ಬೆಂಗಳೂರು(ಮೇ 15): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಗುರುವಾರ ಪ್ಲಾಸ್ಮಾ ಚಿಕಿತ್ಸೆಯೂ ಫಲಿಸದೆ ಓರ್ವ ವೃದ್ಧ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಹೊಸದಾಗಿ 27 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಒಟ್ಟು ಮೃತರ ಸಂಖ್ಯೆ 35ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆಯಾಗಿದೆ.

ಮೃತಪಟ್ಟಇಬ್ಬರು ಸೋಂಕಿತರಲ್ಲಿ ಒಬ್ಬರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 60 ವರ್ಷದ ಪುರುಷ ವ್ಯಕ್ತಿ (ಪಿ.976). ತೀವ್ರ ಉಸಿರಾಟದ ತೊಂದರೆ, ನ್ಯುಮೋನಿಯಾ, ಕಡಿಮೆ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಬೆಂಗಳೂರಿನ ನಿಗದಿತ ಕೋವಿಡ್‌ 19 ಚಿಕಿತ್ಸಾ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರಿಗೆ ಮೇ 11ರಂದು ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು. ಪ್ಲಾಸ್ಮಾ ಚಿಕಿತ್ಸೆಯೂ ಫಲಿಸದೆ ಅವರು ಗುರುವಾರ ಮೃತಪಟ್ಟಿದ್ದಾರೆ.

ಬೆಂಗಳೂರಲ್ಲಿ ಮಾರಕ ಕೊರೋನಾ ಸೋಂಕಿತರ ಸಂಖ್ಯೆ 200ರ ಗಡಿಯತ್ತ..!

ಮತ್ತೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಪಿ.536 ಸಂಖ್ಯೆಯ 58 ವರ್ಷದ ಮಹಿಳೆಯಾಗಿದ್ದು, ಇವರು ಖಾಸಗಿ ಆಸ್ಪತ್ರೆಯಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಏ.28ರಂದು ಸೋಂಕು ದೃಢಪಟ್ಟು ನಿಗದಿತ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಬುಧವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

27 ಜನರಿಗೆ ಮತ್ತೆ ಸೋಂಕು:

ಇನ್ನು ಗುರುವಾರ ಮತ್ತೆ 27 ಜನರಿಗೆ ಸೋಂಕು ದೃಢಪಟ್ಟಿದೆ. ಬೀದರ್‌ನಲ್ಲಿ ಒಬ್ಬ ಮಹಿಳೆ ಸೇರಿ 6 ಜನರಿಗೆ, ಬೆಂಗಳೂರು, ಮಂಡ್ಯದಲ್ಲಿ ತಲಾ 5, ಗದಗದಲ್ಲಿ 4, ದಾವಣಗೆರೆ 3, ಕಲಬುರಗಿ 2, ಬೆಳಗಾವಿ, ಬಾಗಲಕೋಟೆ ತಲಾ 1 ಪ್ರಕರಣ ದೃಢಪಟ್ಟಿದೆ.

ಬೀದರ್‌ ಆರು ಸೋಂಕಿತರದಲ್ಲಿ ಪಿ.959 ರೋಗಿಯಿಂದ ಇಬ್ಬರಿಗೆ, ಕಂಟೈನ್‌ಪ್ರದೇಶದ ಸಂರ್ಪದಲ್ಲಿದ್ದ ಮೂವರಿಗೆ ಮತ್ತು ಮುಂಬೈ ಪ್ರವಾಸದಿಂದ ಒಬ್ಬ ಮಹಿಳೆಗೆ ಸೋಂಕು ತಗುಲಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ. ಇನ್ನು, ಮಂಡ್ಯದಲ್ಲಿ ಮುಂಬೈ ಪ್ರವಾಸದಿಂದ ನಾಲ್ವರಿಗೆ, ಪಿ.179 ರೋಗಿಯಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 36ರಷ್ಟಾಗಿದೆ.

ಗದಗದಲ್ಲಿ ತಬ್ಲೀಘಿಗಳಿಗೆ ಸೋಂಕು:

ಜಿಲ್ಲೆಯಲ್ಲಿ ಗುಜರಾತ್‌ನ ಅಹಮದಾಬಾದ್‌ನಿಂದ ಬಂದಿದ್ದ ಇನ್ನೂ ನಾಲ್ವರು ತಬ್ಲೀಘಿಘಿಗಳಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಈ ವರೆಗಿನ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೇರಿದೆ.

ಕೊರೋನಾ ಕಾಟ: ಪ್ರತಿ ಕುಟುಂಬದ ಕೋವಿಡ್‌ ಪರೀಕ್ಷೆ ಆರಂಭ

ಇನ್ನು ಬೆಂಗಳೂರಿನಲ್ಲಿ ಹೊಂಗಸಂದ್ರದ ಪಿ.554 ಸೋಂಕಿತನಿಂದ ಐದು ಜನರಿಗೆ ಸೋಂಕು ಹರಡಿದೆ. ಬುಧವಾರ ರಾತ್ರಿಯೇ ಈ ಮಾಹಿತಿ ಬಹಿರಂಗವಾಗಿತ್ತು. ಅದನ್ನು ಆರೋಗ್ಯ ಇಲಾಖೆ ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 189 ಆಗಿದೆ. ಅದೇ ರೀತಿ ದಾವಣಗೆರೆಯಲ್ಲಿ ಕ್ವಾರಂಟೈನ್‌ ಪ್ರದೇಶದ ಒಬ್ಬರಿಗೆ, ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ, ಇನ್‌ಫ್ಲುಯೆನ್ಜಾ ಜ್ವರದಿಂದ ಮಗದೊಬ್ಬ ವ್ಯಕ್ತಿಗೆ ಸೋಂಕು ಹರಡಿದೆ. ಕಲಬರಗಿಯಲ್ಲಿ ಇಬ್ಬರು ಸೋಂಕಿತರಿಂದ ತಲಾ ಒಬ್ಬರಿಗೆ, ಬೆಳಗಾವಿಯಲ್ಲಿ ಮುಂಬೈ ಪ್ರವಾಸದ ಓರ್ವ ಮಹಿಳೆಗೆ, ಬಾಗಲಕೋಟೆಯಲ್ಲಿ ವಿದೇಶ ಪ್ರವಾಸದಿಂದ ಬಂದ ಒಬ್ಬ ಪುರುಷನಿಗೆ ಸೋಂಕು ದೃಢಪಟ್ಟಿದೆ.

9 ಜನ ಬಿಡುಗಡೆ:

ಗುರುವಾರ ಬೆಂಗಳೂರು, ಕಲಬುರಗಿ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರು, ವಿಜಯಪುರದಲ್ಲಿ ಒಬ್ಬ ವ್ಯಕ್ತಿ ಸೇರಿ ಒಟ್ಟು 9 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ 460ರಷ್ಟಾಗಿದೆ. ಉಳಿದ 491 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.