ಬೆಂಗಳೂರು[ಜ.31]:  ಚೀನಾದಲ್ಲಿ ಮರಣ ಮೃದಂಗ ಬಾರಿಸುವ ಮೂಲಕ ಇಡೀ ವಿಶ್ವದಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಮಾರಣಾಂತಿಕ ನೋವಲ್‌ ಕೊರೋನಾ ವೈರಸ್‌ ಪ್ರಕರಣವು ಕೇರಳದಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಗುರುವಾರ ವಿಡಿಯೋ ಸಂವಾದದ ಮೂಲಕ ಚರ್ಚೆ ನಡೆಸಿದ್ದು, ಪರಿಣಾಮ ರಾಜ್ಯಾದ್ಯಂತ ಕೊರೋನಾ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

"

ಚೀನಾದ ವುಹಾನ್‌ ನಗರದಿಂದ ಕೇರಳಕ್ಕೆ ವಾಪಸಾದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮಾತ್ರವಲ್ಲದೆ ನೆರೆಯ ಕರ್ನಾಟಕದಲ್ಲೂ ವೈರಾಣು ಹರಡುವ ಭೀತಿ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರವೂ ತೀವ್ರ ಕಟ್ಟೆಚ್ಚರ ಕ್ರಮಗಳಿಗೆ ಆದೇಶ ಹೊರಡಿಸಿದೆ.

ಇದರಂತೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಮಾತ್ರವಲ್ಲದೆ, ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲೂ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ.

ಚೀನಾ ಸೇರಿದಂತೆ ನೋವಲ್‌ ಕೊರೋನಾ ವೈರಸ್‌ ಸೋಂಕು ವರದಿಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ, ಶಂಕಿತ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ ಅವರ ಮೇಲೆ 28 ದಿನಗಳ ಕಾಲ ನಿಗಾ ವಹಿಸಲಾಗುವುದು. ಅಲ್ಲದೆ, ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಇರುವ ಸಾರಿಗೆ ಸಂಪರ್ಕದ ಬಗ್ಗೆಯೂ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ವೈರಸ್‌ನಿಂದ ಪಾರಾಗಲು ನಮ್ಮ ಬಳಿ ಇದೆ ಉಪಾಯ...

ರಾಜ್ಯಾದ್ಯಂತ ಐಸೋಲೇಷನ್‌ ವಾರ್ಡ್‌: ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 15 ಹಾಸಿಗೆ, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ 10 ಹಾಸಿಗೆವುಳ್ಳ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ. ಇದಲ್ಲದೆ ಬೆಂಗಳೂರಿನ ಜಯನಗರ ಜನರಲ್‌ ಆಸ್ಪತ್ರೆ ಮತ್ತು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲೂ ತಲಾ 5 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ತೆರೆಯಲು ನಿರ್ಧರಿಸಲಾಗಿದೆ. ಜತೆಗೆ ರಾಜ್ಯಾದ್ಯಂತ ಮುಂಚೂಣಿಯಲ್ಲಿರುವ ಹತ್ತು ಖಾಸಗಿ ಆಸ್ಪತ್ರೆಗಳಲ್ಲೂ ವಿಶೇಷ ವ್ಯವಸ್ಥೆಗೆ ಸೂಚಿಸಲಾಗಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 5 ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್‌ ತೆರೆಯುವುದು. ಜತೆಗೆ ಅಗತ್ಯವಾದ ಎಲ್ಲಾ ಔಷಧಿ ಹಾಗೂ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

21 ಪ್ರಯಾಣಿಕರ ಮೇಲೆ ತೀವ್ರ ನಿಗಾ:  ಚೀನಾದಿಂದ ರಾಜ್ಯಕ್ಕೆ ಆಗಮಿಸಿರುವ 21 ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಶಂಕಿತ 13 ಮಂದಿಯ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆ (ಎನ್‌ಐವಿ)ಗೆ ಕಳುಹಿಸಲಾಗಿದ್ದು, ಈ ಪೈಕಿ ನಾಲ್ಕು ಮಾದರಿಗಳ ವರದಿ ನೆಗೆಟೀವ್‌ ಎಂದು ಬಂದಿದೆ. ಹೀಗಾಗಿ ನಾಲ್ವರನ್ನು ಮನೆಗೆ ಕಳುಹಿಸಲಾಗಿದೆ.

ಉಳಿದ 9 ಮಂದಿಯಲ್ಲಿ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಉಳಿದ ಆರು ಮಂದಿ ವರದಿ ಬರುವ ಮುನ್ನವೇ ಮನೆಗೆ ತೆರಳಿದ್ದಾರೆ. ಈ ಎಲ್ಲ 17 ಮಂದಿಯನ್ನು ಮಂದಿಯನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ 28 ದಿನಗಳ ಕಾಲ ಆರೋಗ್ಯ ಕಾರ್ಯಕರ್ತರು ಇವರ ನಿಗಾ ವಹಿಸಲಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಚೀನಾ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಸೂಚನೆ:

"