ಸಿಸಿ ಕ್ಯಾಮೆರಾ ಬಂದ್ ಮಾಡಿ ಡಿವೈಎಸ್ಪಿ ಶಾಂತಕುಮಾರ್ ತಂಡದಿಂದ ಕುಕೃತ್ಯ, ಸಿಐಡಿ ಆರೋಪಪಟ್ಟಿಯಲ್ಲಿ ಸ್ಫೋಟಕ ಅಂಶ
ಬೆಂಗಳೂರು(ಜು.28): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಹಗರಣ ಸಂಬಂಧ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ಐವರು ಅಧಿಕಾರಿಗಳು ಹಾಗೂ 18 ಅಭ್ಯರ್ಥಿಗಳನ್ನು ಒಳಗೊಂಡ 30 ಮಂದಿ ವಿರುದ್ಧ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಮೊದಲ ಹಂತದ 3036 ಪುಟಗಳ ಬೃಹತ್ ಆರೋಪ ಪಟ್ಟಿಯನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ವು ಮಂಗಳವಾರ ಸಲ್ಲಿಸಿದೆ. ‘ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂನಲ್ಲೇ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಮೂರು ಗಂಟೆಗಳ ಕಾಲ ಸಿಸಿಟಿವಿ ಕ್ಯಾಮೆರಾ ಸ್ಥಗಿತಗೊಳಿಸಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ತಂಡವು ತಿದ್ದುಪಡಿ ಮಾಡಿತ್ತು. ಈ ಅಕ್ರಮ ಕೃತ್ಯಕ್ಕೆ ನೇಮಕಾತಿ ವಿಭಾಗದ ಆಗಿನ ಮುಖ್ಯಸ್ಥ ಎಡಿಜಿಪಿ ಅಮೃತ್ ಪಾಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಸೇರಿ ಅಧಿಕಾರಿಗಳಿಗೆ ಅಭ್ಯರ್ಥಿಗಳಿಂದ ಎರಡೂವರೆ ಕೋಟಿ ರು. ಹಣ ಸಂದಾಯವಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿರುವುದಾಗಿ ಮೂಲಗಳು ಹೇಳಿವೆ.
ಕೆಲ ದಿನಗಳ ಹಿಂದೆ ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಕಲಬುರಗಿ ನಗರದಲ್ಲಿ ದಾಖಲಾಗಿದ್ದ ಪ್ರಕರಣಗಳ ಕುರಿತು ಆರೋಪಪಟ್ಟಿಸಲ್ಲಿಸಿದ್ದ ಸಿಐಡಿ, ಈಗ ಬೆಂಗಳೂರಿನ ಹೈಗ್ರೌಂಡ್‌್ಸ ಠಾಣೆಯಲ್ಲಿ ಏ.30ರಂದು ದಾಖಲಾಗಿದ್ದ ಎಫ್‌ಐಆರ್ ಸಂಬಂಧ ಮೊದಲ ಹಂತದ ಆರೋಪ ಪಟ್ಟಿಸಲ್ಲಿಸಿದೆ. ಎಫ್‌ಐಆರ್ ದಾಖಲಾಗಿ 3 ತಿಂಗಳ ಅವಧಿಯಲ್ಲಿ ಆರೋಪಪಟ್ಟಿಸಲ್ಲಿಸಬೇಕಿದ್ದ ಕಾರಣ ಮೊದಲ ಹಂತದ ದೋಷಾರೋಪ ಪಟ್ಟಿಸಲ್ಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಸ್‌ಐ ಅಕ್ರಮ: ಕಲಬುರಗಿ ಕಮಿಷನರ್‌ಗೆ ಸಿಐಡಿ ತನಿಖೆ ಬಿಸಿ
10 ಸಂಪುಟದ 3036 ಪುಟಗಳ ಚಾರ್ಜ್‌ಶೀಟ್
ಪಿಎಸ್‌ಐ ನೇಮಕಾತಿ ಹಗರಣದ ಮೊದಲ ಹಂತದ ತನಿಖೆ ಪೂರ್ಣಗೊಳಿಸಿದ ಸಿಐಡಿ, 1ನೇ ಎಸಿಎಂಎಂ ನ್ಯಾಯಾಲಯಕ್ಕೆ 30 ಮಂದಿ ವಿರುದ್ಧ 10 ಸಂಪುಟಗಳ 3036 ಪುಟಗಳ ಬೃಹತ್ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಆರ್‌ಎಸ್‌ಐ ಶ್ರೀಧರ್, ಎಫ್‌ಡಿಐ ಹರ್ಷ, ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್‌ಗಳಾದ ಶ್ರೀನಿವಾಸ್ ಹಾಗೂ ಲೋಕೇಶ್, ಮಧ್ಯವರ್ತಿಗಳಾದ ಶಶಿಧರ್, ವೆಂಕಟೇಶ್, ಶರತ್ ಹಾಗೂ ಮಂಜುನಾಥ್ ಸೇರಿ 7 ಮಧ್ಯವರ್ತಿಗಳು ಮತ್ತು 18 ಅಭ್ಯರ್ಥಿಗಳು ಕೃತ್ಯವು ತನಿಖೆಯಲ್ಲಿ ರುಜುವಾತಾಗಿದೆ. ಅಲ್ಲದೆ 202 ಸಾಕ್ಷಿಗಳ ಹೇಳಿಕೆಗಳು ಹಾಗೂ ಆರೋಪಕ್ಕೆ ಪೂರಕವಾದ 330 ದಾಖಲೆಗಳನ್ನು ಕೂಡಾ ಲಗತ್ತಿಸಲಾಗಿದೆ ಎಂದು ಸಿಐಡಿ ಹೇಳಿದೆ.
ಅಮೃತ್ ಪಾಲ್ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ
ಈ ದೋಷಾರೋಪ ಪಟ್ಟಿಯಲ್ಲಿ ಎಡಿಜಿಪಿ ಅಮೃತ್ ಪಾಲ್ ಹೆಸರು ಆರೋಪಿಯಾಗಿ ಉಲ್ಲೇಖವಾಗಿಲ್ಲ. ಎಡಿಜಿಪಿ ವಿರುದ್ಧ ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ ಅವರ ವಿರುದ್ಧ ಮತ್ತೊಂದು ಆರೋಪ ಪಟ್ಟಿಸಲ್ಲಿಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ
ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್‌ನಲ್ಲಿ ಒಎಂಆರ್ ಶೀಟ್‌ಗಳ ತಿದ್ದುಪಡಿ ಬಗ್ಗೆ ಕನ್ನಡಪ್ರಭದಲ್ಲಿ ಮೇ 8 ಹಾಗೂ ಜೂ.17ರಂದೇ ವರದಿಗಳು ಪ್ರಕಟವಾಗಿದ್ದವು.
