ಬೆಂಗಳೂರು(ಜು.29): ಕೊರೋನಾ ಸೋಂಕಿತ ಹಿರಿಯ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯಲು ಹತ್ತಾರು ಆಸ್ಪತ್ರೆಗಳಿಗೆ ಅಲೆದಾಡಿದರೂ ಹಾಸಿಗೆ ಸಿಗದೇ ಪರದಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

58 ವರ್ಷದ ಹಿರಿಯರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಮವಾರ ತಡರಾತ್ರಿ ಹತ್ತಾರು ಆಸ್ಪತ್ರೆ ಅಲೆದಾಡಿದ ನಂತರ ಮಂಗಳವಾರ ಮುಂಜಾನೆ ಬೌರಿಂಗ್‌ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸೋಂಕಿತರ ಪತ್ತೆಗೆ ವಾಸನೆ ಗ್ರಹಿಕೆ ಟೆಸ್ಟ್‌!

ಸೋಮವಾರ ತಡರಾತ್ರಿ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ತಕ್ಷಣ ನಮ್ಮ ತಂದೆಯನ್ನು ಪೀಪಲ್‌ ಟ್ರೀ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಹಾಸಿಗೆ ಇಲ್ಲ ಎಂದಾಗ ನಂತರ ಪ್ರಕ್ರಿಯಾ ಆಸ್ಪತ್ರೆ, ಸಪ್ತಗಿರಿ ಹೀಗೆ ಹತ್ತಾರು ಆಸ್ಪತ್ರೆಗೆ ಕರೆದೊಯ್ದರೂ ಹಾಸಿಗೆ ಇಲ್ಲ, ವೆಂಟಿಲೇಟರ್‌ ಇಲ್ಲ ಎಂದೆಲ್ಲಾ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಿದರು ಎಂದು ಅವರ ಸೋಂಕಿತರ ಪುತ್ರ ಕಿಡಿಕಾರಿದರು.

ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆತಂದಾಗ ಅಲ್ಲಿ ಆಂಟಿಜನ್‌ ಟೆಸ್ಟ್‌ ಮಾಡಿದಾಗ ಕೊರೋನಾ ಪಾಸಿಟಿವ್‌ ಇರುವುದು ದೃಢಪಟ್ಟಿತು. ಆದರೆ ನಮ್ಮಲ್ಲಿ ವೆಂಟಿಲೇಟರ್‌ ಇಲ್ಲ. ತೀವ್ರ ಉಸಿರಾಟ ಸಮಸ್ಯೆ ಇರುವುದರಿಂದ ವೆಂಟಿಲೇಟರ್‌ ಬೇಕೇ ಬೇಕು. ಹೀಗಾಗಿ ವೆಂಟಿಲೇಟರ್‌ ಇರುವುದ ಆಸ್ಪತ್ರೆಗೆ ಕರೆದೊಯ್ಯಿರಿ ಎಂದರು. ಈ ವೇಳೆ ಕೆ.ಸಿ.ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಕೋವಿಡ್‌ಗೆ ನಿಗದಿ ಮಾಡಿರುವ 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಕರೆ ಮಾಡಿದೆ. ಒಂದೇ ಒಂದು ಆಸ್ಪತ್ರೆಯಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆ ನೀಡಲು ಮುಂದಾದರು. ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು 24 ತಾಸು ಏನನ್ನೂ ಹೇಳಲಾಗದು ಎಂದು ಹೇಳಿದ್ದಾರೆ ಎಂದು ನೋವಿನಿಂದ ನುಡಿದರು.

ಸರ್ಕಾರ ಕೋವಿಡ್‌ ಸೋಂಕಿತರಿಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತದೆ. ಇಡೀ ರಾತ್ರಿ ಅಲೆದಾಡಿದರೂ ತಂದೆಗೆ ಆಸ್ಪತ್ರೆಗಳಲ್ಲಿ ಒಂದೇ ಒಂದು ಹಾಸಿಗೆ ಸಿಗಲಿಲ್ಲ. ನಾವು ಯಾರನ್ನು ದೂರಬೇಕು. ಏನಾದರೂ ಪ್ರಾಣಕ್ಕೆ ಅಪಾಯವಾದರೆ ಹೊಣೆ ಯಾರು ಹೊರುತ್ತಾರೆ ಎಂದು ಪುತ್ರ ಆಕ್ರೋಶ ವ್ಯಕ್ತಪಡಿಸಿದರು.