ಬೆಂಗಳೂರು(ಜು.01): ರಾಜ್ಯದಲ್ಲಿ ಕೊರೋನಾ ಪರೀಕ್ಷಾ ಪ್ರಮಾಣ ಕಳೆದ ಒಂದು ವಾರದಿಂದ ನಿತ್ಯ ಸರಾಸರಿ 13 ಸಾವಿರ ಸಂಖ್ಯೆಗೆ ಏರಿಕೆಯಾಗಿದ್ದರೂ, ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಹುತೇಕ ತಳಮಟ್ಟದಲ್ಲಿದೆ. ಹಾಗಾಗಿ ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆ ಇನ್ನಷ್ಟುಹೆಚ್ಚಿಸಬೇಕಾಗಿದೆ ಎನ್ನುತ್ತಾರೆ ತಜ್ಞರು.

ರಾಜ್ಯ ಸರ್ಕಾರದ ವಾರ್‌ರೂಂ ಮೂಲಗಳ ಪ್ರಕಾರ, ದೇಶದಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೆಹಲಿ, ರಾಜಸ್ಥಾನ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ 21 ರಾಜ್ಯಗಳಲ್ಲಿ ನಿತ್ಯ ನಡೆಸಲಾಗುತ್ತಿರುವ ಸರಾಸರಿ ಪರೀಕ್ಷಾ ಸಂಖ್ಯೆಗೆ ಹೋಲಿಸಿದರೆ ಕರ್ನಾಟಕ ಕೊನೆಯ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಕರ್ನಾಟಕಕ್ಕಿಂತಲೂ ಕೆಳ ಸ್ಥಾನದಲ್ಲಿದೆ. ತೆಲಂಗಾಣ ರಾಜ್ಯದಲ್ಲಿ ನಿತ್ಯ ಅತಿ ಕಡಿಮೆ 2356 ಮಂದಿಗೆ ಮಾತ್ರ ಪರೀಕ್ಷೆ ನಡೆಸುತ್ತಿದೆ.

ಬಳ್ಳಾರಿ: ಮಹಾಮಾರಿ ಕೊರೋನಾಗೆ ಮತ್ತೆ ಆರು ಸಾವು: ಕಳೆದ 4 ದಿನಗಳಲ್ಲಿ 20 ಬಲಿ

ದೆಹಲಿಯಲ್ಲಿ ನಿತ್ಯ ಸರಾಸರಿ 29,750, ಜಮ್ಮು ಕಾಶ್ಮೀರ 28,039, ಕೇರಳ 23,967, ಆಂಧ್ರಪ್ರದೇಶ 16,981 ಹಾಗೂ ತಮಿಳುನಾಡಿನಲ್ಲಿ 15,393 ಮಂದಿಗೆ ಹೀಗೆ 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಿತ್ಯ ಕೊರೋನಾ ಪರೀಕ್ಷೆ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ವರೆಗಿನ ಪರೀಕ್ಷೆಗಳನ್ನು ಅವಲೋಕಿಸಿದಾಗ ನಿತ್ಯ ಪ್ರತಿ ಹತ್ತು ಲಕ್ಷ ಮಂದಿಗೆ ಸರಾಸರಿ 9741 ಜನರಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಇನ್ನು ಮಹಾರಾಷ್ಟ್ರ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಹಿಂದಿದ್ದು ಸರಾಸರಿ 8249 ಜನರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ತೆಲಂಗಾಣ ರಾಜ್ಯ ಕೊನೆಯ ಸ್ಥಾನದಲ್ಲಿದೆ ಎನ್ನುತ್ತವೆ ವಾರ್‌ ರೂಮ್‌ ಮೂಲಗಳು.

ಪರೀಕ್ಷೆ ಗಣನೀಯವಾಗಿ ಹೆಚ್ಚಬೇಕು:

ರಾಜ್ಯ ಸರ್ಕಾರ ಕರ್ನಾಟಕದಲ್ಲಿ 78 ಕೋವಿಡ್‌ ಪ್ರಯೋಗಾಲಯಗಳನ್ನು ಸ್ಥಾಪಿಸಿರುವುದಾಗಿ ಹೇಳುತ್ತಿದೆ. ಇವುಗಳಲ್ಲಿ ಜೂನ್‌ ಮೊದಲ ವಾರದ ವರೆಗೆ ದಿನವೊಂದಕ್ಕೆ ಗರಿಷ್ಠ 16 ಸಾವಿರದ ವರೆಗೆ ಏರಿಕೆಯಾಗುತ್ತಾ ಬಂದ ಪರೀಕ್ಷಾ ಪ್ರಮಾಣ ಅದೇಕೋ ನಂತರ ಕನಿಷ್ಠ 5 ಸಾವಿರ ಮಟ್ಟಕ್ಕೆ ಇಳಿಕೆಯಾಯಿತು. ಇದರಿಂದ ರಾಜ್ಯದಲ್ಲಿ ಕೋವಿಡ್‌ ಪರೀಕ್ಷಾ ಸರಾಸರಿ ಪ್ರಮಾಣದಲ್ಲಿ ರಾಜ್ಯ ಸಾಕಷ್ಟುಹಿಂದೆ ಬಿದ್ದಂತಾಗಿದೆ. ಜೂನ್‌ ಕೊನೆಯ ವಾರದಲ್ಲಿ ಸಮಾಧಾನಕರ ರೀತಿಯಲ್ಲಿ 13ರಿಂದ 14 ಸಾವಿರವರೆಗೂ ನಿತ್ಯ ಪರೀಕ್ಷೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಹಾಗೂ ಸಮುದಾಯಕ್ಕೆ ಹಬ್ಬಿದೆಯಾ ಎಂಬುದನ್ನು ತಿಳಿಯಲು ಪ್ರಯೋಗದ ಪ್ರಮಾಣವನ್ನು ಸಾಕಷ್ಟುಹೆಚ್ಚಿಸಬೇಕಾಗಿದೆ ಎನುತ್ತಾರೆ ವೈದ್ಯರು.

ಪರೀಕ್ಷೆ ಕೊಠಡಿಯಲ್ಲಿ ತೀವ್ರ ತಲೆನೋವು: SSLC ವಿದ್ಯಾ​ರ್ಥಿ​ನಿಗೆ ಕೊರೋ​ನಾ

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ಹಾಗೂ ಸಮುದಾಯಕ್ಕೆ ಸೋಂಕು ಹಬ್ಬಿದೆಯೇ ಎಂಬುದನ್ನು ತಿಳಿಯಲು ನಿತ್ಯ ನಡೆಯುವ ಕೋವಿಡ್‌ ಪರೀಕ್ಷಾ ಸಂಖ್ಯೆಯನ್ನು ಇನ್ನಷ್ಟುಹೆಚ್ಚಿಸಬೇಕಾದ ಅಗತ್ಯವಿದೆ. ಆಟೋ ಚಾಲಕರು, ವ್ಯಾಪಾರಿಗಳು, ಬಸ್‌ ಡ್ರೈವರ್‌, ಕಂಡಕ್ಟರ್‌, ದಾರಿಹೋಕರು ಸೇರಿದಂತೆ ಎಲ್ಲರ ರಾರ‍ಯಂಡಮ್‌ ಪರೀಕ್ಷೆ ನಡೆಸಬೇಕಾಗಿದೆ.

- ಡಾ.ಮಂಜುನಾಥ್‌, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ