ಬೆಂಗಳೂರು[ಮಾ.17]: ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತವಾಗಿರುವ ಪರಿಣಾಮ ಕಳೆದ ಹದಿನೈದು ದಿನಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಕೆಎಸ್‌ಆರ್‌ಟಿಸಿ) 3.91 ಕೋಟಿ ರು. ಆದಾಯ ಖೋತಾ ಆಗಿದೆ.

ಕೊರೋನಾ ವೈರಸ್‌ ಭೀತಿಯಿಂದ ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂದೂಡುತ್ತಿರುವ ಪರಿಣಾಮ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗುತ್ತಿದೆ. ಈ ನಡುವೆ ಮಾ.1ರಿಂದ ಮಾ.10ರ ವರೆಗೆ ಪ್ರಯಾಣಿಕರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಕುಸಿದಿತ್ತು. ವೈರಸ್‌ ಭೀತಿ ಹೆಚ್ಚಾದ್ದರಿಂದ ಮಾ.10ರ ಬಳಿಕ ಪ್ರತಿ ದಿನ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ದಿನದಿಂದ ದಿನಕ್ಕೆ ಬಸ್‌ ಕಾರ್ಯಾಚರಣೆ ಕಡಿತಗೊಳಿಸಲಾಗುತ್ತಿದ್ದು, ಸೋಮವಾರ ಮತ್ತೆ 585 ಬಸ್‌ ಸ್ಥಗಿತಗೊಳಿಸಲಾಗಿದೆ. ಒಟ್ಟಾರೆ ಕಳೆದ 15 ದಿನಗಳ ಅವಧಿಯಲ್ಲಿ 3.20 ಲಕ್ಷ ಕಿ.ಮೀ. ಸಂಚಾರ ರದ್ದಾಗಿದೆ.

ಮುಂಗಡ ಬುಕಿಂಗ್‌ ಅರ್ಧ ಕುಸಿತ:

ಸಾಮಾನ್ಯ ದಿನಗಳಲ್ಲಿ ಮುಂಗಡ ಟಿಕೆಟ್‌ ಬುಕಿಂಗ್‌ 22 ಸಾವಿರದಿಂದ 23 ಸಾವಿರ ಇರುತ್ತದೆ. ಕಳೆದೊಂದು ವಾರದಿಂದ 12 ಸಾವಿರದಿಂದ 13 ಸಾವಿರಕ್ಕೆ ಕುಸಿದಿದೆ. ರಾಜಧಾನಿ ಹಾಗೂ ಇತರೆ ನಗರಗಳಿಂದ ದೂರದ ಊರುಗಳಿಗೆ ಪ್ರಯಾಣಿಸುವವರು ತಮ್ಮ ಪ್ರಯಾಣವನ್ನು ರದ್ದು ಮಾಡಿದ್ದರೆ, ಕೆಲವರು ಪ್ರಯಾಣದಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಮುಂಗಡ ಟಿಕೆಟ್‌ ಬುಕಿಂಗ್‌ ಅರ್ಧದಷ್ಟುಕುಸಿದಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕಳೆದ ಶನಿವಾರ ಸುಮಾರು ಎರಡು ಲಕ್ಷ ಪ್ರಯಾಣಿಕರು ಅನಿರೀಕ್ಷಿತವಾಗಿ ರಾಜಧಾನಿಯಿಂದ ಹೊರಗೆ ತೆರಳಿದ್ದರು. ಭಾನುವಾರ ಪ್ರಯಾಣಿಕರ ಕೊರತೆಯಿಂದ 591 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಕೂಡ ಪ್ರಯಾಣಿಕರ ಕೊರತೆ ಮುಂದುವರಿದ ಪರಿಣಾಮ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ಪೈಕಿ 585 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಕೊರೋನಾ ವೈರಸ್ ಹಾವಳಿ: ಈವರೆಗೆ ಏನೇನಾಯ್ತು? ಎಲ್ಲಾ ಸುದ್ದಿಗಳು ಒಂದು ಕ್ಲಿಕ್‌ನಲ್ಲಿ

ಪ್ರೀಮಿಯಂ ಬಸ್‌ಗಳಲ್ಲಿ ಬೆಡ್‌ಶೀಟ್‌ ಸ್ಥಗಿತ:

ಮಾರಕ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಆಸನದ ಮೇಲೆ ಹಾಸಲು ಹಾಗೂ ಹೊದೆಯಲು ನೀಡಲಾಗುವ ಬೆಡ್‌ಶೀಟ್‌ಗಳನ್ನು ಮಾ.18ರಿಂದ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಬದಲಾಗಿ ಪ್ರಯಾಣಿಕರೇ ತಮಗೆ ಅಗತ್ಯವಿರುವ ಬೆಡ್‌ಶೀಟ್‌ ಹಾಗೂ ಬೆಡ್‌ಸೆ್ೊ್ರಡ್‌ ತಂದು ಬಳಸಬಹುದು ಎಂದು ತಿಳಿಸಿದೆ.