ಸೋಂಕು 30% ಏರಿಕೆ, ಪಾಸಿವಿಟಿಟಿ 1% ಹೆಚ್ಚಳ, ಮುನ್ನೆಚ್ಚರಿಕೆ ವಹಿಸಲು ರಾಜ್ಯಕ್ಕೆ ಕೇಂದ್ರ ಪತ್ರ

ಬೆಂಗಳೂರು(ಆ.07):  ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪತ್ರಬರೆದಿದೆ. ಮುಖ್ಯವಾಗಿ ಒಂದೇ ವಾರದಲ್ಲಿ ರಾಜ್ಯದ ಸೋಂಕು ಹೊಸ ಪ್ರಕರಣಗಳು ಶೇ.30 ಹೆಚ್ಚಿದ್ದು, 24 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಹೆಚ್ಚಳವನ್ನು ಗುರುತಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದೆ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಸರಾಸರಿ 1,355 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್‌ ಮೊದಲ ವಾರ 2,000 ಆಸುಪಾಸಿಗೆ ಹೆಚ್ಚಿದೆ. ದೇಶಾದ್ಯಂತ ಕಳೆದ ಒಂದು ವಾರದಲ್ಲಿ ದಾಖಲಾದ ಹೊಸ ಪ್ರಕರಣಗಳ ಪೈಕಿ ಕರ್ನಾಟಕದಲ್ಲಿ ಶೇ.10.1 ವರದಿಯಾಗಿದೆ. ಜುಲೈ ಕೊನೆಯ ವಾರಕ್ಕೂ ಮತ್ತು ಆಗಸ್ಟ್‌ ಮೊದಲ ವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು ಶೇ.30ರಷ್ಟು, ಪಾಸಿಟಿವಿಟಿ ದರ ಶೇ.1ರಷ್ಟು(ಶೇ.5.3 ರಿಂದ ಶೇ.6.3ಕ್ಕೆ ) ಹೆಚ್ಚಿದೆ. 24 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಒಂದು ಅಥವಾ ಎರಡು ಪಟ್ಟು ಅಧಿಕವಾಗಿವೆ. ಇನ್ನು ಏಳು ಜಿಲ್ಲೆಗಳಲ್ಲಿ ಪರೀಕ್ಷೆ ಪ್ರಮಾಣ ತಗ್ಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚು ಪ್ರಕರಣ ವರದಿಯಾಗುವ ಜಿಲ್ಲೆಗಳು, ಪಾಸಿಟಿವಿಟಿ ದರ, ಕ್ಲಸ್ಟರ್‌ಗಳ ಮೇಲೆ ಸೂಕ್ತ ನಿಗಾ ವಹಿಸಬೇಕು. ಜ್ವರ ಮತ್ತು ಉಸಿರಾಟ ಸಮಸ್ಯೆ ಹೆಚ್ಚಿರುವ ಪ್ರಕರಣಗಳ ಮೇಲೆ ಸೂಕ್ಷ್ಮ ನಿಗಾ ಇಡಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ವಂಶವಾಹಿ ಪರೀಕ್ಷೆಗೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ, ಅಂತಾರಾಜ್ಯ ಬಸ್‌ ನಿಲ್ದಾಣಗಳು, ಶಾಲೆಗಳು, ಕಾಲೇಜುಗಳು, ರೈಲು ನಿಲ್ದಾಣಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಲಸಿಕೆ ಪ್ರಮಾಣ ಹೆಚ್ಚಳದತ್ತ ಗಮನ ಇರಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಕೋವಿಡ್‌ ಲಸಿಕೆ: ಫ್ರೀ 3ನೇ ಡೋಸ್‌ಗೆ ಭಾರೀ ಬೇಡಿಕೆ

ಸೋಂಕು ಹೆಚ್ಚಾಗಿರುವ ಜಿಲ್ಲೆಗಳು

ಒಂದು ವಾರದಲ್ಲಿ ಕೊರೋನಾ ಹೊಸ ಪ್ರಕರಣಗಳು ಬೆಳಗಾವಿ, ಹಾಸನ, ತುಮಕೂರು, ಕೊಡಗು, ರಾಯಚೂರು, ದಾವಣಗೆರೆ, ಹಾವೇರಿ ಹಾಗೂ ಚಿಕ್ಕಮಗಳೂರಿನಲ್ಲಿ ದುಪ್ಪಟ್ಟಾಗಿದೆ. ಮೈಸೂರು, ಮಂಡ್ಯ, ಕಲಬುರಗಿ, ಶಿವಮೊಗ್ಗ, ಚಾಮರಾಜನಗರ, ಕೊಪ್ಪಳ, ರಾಮನಗರದಲ್ಲಿ ಒಂದೂವರೆ ಪಟ್ಟಾಗಿವೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಕೋಲಾರ, ಬಾಗಲಕೋಟೆ, ಉತ್ತರಕನ್ನಡ, ಬೀದರ್‌, ಉಡುಪಿ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಒಂದು ಪಟ್ಟು ಹೆಚ್ಚಳವಾಗಿದೆ.