Asianet Suvarna News Asianet Suvarna News

ಕೊರೋನಾ ಭೀತಿ: ಸ್ವಂತ ವಾಹನಗಳಲ್ಲಿ ಊರುಗಳತ್ತ ಜನ ದೌಡು!

ಕೊರೋನಾ ಭೀತಿ: ಊರುಗಳತ್ತ ಜನ ದೌಡು!| ಜನರು ಸೋಂಕಿಗೆ ಹೆದರಿ ಸಮೂಹ ಸಾರಿಗೆಯಿಂದ ದೂರ| ಖಾಸಗಿ, ಸ್ವಂತ ವಾಹನಗಳಲ್ಲಿ ತವರಿಗೆ| 2ನೇ ಬಾರಿ ವಲಸೆ

Coronavirus Fear People Are Rushing Towards Native Places in Private Vehicles
Author
Bangalore, First Published Jun 29, 2020, 11:14 AM IST

ಬೆಂಗಳೂರು(ಜೂ.29): ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೆಚ್ಚಿಬಿದ್ದಿರುವ ಜನರು ಊರುಗಳತ್ತ ದೌಡಾಯಿಸುತ್ತಿದ್ದಾರೆ.

ಸೋಂಕು ಹರಡುವ ಭೀತಿಯಲ್ಲಿ ಬಸ್‌, ರೈಲು ಸೇರಿದಂತೆ ಸಮೂಹ ಸಾರಿಗೆಯಿಂದ ದೂರು ಉಳಿದಿದ್ದ ಜನರು, ಭಾನುವಾರ ಮುಂಜಾನೆಯಿಂದಲೇ ಸ್ವಂತ ಹಾಗೂ ಖಾಸಗಿ ವಾಹನಗಳಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ಊರುಗಳತ್ತ ಪ್ರಯಾಣಿಸಿದರು.

ಲಾಕ್‌ಡೌನ್‌ ಜಾರಿ ಬಳಿಕ ವಿವಿಧ ರಾಜ್ಯಗಳ ಸುಮಾರು 3.70 ಲಕ್ಷ ವಲಸೆ ಕಾರ್ಮಿಕರು ನಗರದಿಂದ ತವರು ರಾಜ್ಯಗಳಿಗೆ ತೆರಳಿದ್ದರು. ಅದೇ ರೀತಿ ಉದ್ಯೋಗ ನಿಮಿತ್ತ ನಗರದಲ್ಲಿ ನೆಲೆಸಿದ್ದ ರಾಜ್ಯದ ವಿವಿಧ ಭಾಗಗಳ ಜನರು ಊರುಗಳತ್ತ ಮುಖ ಮಾಡಿದ್ದರು. ಈಗ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟುಭಯಗೊಂಡಿರುವ ಜನರು ನಗರದ ಮನೆಗಳನ್ನು ಖಾಲಿ ಮಾಡಿಕೊಂಡು ಕುಟುಂಬ ಸಮೇತ ಊರುಗಳಿಗೆ ತೆರಳುತ್ತಿದ್ದಾರೆ. ಇದರಿಂದ ನಗರದ ಸಾಕಷ್ಟುಬಡಾವಣೆಗಳಲ್ಲಿ ಮನೆಗಳು ಖಾಲಿ ಉಳಿದಿದ್ದು, ‘ಮನೆ ಖಾಲಿ ಇದೆ’ ಫಲಕಗಳು ತೂಗು ಹಾಕಲಾಗಿದೆ.

ಟ್ರಾಫಿಕ್‌ ಜಾಮ್‌:

ಭಾನುವಾರ ಮುಂಜಾನೆಯಿಂದಲೇ ನಗರದ ವಿವಿಧ ಭಾಗಗಳಿಂದ ಜನರು ಊರುಗಳತ್ತ ಪ್ರಯಾಣ ಬೆಳೆಸಿದ ಪರಿಣಾಮ ಬೆಂಗಳೂರು-ತುಮಕೂರು, ಬೆಂಗಳೂರು-ಹೈದರಾಬಾದ್‌, ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಅದರಲ್ಲೂ ನೆಲಮಂಗಲ ಸಮೀಪದ ನವಯುಗ ಟೋಲ್‌, ಬಳ್ಳಾರಿ ರಸ್ತೆಯ ಸಾದಹಳ್ಳಿ ಗೇಟ್‌ ಟೋಲ್‌ ಕೇಂದ್ರದ ಬಳಿ ಕಿಲೋ ಮೀಟರ್‌ ಉದ್ದಕ್ಕೆ ವಾಹನಗಳು ಸಾಲುಗಟ್ಟಿನಿಂತಿದ್ದವು. ಟೋಲ್‌ ಪಾವತಿಗೆ ಹೆಚ್ಚು ಸಮಯದ ಹಿಡಿದ ಪರಿಣಾಮ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಕೆಲ ವಾಹನ ಚಾಲಕರು ಟೋಲ್‌ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios