ಕಳೆದ 26 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ ಬಾಕಿ ಬಿಲ್‌ ಪಾವತಿ ಮಾಡದಿರುವ ಬಗ್ಗೆ ಬೆಂಗಳೂರ ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು (ಆ.8) ಕಳೆದ 26 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ ಬಾಕಿ ಬಿಲ್‌ ಪಾವತಿ ಮಾಡದಿರುವ ಬಗ್ಗೆ ಬೆಂಗಳೂರ ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸೋಮವಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಅವರ ನೇತೃತ್ವದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಗುತ್ತಿಗೆದಾರರು, ಪಾಲಿಕೆಯ ಮುಖ್ಯ ಆಯುಕ್ತರು ಬಿಲ್‌ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಬಿಲ್‌ ಬಾಕಿ ಉಳಿಸಿಕೊಂಡು, ಈಗ ತನಿಖೆ ಆಗಬೇಕು ಅಂತಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ. ಈಗಾಗಲೇ ಹಲವು ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಗುತ್ತಿಗೆದಾರ, ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಸಮಸ್ಯೆಯನ್ನು ಹೇಳಿಕೊಂಡರು.

ಸರಿಯಾದ ಕಾಮಗಾರಿಗೆ ಮಾತ್ರ ಹಣ: ಡಿಸಿಎಂ ಸ್ಪಷ್ಟನೆ

ಅಹವಾಲು ಆಲಿಸಿದ ಕುಮಾರಸ್ವಾಮಿ, ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುತ್ತೇನೆ. ನಿಮ್ಮ ಬಾಕಿ ಹಣ ತಡೆ ಹಿಡಿಯುವುದು ಸರಿಯಲ್ಲ. ಹಣ ಬಿಡುಗಡೆ ಮಾಡದಿದ್ದರೆ ನಿಮ್ಮ ಜತೆ ನಾನು ಧರಣಿ ಕೂರುತ್ತೇನೆ. ನೀವು ಯಾರು ಭಯಪಡಬೇಕಾದ ಅಗತ್ಯ ಇಲ್ಲ ಎಂದು ಆತ್ಮವಿಶ್ವಾಸ ಮೂಡಿಸಿದರು.