ಬೆಂಗಳೂರು(ಜೂ.12):  ರಾಜ್ಯದಲ್ಲಿ ಕೊರೋನಾ ಸಾವು ತೀವ್ರಗತಿಯಲ್ಲಿ ಹೆಚ್ಚಾಗತೊಡಗಿದ್ದು, ಗುರುವಾರ ಒಂದೇ ದಿನ ಬೆಂಗಳೂರಿನಲ್ಲಿ ಆರು ಮಂದಿ ಸೇರಿದಂತೆ ರಾಜ್ಯಾದ್ಯಂತ ಒಟ್ಟು ಏಳು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

"

ಬೆಂಗಳೂರಿನಲ್ಲಿ ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ. ಇನ್ನು ರಾಯಚೂರಿನಲ್ಲಿ ಒಬ್ಬರು ಸೇರಿ ಒಟ್ಟು ಏಳು ಸಾವು ವರದಿಯಾಗಿದೆ. ಆದರೆ, ಆರೋಗ್ಯ ಇಲಾಖೆಯ ಅಧಿಕೃತ ಬುಲೆಟಿನ್‌ನಲ್ಲಿ ಬೆಂಗಳೂರಿನಲ್ಲಿನ ಎರಡು ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣ ಮಾತ್ರ ವರದಿ ಮಾಡಲಾಗಿದೆ. ಉಳಿದ ಸಾವಿನ ಪ್ರಕರಣಗಳು ಮುಂದಿನ (ಶುಕ್ರವಾರದ) ವರದಿಯಲ್ಲಿ ಬರುವ ಸಾಧ್ಯತೆ ಇದೆ. ಈ ಮೂಲಕ ಜೂ.1ರಿಂದ ಇದುವರೆಗೆ ಬರೋಬ್ಬರಿ 24 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಂತಾಗಿದ್ದು, 2 ಆತ್ಮಹತ್ಯೆ ಸೇರಿ ಇಲ್ಲಿಯವರೆಗೆ ಒಟ್ಟು 78 ಮಂದಿ ಸೋಂಕಿತರು ಮೃತಪಟ್ಟಂತಾಗಿದೆ.

ಗುರುವಾರ ಮೃತಪಟ್ಟ7 ಮಂದಿಯಲ್ಲಿ 40 ವರ್ಷದೊಳಗಿನ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಯಕೃತ್‌ ಸಮಸ್ಯೆಯೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಐಎಲ್‌ಐ (ಶೀತಜ್ವರದಂತಹ ಸೋಂಕು) ಹಿನ್ನೆಲೆಯ ಬೆಂಗಳೂರಿನ 35 ವರ್ಷದ ವ್ಯಕ್ತಿ ಜೂ.11ರಂದು ಐಸಿಯು ವಾರ್ಡ್‌ನಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಾಗೆ ಜಾಮೀನು

ಇವರಲ್ಲದೆ, 60 ವರ್ಷದ ಐಎಲ್‌ಐ ಹಿನ್ನೆಲೆಯ ಇನ್ನೊಬ್ಬ ವ್ಯಕ್ತಿ, 60 ವರ್ಷದ ಮತ್ತೊಬ್ಬ ವ್ಯಕ್ತಿ, 52 ವರ್ಷ ಹಾಗೂ 69 ವರ್ಷದ ವ್ಯಕ್ತಿ ಮತ್ತು 45 ವರ್ಷದ ಮಹಿಳೆ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೃತಪಟ್ಟ6 ಮಂದಿ ಪೈಕಿ ನಾಲ್ಕು ಮಂದಿ ಬೌರಿಂಗ್‌ ಆಸ್ಪತ್ರೆಯಿಂದ ಹಾಗೂ ಇಬ್ಬರು ಖಾಸಗಿ ಆಸ್ಪತ್ರೆಯಿಂದ ರೆಫರ್‌ ಆಗಿದ್ದವರು ಎಂದು ತಿಳಿದು ಬಂದಿದೆ. ರಾಯಚೂರಿನಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಮೇ 30ರಂದು ಆಸ್ಪತ್ರೆಗೆ ದಾಖಲಾಗಿದ್ದ 28 ವರ್ಷದ ಮಹಿಳೆ ಜೂ.8ರಂದು ಮೃತಪಟ್ಟಿದ್ದಾರೆ.

ಕಡಿಮೆಯಾಯ್ತು ಪರೀಕ್ಷೆ:

ಗುರುವಾರ 204 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆಯಾಗಿದೆ. ಜೂ.4ರವರೆಗೆ 1 ವಾರ ನಿತ್ಯ 13 ಸಾವಿರ ಸರಾಸರಿ ಪರೀಕ್ಷೆ ನಡೆಸುತ್ತಿದ್ದ ಇಲಾಖೆ ಜೂ.7ರ (11,860) ಬಳಿಕ ಪರೀಕ್ಷೆಗಳ ಪ್ರಮಾಣ ಕಡಿಮೆ ಮಾಡುತ್ತಾ ಬರುತ್ತಿದೆ. ಹೀಗಾಗಿಯೇ ಪ್ರಕರಣಗಳೂ ಸಹ ಇಳಿಮುಖಗೊಂಡಿವೆ ಎಂಬ ಆರೋಪ ಕೇಳಿಬಂದಿದೆ.

ಗುರುವಾರದ 204 ಪ್ರಕರಣಗಳ ಪೈಕಿ ಯಾದಗಿರಿ 66, ಉಡುಪಿ 22, ಬೆಂಗಳೂರು ನಗರ 17, ಕಲಬುರಗಿ 16, ರಾಯಚೂರು 15, ಬೀದರ್‌ 14, ಶಿವಮೊಗ್ಗ 10, ದಾವಣಗೆರೆ 9, ಕೋಲಾರ 6, ಮೈಸೂರು, ರಾಮನಗರ ತಲಾ 5, ವಿಜಯಪುರ 4, ಬಾಗಲಕೋಟೆ, ಉತ್ತರ ಕನ್ನಡ ತಲಾ 3, ಹಾಸನ, ಧಾರವಾಡ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. 114 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 2,976ಕ್ಕೆ ಏರಿಕೆಯಾಗಿದೆ. 3,195 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯುನಲ್ಲಿದ್ದಾರೆ.

135 ಸೋಂಕಿಗೆ ಮಹಾರಾಷ್ಟ್ರ ಮೂಲ: 204 ಪ್ರಕರಣದಲ್ಲಿ 157 ಮಂದಿ ಅಂತರ್‌ರಾಜ್ಯ ಪ್ರಯಾಣಿಕರಾಗಿದ್ದು 135 ಮಂದಿಗೆ ಮಹಾರಾಷ್ಟ್ರ ಮೂಲದಿಂದಲೇ ಸೋಂಕು ಹರಡಿದೆ.

ಯಾದಗಿರಿಯ 66, ಕಲಬುರಗಿಯ 16ರಲ್ಲಿ 15, ಉಡುಪಿಯ 22ರಲ್ಲಿ 20, ಬೀದರ್‌ನ 14, ರಾಯಚೂರಿನ 15ರಲ್ಲಿ 5, ಬಾಗಲಕೋಟೆ, ಉತ್ತರ ಕನ್ನಡದ ತಲಾ 3, ಮೈಸೂರು 5, ಹಾಸನ 2, ಶಿವಮೊಗ್ಗದ 10ರಲ್ಲಿ 8, ಕೋಲಾರದ 6 ಪ್ರಕರಣದಲ್ಲಿ 3 ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗಿವೆ. ಬೆಂಗಳೂರಿನ 17 ಪ್ರಕರಣದ ಪೈಕಿ 6 ಐಎಲ್‌ಐ ಲಕ್ಷಣ, 3 ಮಹಾರಾಷ್ಟ್ರ ಹಿನ್ನೆಲೆ, 2 ತಮಿಳುನಾಡು ಹಿನ್ನೆಲೆ, 1 ಸಂಪರ್ಕ, 1 ಸಾರಿ, ಸಂಪರ್ಕ ಪತ್ತೆಯಾಗದ 4 ಪ್ರಕರಣಗಳು ವರದಿಯಾಗಿವೆ. ದಾವಣಗೆರೆಯ 9 ಪ್ರಕರಣದಲ್ಲಿ ರಾಜಸ್ಥಾನ 3, ಸೋಂಕಿತರ ಸಂಪರ್ಕದಿಂದ 5 ಮಂದಿಗೆ ಸೋಂಕು ಹರಡಿದೆ.

ವಯಸ್ಸು ಸಾವಿನ ಸಂಖ್ಯೆ

70+ 16

60-70 24

50-60 18

40-50 9

30-40 2

20-30 2

10-20 1