Asianet Suvarna News Asianet Suvarna News

1 ವಾರ ಬಂದ್‌ನಿಂದ 20 ಸಾವಿರ ಕೋಟಿ ನಷ್ಟ!

1 ವಾರ ಬಂದ್‌ನಿಂದ 20 ಸಾವಿರ ಕೋಟಿ ನಷ್ಟ!| ರಾಜ್ಯದ ಉದ್ಯಮ ವಲಯಕ್ಕೆ 17,500 ಕೋಟಿ ರು. ನಷ್ಟ| ಇದರಿಂದ ಸರ್ಕಾರಕ್ಕೆ 2000 ಕೋಟಿ ರು. ಆದಾಯ ಖೋತಾ

Coronavirus Karnataka Shuts For 1 Week May Face 20 Thousand Crore Rupees Loss
Author
Bangalore, First Published Mar 14, 2020, 7:46 AM IST

ಬೆಂಗಳೂರು[ಮಾ.14]: ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕರ್ನಾಟಕವನ್ನು ಒಂದು ವಾರದ ಮಟ್ಟಿಗೆ ಸ್ತಬ್ಧಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಉದ್ಯಮವು ಸುಮಾರು 17,500 ಕೋಟಿ ರು. ನಷ್ಟಅನುಭವಿಸಲಿದೆ ಎಂದು ಅಂದಾಜಿಸಲಾಗಿದ್ದು, ಇದರ ಪರಿಣಾಮವಾಗಿ ಸರ್ಕಾರಕ್ಕೆ ಬರೋಬ್ಬರಿ ಎರಡು ಸಾವಿರ ಕೋಟಿ ರು.ಗಳಷ್ಟುಆದಾಯ ನಷ್ಟಉಂಟಾಗಲಿದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ರಾಜ್ಯವನ್ನು ಒಂದು ವಾರ ಸ್ತಬ್ಧಗೊಳಿಸುವ ಸರ್ಕಾರದ ನಿರ್ಧಾರದಿಂದಾಗಿ ಮಾಲ್‌, ಚಿತ್ರಮಂದಿರ, ಪಬ್‌, ನೈಟ್‌ ಕ್ಲಬ್‌ಗಳು ಸಂಪೂರ್ಣ ಬಂದ್‌ ಆಗಲಿವೆ. ಮದುವೆ ಹಾಗೂ ಅದಕ್ಕೆ ಸಂಬಂಧಿಸಿದ ಉದ್ದಿಮೆಯೂ ತೀವ್ರ ನಷ್ಟಕ್ಕೆ ಸಿಲುಕಲಿದೆ. ಐಟಿ-ಬಿಟಿ ವಹಿವಾಟು ಕೂಡ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಇದೆಲ್ಲದರ ಪರಿಣಾಮವಾಗಿ ರಾಜ್ಯದ 20 ಸಾವಿರ ಕೋಟಿ ರು.ಗಳಷ್ಟುವ್ಯಾಪಾರೋದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಜತೆಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ಎರಡು ಸಾವಿರ ಕೋಟಿ ರು.ಗಳಷ್ಟು ಭಾರೀ ಮೊತ್ತದ ಆದಾಯ ನಷ್ಟುಉಂಟಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಬೆಂಗಳೂರಲ್ಲಿ ಮೆಟ್ರೋ ರೈಲು ಸಂಖ್ಯೆ ಇಳಿಕೆ : ಟ್ರಿಪ್ ಗಳು ಇಳಿಕೆ

ರಾಜ್ಯ ಸರ್ಕಾರಕ್ಕೆ ತಿಂಗಳಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆಯಿಂದ ಸುಮಾರು ಒಂದು ಸಾವಿರ ಕೋಟಿ ರು., ವಾಣಿಜ್ಯ ತೆರಿಗೆ ರೂಪದಲ್ಲಿ ಐದು ಸಾವಿರ ಕೋಟಿ ರು., ಅಬಕಾರಿ ಶುಲ್ಕದಿಂದ ಸುಮಾರು 1,300 ಕೋಟಿ ರು., ಒಟ್ಟಾರೆ ವಾಣಿಜ್ಯ ತೆರಿಗೆ ಹಾಗೂ ಅಬಕಾರಿ ಶುಲ್ಕದಿಂದ 7,300 ಕೋಟಿ ರು. ಆದಾಯ ನಿರೀಕ್ಷಿಸಲಾಗುತ್ತದೆ. ಇದರಲ್ಲಿ ಶೇ.60ರಷ್ಟುಅಂದರೆ ಸುಮಾರು 4 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಆದಾಯ ಬೆಂಗಳೂರು ನಗರ ಒಂದರಿಂದಲೇ ಬರುತ್ತದೆ.

ಇದೀಗ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ಏಳು ದಿನ ಹೆಚ್ಚುಕಮ್ಮಿ ಬಂದ್‌ ಆಗುವುದರಿಂದ ಪೆಟ್ರೋಲ್‌, ಡೀಸೆಲ್‌ನಿಂದ ಬರಬೇಕಾದ ಸುಮಾರು 260 ಕೋಟಿ ರು., ಅಬಕಾರಿ ಶುಲ್ಕ 340 ಕೋಟಿ ರು., ವಾಣಿಜ್ಯ ವಹಿವಾಟಿನಿಂದ 1,400 ಕೋಟಿ ರು. ಸೇರಿ ಒಟ್ಟಾರೆ 2 ಸಾವಿರ ಕೋಟಿ ರು. ಆದಾಯ ನಷ್ಟಉಂಟಾಗುವ ಸಾಧ್ಯತೆ ಇದೆ ಎಂದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಜಿಎಸ್‌ಟಿ ರಾಜ್ಯ ಸಮಿತಿಯ ಅಧ್ಯಕ್ಷ ಬಿ.ಟಿ.ಮನೋಹರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ತಜ್ಞರು ಹಾಕಿರುವ ಲೆಕ್ಕಾಚಾರದ ಪ್ರಕಾರ ರಾಜ್ಯದ ಬೊಕ್ಕಸಕ್ಕೆ 2000 ಕೋಟಿ ರು. ತೆರಿಗೆ ಬರಬೇಕಾದರೆ ಉದ್ಯಮವು ಸುಮಾರು 17,500 ಕೋಟಿ ರು. ವಹಿವಾಟು ನಡೆಸಿರಬೇಕು. ಆಗ ಮಾತ್ರ ಈ ಪ್ರಮಾಣದಲ್ಲಿ ತೆರಿಗೆ ಹಣ ಸರಕಾರಕ್ಕೆ ಬರುತ್ತದೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅವರು ರಾಜ್ಯವು ಒಂದು ವಾರದಲ್ಲಿ ಸುಮಾರು 17,500 ಕೋಟಿ ರು. ವ್ಯಾಪಾರ ನಷ್ಟಅನುಭವಿಸಲಿದೆ ಎಂದು ಅಂದಾಜು ನೀಡುತ್ತಾರೆ.

ಒಂದು ವಾರ ಸರ್ಕಾರಿ ರಜೆ : ಊರಿಗೆ ಹೊರಟವರಿಂದ ಫುಲ್ ಜಾಂ

ಮಾಚ್‌ರ್‍ನಲ್ಲಿ ಶೇ.50ರಷ್ಟು ನಷ್ಟ:

ಮಾಚ್‌ರ್‍ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಥಮ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಅಲ್ಲಿಂದ ನಗರದಲ್ಲಿ ಸಾರ್ವಜನಿಕರಲ್ಲಿ ಆತಂಕದ ಛಾಯೆ ಆರಂಭವಾಯಿತು. ಮೆಟ್ರೋ, ಬಿಎಂಟಿಸಿ ಬಸ್‌ ಸಂಚಾರ ಕಡಿಮೆಯಾಗಿ ಮಾಲ್‌ ಸೇರಿದಂತೆ ಇತರೆ ಕಡೆ ಕ್ರಮೇಣ ವಹಿವಾಟು ಕುಗ್ಗಿದೆ. ಇದೀಗ ಏಳು ದಿನ ಸರ್ಕಾರ ಬಂದ್‌ಗೆ ಆದೇಶಿಸಿರುವುದರಿಂದ ಬಹುತೇಕ ಮೂರನೇ ವಾರ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮಾಚ್‌ರ್‍ನಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಶೇ.50ರಷ್ಟುಖೋತಾ ಆಗುವುದರಲ್ಲಿ ಅನುಮಾನವಿಲ್ಲ ಎಂದು ಬಿ.ಟಿ.ಮನೋಹರ್‌ ಹೇಳಿದ್ದಾರೆ.

400 ಕೋಟಿ ರು. ಅಬ್ಕಾರಿ ಆದಾಯ ಖೋತಾ

ಅಬಕಾರಿ ಇಲಾಖೆಗೆ ಪ್ರತಿ ದಿನಕ್ಕೆ ಸರಾಸರಿ ಅಂದಾಜು 55ರಿಂದ 60 ಕೋಟಿ ರು. ಆದಾಯ ಬರುತ್ತದೆ. ವಾರಾಂತ್ಯ, ಮಾಸಾಂತ್ಯ ಹಾಗೂ ವಿಶೇಷ ರಜಾ ದಿನಗಳಲ್ಲಿ ಸಹಜವಾಗಿಯೇ ವಹಿವಾಟು ಹೆಚ್ಚಳವಾಗುತ್ತದೆ. ಇದೀಗ ಸರ್ಕಾರ ಒಂದು ವಾರ ಕಾಲ ಪಬ್‌ಗಳು ಹಾಗೂ ನೈಟ್‌ ಕ್ಲಬ್‌ಗಳನ್ನು ಬಂದ್‌ ಮಾಡಿಸಿರುವುದರಿಂದ ಸುಮಾರು 400 ಕೋಟಿ ರು. ಆದಾಯಕ್ಕೆ ಹೊಡೆತ ಬೀಳಲಿದೆ. ಅಲ್ಲದೆ, ಮದ್ಯ ಸರಬರಾಜನ್ನು ಯಾರಾರ‍ಯರಿಗೆ ಸ್ಥಗಿತಗೊಳಿಸಬೇಕೆಂದು ಸರ್ಕಾರದಿಂದ ಈವರೆಗೆ ಸ್ಪಷ್ಟಆದೇಶ ಬಂದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರಿಗೆ ಇಲಾಖೆಗೆ 5 ಕೋಟಿ ರು. ನಷ್ಟ

ಕೆಎಸ್‌ಆರ್‌ಟಿಸಿಯ 8,600 ಬಸ್‌ಗಳಲ್ಲಿ ಸುಮಾರು 35 ಲಕ್ಷ ಮಂದಿ ನಿತ್ಯ ಪ್ರಯಾಣ ಮಾಡುತ್ತಾರೆ. ಅದರಿಂದ 9 ಕೋಟಿ ರು. ಆದಾಯ ಬರುತ್ತದೆ. ಇನ್ನು ಬಿಎಂಟಿಸಿಯ 6200 ಬಸ್‌ಗಳಲ್ಲಿ ನಿತ್ಯ 35 ಲಕ್ಷ ಮಂದಿ ಪ್ರಮಾಣ ಮಾಡುತ್ತಾರೆ. ಅದರಿಂದ 3.5 ಕೋಟಿ ರು. ಆದಾಯ ಬರುತ್ತದೆ. ಏಳು ದಿನ ಚಿತ್ರಮಂದಿರ, ಸಭೆ ಸಮಾರಂಭ ರದ್ದುಗೊಳ್ಳುವುದರಿಂದ ದಿನಕ್ಕೆ ಸುಮಾರು 5.5 ಕೋಟಿ ರು. ನಷ್ಟವಾದರೆ 7 ದಿನಕ್ಕೆ 30ರಿಂದ 35 ಕೋಟಿ ರು. ಆದಾಯ ನಷ್ಟವಾಗಲಿದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Coronavirus Karnataka Shuts For 1 Week May Face 20 Thousand Crore Rupees Loss

ಒಂದು ವಾರ ಸರ್ಕಾರಿ ರಜೆ : ಊರಿಗೆ ಹೊರಟವರಿಂದ ಫುಲ್ ಜಾಂ

ಆದಾಯ ನಷ್ಟಕ್ಕೆ ಕಾರಣಗಳೇನು?

* ಐಟಿ-ಬಿಟಿ ಉದ್ಯೋಗಿಗಳು ಮನೆಯಿಂದ ಕೆಲಸ

* ವಸ್ತುಗಳ ಮಾರಾಟ ಕುಸಿತ

* ಇಂಧನ ಬಳಕೆ ಕಡಿಮೆ

* ಹೊರ ರಾಜ್ಯ ಮತ್ತು ರಾಜ್ಯದ ಒಳಗೆ ಸಾರಿಗೆ ಸಂಚಾರ ಕುಸಿತ

* ಸಭೆ- ಸಮಾರಂಭ ಇರುವುದಿಲ್ಲ

ಕೊರೋನಾ ವೈರಸ್‌ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios