಗೆ ಮಾಸಿಕ 1.30 ಲಕ್ಷ ರು.ನಂತೆ ಬಾಡಿಗೆ ಪಾವತಿಸಲಾಗಿದೆ. ಇನ್ನು, ಮೆಡಿಕ್ಯೂ ಹೆಲ್ತ್‌ ಕೇರ್‌ ಕಂಪನಿಯಿಂದ 50 ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆದು ಪ್ರತಿ ಆಂಬುಲೆಸ್ಸ್‌ಗೆ ಮಾಸಿಕ 2.30 ಲಕ್ಷ ರು. ಬಾಡಿಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ದಾಖಲೆ ನೀಡುತ್ತದೆ. ಒಟ್ಟಾರೆ ಕಳೆದ ಜೂನ್‌ ಮತ್ತು ಜುಲೈ ತಿಂಗಳಲ್ಲಿ ನೀಲಾದ್ರಿ ಕಾರ್‌ ರೆಂಟಲ್ಸ್‌ಗೆ 2.97 ಕೋಟಿ ರು., ಮೆಡಿಕ್ಯೂ ಹೆಲ್ತ್‌ ಕೇರ್‌ ಕಂಪನಿಗೆ ಒಟ್ಟು 1.4 ಕೋಟಿ ರು. ಮತ್ತು ರಮೇಶ್‌ ಟೂ​ರ್‍ಸ್ ಅಂಡ್‌ ಟ್ರಾವೆಲ್ಸ್‌ಗೆ ಒಟ್ಟು 47.63 ಲಕ್ಷ ರು. ಬಾಡಿಗೆ ಹೆಸರಲ್ಲಿ ಬಿಲ್‌ ಬಿಡುಗಡೆ ಮಾಡಲಾಗಿದೆ. ಆದರೆ, ಈ ವಾಹನಗಳಲ್ಲಿ ಬಹುತೇಕ ವಾಹನÜಗಳು ಸಾಮಾನ್ಯ ಕಾರುಗಳಾಗಿದ್ದರೆ, ಇನ್ನೂ ಕೆಲವು ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳಾಗಿರುವುದನ್ನು ಸುವರ್ಣ ನ್ಯೂಸ್‌ ತನ್ನ ಸ್ಟಿಂಗ್‌ ಆಪರೇಷನ್‌ನಲ್ಲಿ ಬಯಲಿಗೆಳೆದಿದೆ.