ಬೆಂಗಳೂರು(ಜೂ.12): ಲಾಕ್‌ಡೌನ್‌ ಸಡಿಲಿಕೆ ನಂತರ ನಗರದಲ್ಲಿ ಬರೋಬ್ಬರಿ 124 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಜತೆಗೆ, ಗುರುವಾರದ ವೇಳೆಗೆ 99 ವಾರ್ಡ್‌ಗಳಲ್ಲಿ ಈ ಮಹಾಮಾರಿ ಕಾಣಿಸಿಕೊಳ್ಳುವ ಮೂಲಕ ಬಹುತೇಕ ಉದ್ಯಾನ ನಗರಿಯ ಅರ್ಧ ಪ್ರದೇಶಗಳಲ್ಲಿ ಕೊರೋನಾ ಅಟ್ಟಹಾಸ ಶುರುವಾದಂತಾಗಿದೆ.

"

ಕಳೆದ ಬುಧವಾರದವರೆಗೆ ಬಿಬಿಎಂಪಿಯ 95 ವಾರ್ಡ್‌ಗಳಿಗೆ ವ್ಯಾಪಿಸಿದ್ದ ಕೊರೋನಾ ಸೋಂಕು ಗುರುವಾರ ಮತ್ತೆ ನಾಲ್ಕು ಹೊಸ ವಾರ್ಡ್‌ಗೆ ಹಬ್ಬಿದ ಪರಿಣಾಮ ಬೆಂಗಳೂರಿನ ಅರ್ಧದಷ್ಟುಭಾಗಕ್ಕೆ ವ್ಯಾಪ್ತಿಸಿದಂತಾಗಿದೆ. ಲಾಕ್‌ಡೌನ್‌ ಸಡಿಲಿಕೆಗಿಂತ ಮೊದಲು ಅಂದರೆ ಮೇ 31ಕ್ಕೆ ಬೆಂಗಳೂರಿನಲ್ಲಿ 357 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದವು. ಅದಾದ ಬಳಿಕ 11 ದಿನದಲ್ಲಿ ಬರೋಬ್ಬರಿ 124 ಹೊಸ ಕೊರೋನಾ ಸೋಂಕು ದೃಢಪಟ್ಟಿವೆ.

ಕೊರೋನಾ ಅಬ್ಬರಕ್ಕೆ ರಾಜ್ಯದಲ್ಲಿ ಗುರುವಾರ 7 ಬಲಿ..!

ಈವರೆಗೆ ಕಂಟೈನ್ಮೆಂಟ್‌ ಒಳಪಟ್ಟವಾರ್ಡ್‌ಗಳ ಪೈಕಿ 113 ಪ್ರದೇಶಗಳನ್ನು ಕಂಟೈನ್ಮೆಂಟ್‌ ಮಾಡಲಾಗಿದೆ. ಇದರಲ್ಲಿ 96 ಸೀಮಿತ ಪ್ರದೇಶದ ಕಂಟೈನ್ಮೆಂಟ್‌ (ರಸ್ತೆ, ಬೀದಿ ಇತ್ಯಾದಿ), 13 ಅಪಾರ್ಟ್‌ಮೆಂಟ್‌ಗಳು, ಎರಡು ಕೊಳೆಗೇರಿ (ನಾಗವಾರ ಮತ್ತು ಎಸ್‌.ಕೆ.ಗಾರ್ಡನ್‌) 1 ಪ್ರಾಥಮಿಕ ಸಂಪರ್ಕಿರು ಹೆಚ್ಚಾಗಿರುವ ಪ್ರದೇಶ ಹಾಗೂ ಒಂದು ಹೋಟೆಲ್‌ನ್ನು ಕಂಟೈನ್ಮೆಂಟ್‌ ಮಾಡಲಾಗಿದೆ.

ಸಕ್ರಿಯ ಪ್ರಕರಣಗಳು:

ನಗರವನ್ನು ಸೋಂಕಿತ ನಗರವನ್ನಾಗಿಸಿದ ಆರು ಕಂಟೈನ್ಮೆಂಟ್‌ ಪ್ರದೇಶದಲ್ಲಿಯೇ ಶೇ.34ರಷ್ಟುಸೋಂಕು ವರದಿಯಾಗಿದೆ. ಒಟ್ಟು ಪ್ರಕರಣದಲ್ಲಿ ಪಾದರಾಯನಪುರದಲ್ಲಿ ಶೇ.6, ಆಗ್ರಹಾರ ದಾಸರಹಳ್ಳಿಯಲ್ಲಿ ಶೇ.7, ಬೊಮ್ಮನಹಳ್ಳಿ ವಲಯದ ಮಂಗಮ್ಮಪಾಳ್ಯದಲ್ಲಿ ಶೇ.3, ಎಸ್‌.ಕೆ.ಗಾರ್ಡ್‌ನಲ್ಲಿ ಶೇ.13, ಮಲ್ಲೇಶ್ವರದಲ್ಲಿ ಶೇ.3, ಶಿವಾಜಿನಗರದ ಅಗ್ರಂ ವಾರ್ಡ್‌ನಲ್ಲಿ ಶೇ.2 ರಷ್ಟುಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪತ್ತೆಯಾದ ಪ್ರದೇಶ:

ಕೆಂಗೇರಿಯ ಲಿಂಗಾಯತರ ಬೀದಿಯಲ್ಲಿ 58 ವರ್ಷದ ವ್ಯಕ್ತಿ ಕೊರೋನಾ ಸೋಂಕು ದೃಢಪಟ್ಟಿದ್ದು, ಬೀದಿಯನ್ನು ಕಂಟೈನ್ಮೆಂಟ್‌ ಮಾಡಲಾಗಿದೆ. ಮಾನ್ಯತಾ ಟೆಕ್‌ ಪಾರ್ಕ್ ಐದನೇ ಗೇಟ್‌ ಬಳಿಕ ಆರ್ಕಾವತಿ ಬಡಾವಣೆ ನಿವಾಸಿಗೆ 45 ವರ್ಷದ ವ್ಯಕ್ತಿಗೆ ಸೋಂಕು, ಸರ್ಜಾಪುರದ ಕೃಷ್ಣಪ್ಪನಗರ 38 ವರ್ಷದ ವ್ಯಕ್ತಿ, ಬಿಟಿಎಂ ಲೇಔಟ್‌ನ ಸೋಮೇಶ್ವರ ಕಾಲೋನಿಯ 37 ವರ್ಷದ ವ್ಯಕ್ತಿ, ಮೈಸೂರು ರಸ್ತೆಯ ಮಸ್ಜಿದ್‌ ಕಾಂಪೌಂಡ್‌ನಗರದ 45 ವರ್ಷ ವ್ಯಕ್ತಿ, ವಾಲ್ಮೀಕಿನಗರದ 58 ವರ್ಷದ ವ್ಯಕ್ತಿ, ಬನಶಂಕರಿಯ ಸರೆಬಂಡೆಪಾಳ್ಯದ 23 ವರ್ಷ ಮಹಿಳೆ, ಆನೇಕಲ್‌ನ ಹೆಣ್ಣಾಗರದ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಉಸಿರಾಟ ತೊಂದರೆ(ಎಸ್‌ಎಆರ್‌ಐ) ಯಿಂದ ಬಳಲುತ್ತಿದ್ದ ಎಚ್‌ಎಎಲ್‌ ನಿವಾಸಿಯಾದ 58 ವರ್ಷದ ಮಹಿಳೆಗೆ ಸೋಂಕು ಇದೆ.

ಒಂದೇ ಕುಟುಂಬದ ಮೂವರಿಗೆ ಸೋಂಕು

ಮಹಾರಾಷ್ಟ್ರದಿಂದ ಬಂದು ಆನೇಕಲ್‌ನ ಅಮೃತ ಮಹಲ್‌ ಹಾಸ್ಟಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಒಂದೇ ಕುಟುಂಬದ ಮೂವರಿಗೆ ಹಾಗೂ ತಮಿಳುನಾಡಿನಿಂದ ಬಂದಿದ್ದ ಜಯಂತಿನಗರ ನಿವಾಸಿಗೆ ಕೊರೋನಾ ಸೋಂಕು ಖಚಿತವಾಗಿದೆ. ಅಂಜನಪ್ಪ ಗಾರ್ಡನ್‌ ಒಬ್ಬರಿಗೆ ಸೋಂಕಿತರ ಸಂಪರ್ಕದಿಂದ ಕೊರೋನಾ ಕಾಣಿಸಿಕೊಂಡಿದೆ. ಪಾದರಾಯನಪುರದ 25 ವರ್ಷದ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಗುರುವಾರ ಒಟ್ಟು ಹೊಸದಾಗಿ 17 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. 5 ಮಂದಿ ಹೊರ ರಾಜ್ಯದಿಂದ ಆಗಮಿಸಿದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಸ್ಕಾಂ ಕಚೇರಿ ಬಂದ್‌

ಕೆಂಗೇರಿಯ ದಕ್ಷಿಣ ವೃತ್ತದ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಪುತ್ರನಿಗೆ ಕೊರೋನಾ ಸೋಂಕು ವರದಿಯಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸೋಂಕು ನಿವಾರಣ ಕ್ರಮಗಳಿಗಾಗಿ ಮುಖ್ಯ ಎಂಜಿನಿಯರ್‌ ಕಚೇರಿಯನ್ನು ಗುರುವಾರ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಭಾಗದ ಎಂಜಿನಿಯರ್‌ ಒಬ್ಬರಿಗೆ ಪ್ರಶ್ನಿಸಿದರೆ ನಮ್ಮಲ್ಲಿ ಸೋಂಕು ದೃಢಪಟ್ಟಿಲ್ಲ ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರ ಮುಖ್ಯ ಎಂಜಿನಿಯರ್‌ ಕಚೇರಿ ಮುಚ್ಚಿ ಸಂಪೂರ್ಣ ಸ್ಯಾನಿಟೈಜ್‌ ಮಾಡಲಾಗಿದೆ ಎಂದು ಹೇಳಿದರು.