ಬೆಂಗಳೂರು (ನ.18):  ರಾಜ್ಯದಲ್ಲಿ ಬುಧವಾರ 1,791 ಕೊರೋನಾ ಸೋಂಕಿನ ಹೊಸ ಕೇಸ್‌ಗಳು ವರದಿಯಾಗಿದ್ದು, ಸತತ ಏಳನೇ ದಿನವೂ ಶೇ.2ರೊಳಗೆ ಪಾಸಿಟಿವಿಟಿ ದರ ದಾಖಲಾಗಿದೆ. ಇದು ಕೊರೋನಾ ಸೋಂಕಿನ ಹಬ್ಬುವಿಕೆಗೆ ತಕ್ಕ ಮಟ್ಟಿನ ತಡೆ ಬಿದ್ದಂತೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನವೆಂಬರ್‌ 11 ರಂದು ಶೇ. 2.33ರ ಪಾಸಿಟಿವಿಟಿ ದರ ದಾಖಲಾಗಿತ್ತು. ಅಲ್ಲಿಂದ ಬಳಿಕ ನಿರಂತರವಾಗಿ ಶೇ.2ರೊಳಗಿನ ಪಾಸಿಟಿವಿಟಿ ದರ ವರದಿಯಾಗುತ್ತಿದೆ. ರಾಜ್ಯದ ಈವರೆಗಿನ ಒಟ್ಟು ಪಾಸಿಟಿವಿಟಿ ದರ ಶೇ.8.96ರಷ್ಟಿದೆ.

ತರಗತಿಗೆ ಬರಲು ಕೊರೋನಾ ಪರೀಕ್ಷೆ ವರದಿ ಕಡ್ಡಾಯ

ಬುಧವಾರ 21 ಮಂದಿ ಸೋಂಕಿನಿಂದ ಮರಣ ಹೊಂದಿದ್ದಾರೆ. 1,947 ಮಂದಿ ಗುಣಮುಖರಾಗಿದ್ದಾರೆ.ಈ ವರಗೆ ರಾಜ್ಯದಲ್ಲಿ 8.65 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಪೈಕಿ 8.29 ಲಕ್ಷ ಮಂದಿ ಸೋಂಕಿನಿಂದ ಗುಣಮುಕರಾಗಿದ್ದಾರೆ. 25,146 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 636 ಜನರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 11,578 ಮಂದಿ ಸೋಂಕಿನಿಂದ ಮರಣವನ್ನಪ್ಪಿದ್ದಾರೆ. ಈವರೆಗೆ 19 ಮಂದಿ ಸೋಂಕಿತರು ಅನ್ಯ ಕಾರಣದಿಂದ ಅಸು ನೀಗಿದ್ದಾರೆ.

97,042 ಕೊರೋನಾ ಪರೀಕ್ಷೆ ಒಂದೇ ದಿನ ನಡೆಸಲಾಗಿದೆ. ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 97 ಲಕ್ಷ ದಾಟಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 10, ದಕ್ಷಿಣ ಕನ್ನಡ, ಧಾರವಾಡ, ಹಾಸನ ತಲಾ 2, ಉತ್ತರ ಕನ್ನಡ, ತುಮಕೂರು, ಮೈಸೂರು, ಕೊಡಗು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ಬೆಂಗಳೂರು ನಗರದಲ್ಲಿ 933 ಮತ್ತು ವಿಜಯಪುರದಲ್ಲಿ 121 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.