ಬೆಂಗಳೂರು(ಮಾ.22): ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದು, ಮನೆಯಲ್ಲೇ ಉಳಿಯುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಸತತ 14 ದಿನಗಳ ಕಾಲ ಮನೆಯಲ್ಲೇ ಉಳಿಯುವಾಗಲೂ ಸೋಂಕು ಬಗ್ಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಪಾಲಿಸಬೇಕಾದ ಅಗತ್ಯವಿದೆ.

- ಏಕೆಂದರೆ, ಕೊರೋನಾ ಸೋಂಕು ಶುರುವಾದ ದಿನದಿಂದ ರಾಜ್ಯಕ್ಕೆ 1,25,840 ಮಂದಿ ಆಗಮಿಸಿದ್ದಾರೆ. ಇದರಲ್ಲಿ 14 ದಿನಗಳಿಂದ ಈಚೆಗೆ ಬರೋಬ್ಬರಿ 52 ಸಾವಿರ ಮಂದಿ ವಿದೇಶದಿಂದ ಆಗಮಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ.

ಕೇಂದ್ರ ಸರ್ಕಾರವು ವಿದೇಶದಿಂದ ವಾಪಸಾಗಿರುವವರು 14 ದಿನಗಳ ಕಾಲ ಕಟ್ಟುನಿಟ್ಟಾಗಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು ಎಂದು ಆದೇಶ ನೀಡಿದೆ. ಹೀಗಾಗಿ ಸೋಂಕು ಸಾರ್ವಜನಿಕ ಪ್ರದೇಶಗಳಲ್ಲಿ ಮಾತ್ರವಲ್ಲದೆ ಮನೆಯೊಳಗೂ ಸಹ ಇರಬಹುದು. ಹೀಗಾಗಿ ವಿದೇಶದಿಂದ ವಾಪಸಾದ ಸದಸ್ಯರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜತೆಗೆ ಪ್ರತ್ಯೇಕ ನಿಗಾದಲ್ಲಿರುವವರು ಸಹ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಸ್ತವವಾಗಿ ಕೇಂದ್ರದ ಮಾರ್ಗಸೂಚಿಯಂತೆ 4 ದಿನಗಳ ಹಿಂದಷ್ಟೇ ವಿದೇಶದಿಂದ ಬರುವ ಎಲ್ಲರನ್ನೂ ಪ್ರತ್ಯೇಕವಾಗಿರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯು 4,681 ಮಂದಿಯನ್ನು ಮಾತ್ರ ಪ್ರತ್ಯೇಕವಾಗಿರುವಂತೆ ಸೂಚಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ 14 ದಿನದಿಂದ ಈಚೆಗೆ ಬಂದಿರುವ 52 ಸಾವಿರ ಮಂದಿಯೂ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಿಗಾದಲ್ಲಿರುವವರೊಂದಿಗೆ ಅಂತರವಿರಲಿ:

ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಕಾಶ್‌ಕುಮಾರ್‌ ಪ್ರಕಾರ, ಸೋಂಕು ಬಾಧಿತ ದೇಶಗಳಿಂದ ಆಗಮಿಸುವವರು 14 ದಿನ ಪ್ರತ್ಯೇಕವಾಗಿರಬೇಕು. ಅವರೊಂದಿಗೆ ಕುಟುಂಬದ ಸದಸ್ಯರು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕರು ಸರ್ಕಾರವು ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಿದವರು ಮಾತ್ರವಲ್ಲದೆ 14 ದಿನದ ಹಿಂದೆ ವಿದೇಶದಿಂದ ಬಂದಿರುವ ಎಲ್ಲರೊಂದಿಗೂ ಸಹ ಅಂತರ ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ನಿಗಾದಲ್ಲಿರುವವರು ಪ್ರತ್ಯೇಕವಾಗಿರಬೇಕು

- ವಿದೇಶದಿಂದ ಹಿಂತಿರುಗಿದ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾವುದೇ ವ್ಯಕ್ತಿಯು (ರೋಗ ಲಕ್ಷಣ ಇರಲಿ, ಇಲ್ಲದಿರಲಿ) 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

- ಮಕ್ಕಳು, ವೃದ್ಧರು, ಗರ್ಭಿಣಿಯರೊಂದಿಗೆ ಅಂತರ ಕಾಯ್ದುಕೊಳ್ಳಬೇಕು.

- ಉಸಿರಾಟದ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಸಮಸ್ಯೆಯುಳ್ಳವರೊಂದಿಗೆ ಅಂತರ ಕಾಯ್ದುಕೊಳ್ಳಬೇಕು.

- ಪ್ರತಿ ಬಾರಿ ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು.

- ಪ್ರತ್ಯೇಕವಾಗಿದ್ದು ಸೋಪು, ಶಾಂಪು, ತಟ್ಟೆಹಾಗೂ ಲೋಟ ಪ್ರತ್ಯೇಕವಾಗಿ ಬಳಕೆ ಮಾಡಬೇಕು.

- ಪ್ರತ್ಯೇಕ ಶೌಚಾಲಯ ಬಳಕೆ ಮಾಡಬೇಕು.

- ಮನೆಯಲ್ಲಿ ಒಂದೇ ಶೌಚಾಲಯವಿದ್ದರೆ ಪ್ರತಿಬಾರಿಯೂ ಸ್ವಚ್ಛಗೊಳಿಸಿ ಅನಂತರ ಬಳಸಬೇಕು.