ಬೆಂಗಳೂರು(ಜು.27): ಕೊರೋನಾ ಸೋಂಕಿನಿಂದ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಬಿಬಿಎಂಪಿ ನೌಕರರೊಬ್ಬರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ. ರಾಮಸ್ವಾಮಿಪಾಳ್ಯ ನಿವಾಸಿ ರಘು ವೇಲು(40) ಮೃತ ದುರ್ದೈವಿ. ರಘು ಬಿಬಿಎಂಪಿಯ ಪುಲಿಕೇಶಿನಗರ ಉಪವಿಭಾಗದ ಇಂಜಿನಿಯರ್‌ ಕಚೇರಿಯಲ್ಲಿ ಡಿ ದರ್ಜೆ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಶನಿವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಕೂಡಲೇ ಅವರನ್ನು ಸಿ.ವಿ.ರಾಮನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಹೆಚ್ಚಾದ ಪರಿಣಾಮ ವೆಂಟಿಲೇಟರ್‌ ಅಳವಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಈ ಸೌಲಭ್ಯ ಇಲ್ಲದಿದ್ದರಿಂದ ವೆಂಟಿಲೇಟರ್‌ ಇರುವ ಕಡೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಬಿಬಿಎಂಪಿ ಕಂಟ್ರೋಲ್‌ ರೂಂಗೆ ಕರೆ ಮಾಡಿ ವೆಂಟಿಲೇಟರ್‌ ಸೌಲಭ್ಯವಿರುವ ಆಸ್ಪತ್ರೆಗಳ ಬಗ್ಗೆ ವಿಚಾರಿಸಿದಾಗ ದೇವನಹಳ್ಳಿ ಆಕಾಶ್‌ ಆಸ್ಪತ್ರೆಯಲ್ಲಿ ಲಭ್ಯವಿರುವುದು ಗೊತ್ತಾಗಿದೆ. ಕೂಡಲೇ ರಘುವೇಲುನನ್ನು ಆ್ಯಂಬುಲೆನ್ಸ್‌ನಲ್ಲಿ ಆಕಾಶ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗರ್ಭಿಣಿ, 50 ವರ್ಷ ಮೇಲ್ಪಟ್ಟ ಪೌರ ಕಾರ್ಮಿಕರಿಗೆ ವೇತನ ಸಹಿತ ರಜೆ

ಹಾಸಿಗೆ ಇಲ್ಲವೆಂದು ಸಿಬ್ಬಂದಿ:

ಈ ವೇಳೆ ಆಸ್ಪತ್ರೆ ಸಿಬ್ಬಂದಿ ಹಾಸಿಗೆ ಇಲ್ಲ ಎಂದು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಸೋಂಕಿತನ ಕಡೆಯವರು ಎಷ್ಟೇ ಮನವಿ ಮಾಡಿಕೊಂಡರೂ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೀಗೆ ಆಸ್ಪತ್ರೆ ಆವರಣದಲ್ಲಿ ಸುಮಾರು ಎರಡು ತಾಸು ಕಾಯಿಸಲಾಗಿದೆ. ಮೊದಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತ ಕಡೆಗೂ ವೆಂಟಿಲೇಟರ್‌ ಸಿಗದೆ ರಾತ್ರಿ ಮೃತಪಟ್ಟಿದ್ದಾರೆ.

ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿಕೊಂಡು ವೆಂಟಿಲೇಟ್‌ ಹಾಕಿದ್ದರೆ ಬದುಕುವ ಸಾಧ್ಯತೆ ಇತ್ತು. ಆದರೆ, ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಯಿತು. ಬಿಬಿಎಂಪಿ ನೌಕರನಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.