14 ದಿನದ ಕ್ವಾರೈಟೈನ್‌ನಲ್ಲಿ ಇರುವವರ ಕೈಗೂ ಸೀಲ್, ಮನೆಗೇ ತೆರಳಿ ಮುದ್ರೆ!
14 ದಿನದ ಕ್ವಾರೈಟೈನ್‌ನಲ್ಲಿ ಇರುವವರ ಕೈಗೂ ಸೀಲ್| ಮನೆಗೇ ತೆರಳಿ ಇಂದಿನಿಂದ ಮುದ್ರೆ| ವಿದೇಶದಿಂದ ಬಂದು ಮನೆಯಲ್ಲೇ ಪ್ರತ್ಯೇಕವಾಗಿರುವವರಿಗೆ ಕ್ವಾರಂಟೈನ್ ಸೀಲ್ ಹಾಕಲು ನಿರ್ಧಾರ| ಮನೆಗೇ ತೆರಳಿ ಇಂದಿನಿಂದ ಸೀಲ್ ಹಾಕಲಿದ್ದಾರೆ ಪೊಲೀಸರು, ಆರೋಗ್ಯ ಸಿಬ್ಬಂದಿ
ಬೆಂಗಳೂರು(ಮಾ.22): ಕೊರೋನಾ ಬಾಧಿತ ದೇಶಗಳಿಂದ ಕಳೆದ 14 ದಿನಗಳಿಂದ ಈಚೆಗೆ ಆಗಮಿಸಿ ಮನೆಯಲ್ಲೇ ಪ್ರತ್ಯೇಕವಾಗಿರುವ ವ್ಯಕ್ತಿಗಳಿಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾನುವಾರದಿಂದ ‘ಹೋಂ ಕ್ವಾರಂಟೈನ್ ಸೀಲ್’ (ಗೃಹ ನಿರ್ಬಂಧ ಮುದ್ರೆ) ಒತ್ತಲಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶನಿವಾರದ ವೇಳೆಗೆ ವಿದೇಶದಿಂದ ಆಗಮಿಸಿದ 1.25 ಲಕ್ಷ ಮಂದಿಯ ತಪಾಸಣೆ ನಡೆಸಲಾಗಿದೆ. ಕಳೆದ ವಾರದಿಂದ ವಿದೇಶದಿಂದ ಆಗಮಿಸಿರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸುತ್ತಿದ್ದು, 4,681 ಮಂದಿಯನ್ನು 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ. ಮನೆಯಲ್ಲೇ ಪ್ರತ್ಯೇಕವಾಗಿರುವವರನ್ನು ಗುರುತಿಸಲು ಮಾ.19 ರಿಂದ ವಿಮಾನ ನಿಲ್ದಾಣದಲ್ಲಿ ಎಡಗೈ ಮೇಲೆ ಮುದ್ರೆ ಒತ್ತಲಾಗುತ್ತಿದೆ. ಇದೇ ರೀತಿ ಈಗಾಗಲೇ ಮನೆಯಲ್ಲೇ ಪ್ರತ್ಯೇಕವಾಗಿರುವವರನ್ನು ಸಾರ್ವಜನಿಕರು ಗುರುತು ಹಿಡಿಯಲು ಅವರ ನಿಗಾ ಅವಧಿ ಪೂರ್ಣಗೊಳ್ಳುವ ದಿನಾಂಕದ ಸಹಿತ ಮುದ್ರೆ ಒತ್ತಲಾಗುವುದು ಎಂದು ಮಾಹಿತಿ ನೀಡಿದರು.
ಇದಕ್ಕಾಗಿ ಸ್ಥಳೀಯ ಪೊಲೀಸ್, ಕಂದಾಯ, ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ 500 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಅವರು ಮುದ್ರೆ ಒತ್ತುವುದು ಮಾತ್ರವಲ್ಲದೆ ನೆರೆಹೊರೆಯವರಿಗೆ ನೋಟಿಸ್ ನೀಡಲಿದ್ದಾರೆ. ಅಲ್ಲದೆ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡದಂತೆ ನಿಗಾ ವಹಿಸಲಿದ್ದಾರೆ ಎಂದು ಹೇಳಿದರು.
ಉಳಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ದಿಷ್ಟವಾಗಿ ಸೋಂಕಿತರನ್ನು ಸಂಪರ್ಕಿಸಿದವರನ್ನು ಪತ್ತೆ ಹಚ್ಚಲು ಒಬ್ಬ ವೈದ್ಯರು, ಶುಶ್ರೂಷಕಿ ಹಾಗೂ ಎಂಎಸ್‌ಎಡಬ್ಲ್ಯೂ ವಿದ್ಯಾರ್ಹತೆ ಹೊಂದಿರುವ 108 ತಂಡಗಳನ್ನು ರಚಿಸಲಾಗಿದೆ. ಎಲ್ಲಾ ಜಿಲ್ಲೆಗಳ ಎನ್‌ಎಸ್‌ಎಸ್ ಸಂಯೋಜಕರಿಗೆ ಅವರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಜಾಗೃತಿ ಮೂಡಿಸಲು ತರಬೇತಿ ನೀಡಲಾಗುತ್ತಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸೂಚನೆ:
ಇನ್ನು ಅಪಾರ್ಟ್‌ಮೆಂಟ್‌ಗಳ ಮಾಲಿಕರಿಗೆ ಹಾಗೂ ಅಲ್ಲಿನ ನಿವಾಸಿ ಕಲ್ಯಾಣ ಸಂಘಗಳಿಗೆ ವಿದೇಶದಿಂದ ಬಂದ ವ್ಯಕ್ತಿಗಳೊಂದಿಗೆ ಇತರೆ ನಿವಾಸಿಗಳ ಸಂಪರ್ಕ ತಡೆಗೆ ಕ್ರಮ ಹಾಗೂ ವಿದೇಶದಿಂದ ಬಂದ ವ್ಯಕ್ತಿಗಳು ಮನೆಯಲ್ಲಿ ಕಡ್ಡಾಯ 14 ದಿನ ಪ್ರತ್ಯೇಕ ನಿಗಾದಲ್ಲಿರುವ ಕುರಿತು ಖಾತ್ರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.