ಬೆಂಗಳೂರು(ಮಾ.21): ನಾಲ್ಕು ದಿನಗಳ ಬಳಿಕ ಕೊರೋನಾ ಸೋಂಕು ರಾಜ್ಯದಲ್ಲಿ ಬ್ರೇಕ್‌ ನೀಡಿದ್ದು, ಯಾವುದೇ ಸೋಂಕು ದೃಢಪಟ್ಟಪ್ರಕರಣ ಶುಕ್ರವಾರ ವರದಿಯಾಗಿಲ್ಲ. ಜತೆಗೆ, ಇದೇ ಮೊದಲ ಬಾರಿಗೆ ಸೋಂಕಿತರೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಸೋಂಕು ದೃಢಪಟ್ಟಿದ್ದ 15 ಜನರ ಪೈಕಿ (1 ಸಾವು ಸೇರಿ) ಬೆಂಗಳೂರಿನ ಜಯನಗರ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಸೋಂಕಿತ ಟೆಕ್ಕಿಯ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾದರು.

ಅಲ್ಲದೆ, ಮುಂದಿನ ಬುಧವಾರದ ವೇಳೆಗೆ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ನಾಲ್ಕು ಮಂದಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 14 ಮಂದಿ ಪೈಕಿ ಐದು ಮಂದಿ ಬುಧವಾರದ ವೇಳೆಗೆ ಬಿಡುಗಡೆಯಾಗಲಿದ್ದಾರೆ. ಅವರನ್ನು ಮುಂದಿನ ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ಕಿ ಸಂಪೂರ್ಣ ಗುಣಮುಖ:

ಜಯನಗರ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಟೆಕ್ಕಿ (5ನೇ ಸೋಂಕಿತ) ಸಂಪೂರ್ಣ ಗುಣಮುಖ ಹೊಂದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಫೆ. 23 ರಂದು ಪತ್ನಿಯೊಂದಿಗೆ ಮಧುಚಂದ್ರಕ್ಕೆ ಗ್ರೀಸ್‌ ತೆರಳಿದ್ದ ವ್ಯಕ್ತಿಯು ಮಾ.6 ರಂದು ಮುಂಬೈಗೆ ವಾಪಸಾಗಿದ್ದರು. ಬಳಿಕ ಮಾ.8 ರಂದು ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಗೆ ಕಳೆದ ಮಾ.12 ರಂದು ಸೋಂಕು ದೃಢಪಟ್ಟಿತ್ತು. ಜತೆಗೆ ಇವರ ಪತ್ನಿಗೂ ಆಗ್ರಾದಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ ಈ ವ್ಯಕ್ತಿಗೆ ಸೋಂಕು ಗುಣಮುಖವಾಗಿದ್ದು, ಶುಕ್ರವಾರ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿ, ಮಗಳಿಗೆ ವಾಸಿಯಾಗುವವರೆಗೆ ಇಲ್ಲೇ ಇರುತ್ತೇನೆ:

ಇನ್ನು ಮೊದಲ ಸೋಂಕಿತ ಸಾಫ್ಟ್‌ವೇರ್‌ ಇಂಜಿನಿಯರ್‌ ಪತ್ನಿಯೂ (ಸೋಂಕಿತೆ) ಸಂಪೂರ್ಣ ಗುಣಮುಖ ಹೊಂದಿದ್ದು, ಕಳೆದ 24 ಗಂಟೆಗಳಲ್ಲಿನ ಎರಡು ಪರೀಕ್ಷೆ ವೇಳೆಯೂ ಸೋಂಕು ನೆಗೆಟಿವ್‌ ಬಂದಿದೆ. ಆದರೆ, ತನ್ನ ಪತಿ ಹಾಗೂ ಮಗಳಿಗೆ ಇನ್ನೂ ನೆಗೆಟಿವ್‌ ಬಂದಿಲ್ಲ. ಹೀಗಾಗಿ ತಾನು ಆಸ್ಪತ್ರೆಯಿಂದ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರೂ ವ್ಯಕ್ತಿಗಳಿಗೆ ಸೋಂಕು ಸಂಪೂರ್ಣ ದೃಢಪಟ್ಟಬಳಿಕ ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ.

ಶುಕ್ರವಾರ ಹೆಚ್ಚು ಮಂದಿಯ ಪರಿಶೀಲನೆ:

ಕೇಂದ್ರ ಸರ್ಕಾರವು ಮಾ.22 ರಿಂದ ಅಂತರಾಷ್ಟ್ರೀಯ ವಿಮಾನಗಳು ದೇಶಕ್ಕೆ ಬರುವುದನ್ನು ನಿಷೇಧಿಸಿರುವುದರಿಂದ ಶುಕ್ರವಾರ ಹೆಚ್ಚು ಜನರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈವರೆಗೆ ಬೆಂಗಳೂರು, ಮಂಗಳೂರಿನಲ್ಲಿ 1.22 ಲಕ್ಷ ಮಂದಿ ವಿದೇಶಿ ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದು, 4,030 ಮಂದಿಯನ್ನು ಮನೆ ಹಾಗೂ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿ ಇಡಲಾಗಿದೆ. ಶುಕ್ರವಾರ ಒಂದೇ ದಿನ 981 ಮಂದಿ ಮೇಲೆ ನಿಗಾ ವಹಿಸಲಾಗಿದೆ. ಈವರೆಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ 145 ಮಂದಿಯನ್ನು ವೈದ್ಯಕೀಯ ವ್ಯವಸ್ಥೆಯೊಂದಿಗೆ ಪ್ರತ್ಯೇಕವಾಗಿರಿಸಿದ್ದು, ಶುಕ್ರವಾರ ಒಂದೇ ದಿನ 59 ಮಂದಿ ಮೇಲೆ ಸೋಂಕು ಶಂಕೆಯಿಂದ ಪ್ರತ್ಯೇಕವಾಗಿರಿಸಲಾಗಿದೆ.

ಆರೋಗ್ಯ ಇಲಾಖೆ ಹೊಸ ಕ್ರಮ

* ಕೊರೋನಾ ನಿಯಂತ್ರಣಕ್ಕಾಗಿ ಯಾವುದೇ ಆರೋಗ್ಯ ಇಲಾಖೆ ಸಿಬ್ಬಂದಿಗೂ ವಾರಾಂತ್ಯದ ರಜೆ ಇಲ್ಲ. ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ಸಿಬ್ಬಂದಿ, ವೈದ್ಯಕೀಯ ಕಾಲೇಜು, ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೂ ಸಹ ಮಾ.31ರವರೆಗೆ ರಜೆ ಇಲ್ಲ.

* ಯಾವ ರೀತಿಯ ಪ್ರಕರಣಗಳಲ್ಲಿ ಸೋಂಕು ಮಾದರಿ ಪರೀಕ್ಷೆಗೆ ಕಳುಹಿಸಬಹುದು ಎಂಬುದನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಲ್ಯಾಬ್‌ ಪರೀಕ್ಷಾ ಕುರಿತ ಸಲಹಾ ಮಾರ್ಗಸೂಚಿ ನೀಡಲಾಗಿದೆ.

*ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಪರ್ಕ ಪತ್ತೆಗೆ ಒಬ್ಬ ವೈದ್ಯರು, ಒಬ್ಬ ಶುಶ್ರೂಶಕರು, ಒಬ್ಬ ಎಂಎಸ್‌ಡಬ್ಲ್ಯೂ ವಿದ್ಯಾರ್ಹತೆಯುಳ್ಳವರನ್ನು ಒಳಗೊಂಡ ನೂರು ಜನರ ತಂಡ ನಿಯೋಜನೆ.